ಸೋಮವಾರ, ಅಕ್ಟೋಬರ್ 18, 2021
25 °C

ಸ್ವಯಂಪ್ರೇರಣೆಯಿಂದ ಲಂಚ ಕೊಟ್ಟರೆ ಸ್ವೀಕರಿಸಬಹುದು: ಬಿಎಸ್‌ಪಿ ಶಾಸಕಿ ವಿವಾದ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್: ಸ್ವಯಂಪ್ರೇರಣೆಯಿಂದ ಲಂಚ ನೀಡಲು ಬಂದರೆ ಸ್ವೀಕರಿಸಬಹುದು ಎಂದು ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕಿ ರಾಮಬಾಯಿ ಸಿಂಗ್ ಅವರು ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಗ್ ಮತ್ತು ದಾಮೋಹ್ ಜಿಲ್ಲೆಯ ಪಥಾರಿಯಾದ ಕೆಲವು ಗ್ರಾಮಸ್ಥರ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಣವನ್ನು ಬಿಡುಗಡೆ ಮಾಡಲು ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗ್ರಾಮಸ್ಥರಿಂದ ಪಡೆದ ಲಂಚದ ಹಣವನ್ನು ಹಿಂದಿರುಗಿಸುವಂತೆ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಡಿಯೊವನ್ನು ಭಾನುವಾರ ಪಥರಿಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾತೌವಾ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ವೈರಲ್ ವಿಡಿಯೊ ತುಣುಕಿನಲ್ಲಿ ಸಿಂಗ್, ಕೋಣೆಯಲ್ಲಿ ಕುಳಿತು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಣ ಬಿಡುಗಡೆ ಮಾಡಲು ಯಾರು ಲಂಚ ಕೊಟ್ಟರು ಎಂದು ಕೇಳುತ್ತಾರೆ. ಆಗ, ನೆಲದ ಮೇಲೆ ಕುಳಿತಿದ್ದ ಕನಿಷ್ಠ ಆರು ಗ್ರಾಮಸ್ಥರು ಮೇಲೆದ್ದು, ಪ್ರತಿಯೊಬ್ಬರೂ ₹ 5,000 ರಿಂದ ₹ 9,000 ಕೊಟ್ಟಿದ್ದಾಗಿ ಹೇಳುತ್ತಾರೆ. ಯಾರಿಗೆ ಹಣ ಕೊಟ್ಟಿದ್ಧೀರಿ ಎಂದು ಶಾಸಕರು ಮುಂದುವರಿದು ಕೇಳುತ್ತಾರೆ. ಕೋಣೆಯಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ಇಬ್ಬರು (ಪಂಚಾಯತ್ ಕಾರ್ಯದರ್ಶಿ ಮತ್ತು ರೋಜಗಾರ್ ಸಹಾಯಕ್) ಕಡೆಗೆ ಗ್ರಾಮಸ್ಥರು ಬೆರಳು ತೋರಿಸುತ್ತಾರೆ.

ನಂತರ, ಶಾಸಕರು ಅಧಿಕಾರಿಗಳತ್ತ ತಿರುಗಿ, ‘ನೀವು ₹ 500 ಅಥವಾ ₹ 1,000 ತೆಗೆದುಕೊಂಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಅದು ಹಿಟ್ಟಿನಲ್ಲಿ ಉಪ್ಪಿನಂತೆ ಕೆಲಸ ಮಾಡುತ್ತದೆ. ಆದರೆ, ನೀವು ಸಂಪೂರ್ಣ ಥಾಲಿ(ಊಟ)ಯನ್ನು ಕಸಿದುಕೊಂಡರೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ ’ಎಂದು ಸಿಂಗ್ ಹೇಳಿದ್ದಾರೆ. ಈ ಗ್ರಾಮಸ್ಥರು ತಿಂಗಳಿಗೆ ₹ 6,000 ಗಳಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಜೀವನೋಪಾಯಕ್ಕಾಗಿ ದೂರದ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಅಂತಹವರ ಸಂಪಾದನೆಯನ್ನು ಅಧಿಕಾರಿಗಳು ಕಸಿದಿದ್ದು ಸರಿಯಲ್ಲ. ಕೂಡಲೇ, ಗ್ರಾಮಸ್ಥರಿಗೆ ಹಣವನ್ನು ಹಿಂದಿರುಗಿಸುವಂತೆ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಪಂಚಾಯತ್ ಕಾರ್ಯದರ್ಶಿ ಮತ್ತು ರೋಜಗಾರ್ ಸಹಾಯಕ್ ಅತ್ಯಲ್ಪ ಸಂಬಳ ಪಡೆಯುತ್ತಾರೆ. ಹಣದುಬ್ಬರ ಹೆಚ್ಚಾಗಿದೆ. ದೂರದಿಂದ ಹಳ್ಳಿಗಳಿಗೆ ಹೋದಾಗ ಯಾರಾದರೂ ಸ್ವಯಂಪ್ರೇರಣೆಯಿಂದ ಹಣ ನೀಡಿದರೆ ಅವರು ಸ್ವೀಕರಿಸಬಹುದು. ಆದರೆ, ಗ್ರಾಮಸ್ಥರಿಗೆ ₹ 9,000 ಅಥವಾ ₹ 10,000 ನೀಡುವಂತೆ ಒತ್ತಾಯಿಸಬಾರದು ಎಂದು ನಾನು ಹೇಳಿದೆ’ಎಂದು ಶಾಸಕಿ ಹೇಳಿದ್ದಾರೆ. ಮಧ್ಯಪ್ರದೇಶ ಮತ್ತು ಭಾರತದಾದ್ಯಂತ ಸರ್ಕಾರಿ ವ್ಯವಸ್ಥೆಯಲ್ಲಿ ಇದೇ ಪರಿಸ್ಥಿತಿ ಚಾಲ್ತಿಯಲ್ಲಿದೆ ಎಂದಿದ್ದಾರೆ.

ಘಟನೆ ಕುರಿತಂತೆ ನಮಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ದಾಮೋಹ್ ಜಿಲ್ಲಾಧಿಕಾರಿ ಎಸ್ ಕೃಷ್ಣ ಚೈತನ್ಯ ಹೇಳಿದ್ಧಾರೆ. ವೈರಲ್ ವಿಡಿಯೊ ಆಧರಿಸಿ ಗ್ರಾಮಸ್ಥರು ಮಾಡಿರುವ ಆರೋಪಗಳ ಬಗ್ಗೆ ವಿಚಾರಣೆಗೆ ಪಥರಿಯಾ ಜನಪದ್ ಸಿಇಒಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು