ಮಂಗಳವಾರ, ಸೆಪ್ಟೆಂಬರ್ 28, 2021
25 °C

ಕಾಂಗ್ರೆಸ್‌ ಇಲ್ಲದ ಮೈತ್ರಿಕೂಟದ ಬಗ್ಗೆ ಯೋಜಿಸಲಾಗದು, ಆದರೆ: ಟಿಎಂಸಿ ಹೇಳುವುದೇನು?

ಸೌಮ್ಯ ದಾಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕಾಂಗ್ರೆಸ್‌ ಅನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸಲು ತೃಣಮೂಲ ಕಾಂಗ್ರೆಸ್‌ ಬಯಸುವುದಿಲ್ಲ. ಆದರೆ, ಕಾಂಗ್ರೆಸ್‌ ಎಲ್ಲ ಪಕ್ಷಗಳನ್ನು ಗೌರವಯುತವಾಗಿ ಕಾಣಬೇಕು ಎಂದು ಟಿಎಂಸಿಯು ತನ್ನ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ಬರೆದುಕೊಂಡಿದೆ. ತೃತೀಯ ರಂಗ ರಚಿಸುವ ಇರಾದೆ ತನಗಿಲ್ಲ ಎಂದಿರುವ ಟಿಎಂಸಿ, ಕೇಂದ್ರದಲ್ಲಿ ಈಗಿರುವ ಸರ್ಕಾರಕ್ಕೆ ಪರ್ಯಾಯವೊಂದನ್ನು ರೂಪಿಸುವ ಅಗತ್ಯ ಇದೆ ಎಂದು ಹೇಳಿದೆ.

‘ಕಾಂಗ್ರೆಸ್ ಇಲ್ಲದ ಮೈತ್ರಿ ಕೂಟದ ಬಗ್ಗೆ ನಾವು ಎಂದಿಗೂ ಮಾತನಾಡುವುದಿಲ್ಲ. ತೃತೀಯ ಶಕ್ತಿಯ ಬದಲು, ವಿರೋಧ ಪಕ್ಷಗಳ ಗುರಿ ಬಿಜೆಪಿಗೆ ಪರ್ಯಾಯವಾದುದನ್ನು ರೂಪಿಸುವುದಾಗಿರಬೇಕು’ ಎಂದು ಟಿಎಂಸಿ ಹೇಳಿದೆ.

ಸಂಸತ್ತಿನಲ್ಲಿ ಗುರುವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಿಂದ ದೂರು ಉಳಿದದ್ದನ್ನೂ ಉಲ್ಲೇಖಿಸಿರುವ ಟಿಎಂಸಿ, ‘ಇಂತಹ ಕಾರ್ಯಕ್ರಮಗಳಿಗೆ ನಮ್ಮನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸಬೇಕು ಎಂದು,‘ ಹೇಳಿದೆ.

‘ದೇಶದ ಹಿತಾಸಕ್ತಿಗಾಗಿ ಬಿಜೆಪಿಯೇತರ, ಜಾತ್ಯತೀತ ಪಕ್ಷಗಳ ಕಡೆಗಿನ ಕಾಂಗ್ರೆಸ್ ಪ್ರಾಮಾಣಿಕತೆ ನಿಸ್ಸಂದೇಹ’ ಎಂದೂ ಟಿಎಂಸಿ ಹೇಳಿಕೊಂಡಿದೆ. ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ರಾಹುಲ್ ಗಾಂಧಿ ಸಮ್ಮುಖದಲ್ಲಿ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

'ಬಿಜೆಪಿ ವಿರುದ್ಧದ ನಮ್ಮ ನಿಲುವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಈಗಾಗಲೇ ಖಚಿತಪಡಿಸಿದ್ದೇವೆ. ಆದರೆ ನಿರ್ದಿಷ್ಟ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಅನುಸರಿಸಿ ಪ್ರತಿಪಕ್ಷದ ಒಗ್ಗಟ್ಟಿನ ಪ್ರದರ್ಶನ ಆಗಬೇಕು ಎಂದು ನಾವು ಬಯಸುತ್ತೇವೆ. ಮೆರವಣಿಗೆಯಲ್ಲಿ ಭಾಗವಹಿಸಲು ಹಠಾತ್ ಆಹ್ವಾನ ನೀಡುವಂಥ ಕ್ರಮಗಳು ತೃಣಮೂಲ ಕಾಂಗ್ರೆಸ್‌ಗೆ ಹಿಡಿಸುವುದಿಲ್ಲ,‘ ಎಂದು ಟಿಎಂಸಿ ಹೇಳಿದೆ.

ಕಾಂಗ್ರೆಸ್ಸಿನೆಡೆಗೆ ಕೋಪ ಮತ್ತು ಸ್ನೇಹಪೂರ್ವಕ ಮನೋಭಾವಗಳೆರಡನ್ನೂ ಪ್ರದರ್ಶಿಸಿರುವ ಟಿಎಂಸಿ, ಬಂಗಾಳದಲ್ಲಿ ಏಕಾಂಗಿಯಾಗಿ ಬಿಜೆಪಿಯನ್ನು ಮಣಿಸಿದ್ದಾಗಿಯೂ, ಎಡ-ಕಾಂಗ್ರೆಸ್ ಮೈತ್ರಿ ಶೂನ್ಯ ಸಾಧನೆ ಮಾಡಿದ್ದಾಗಿಯೂ ಕಾಂಗ್ರೆಸ್‌ಗೆ ನೆನಪು ಮಾಡಿಕೊಟ್ಟಿದೆ.

ಟಿಎಂಸಿಯು ಮೈತ್ರಿಕೂಟದ ನಾಯಕತ್ವದ ಬಗ್ಗೆ ಚಿಂತಿಸುವುದಿಲ್ಲ. ಆದರೆ, ಬಿಜೆಪಿಯ ಜನವಿರೋಧಿ ನೀತಿಗಳನ್ನು ಕೊನೆಗೊಳಿಸುವುದರ ಕುರಿತು ಚಿಂತನೆ ನಡೆಸುತ್ತದೆ ಎಂದು ಹೇಳಿದೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ತನ್ನ ಪಾತ್ರವನ್ನು ನಿರ್ವಹಿಸಲು ವಿಫಲವಾದ ಕಾರಣದಿಂದಾಗಿಯೇ ಬಿಜೆಪಿ ಭಾರೀ ಜನಾದೇಶದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು ಎಂದು ಟಿಎಂಸಿ ಪ್ರತಿಪಾದಿಸಿದೆ.

‘ಒಂದು ವೇಳೆ ಕಾಂಗ್ರೆಸ್‌ ತನ್ನನ್ನು ನಂಬಿಕಸ್ಥ, ಪರ್ಯಾಯ ಶಕ್ತಿ ಎಂದು ಸಾಬೀತು ಮಾಡಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೋರಾಡಿದ್ದಿದ್ದರೆ ಬಿಜೆಪಿ ಇಷ್ಟು ಸ್ಥಾನಗಳನ್ನು ಪಡೆಯುತ್ತಿರಲೇ ಇಲ್ಲ. ಆದ್ದರಿಂದ, ಪ್ರತಿಪಕ್ಷದ ಒಗ್ಗಟ್ಟನ್ನು ರೂಪಿಸುವ ಪ್ರಯತ್ನಗಳಲ್ಲಿನ ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕು, ”ಎಂದು ಟಿಎಂಸಿ ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು