ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸಿಎಂ ವಿರುದ್ಧದ ಸಾಕ್ಷ್ಯಗಳನ್ನು ಕೈಬಿಡಲು ₹30 ಕೋಟಿ ಆಫರ್: ಸ್ವಪ್ನಾ ಸುರೇಶ್

Last Updated 9 ಮಾರ್ಚ್ 2023, 16:35 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಕೈಬಿಟ್ಟು ಸಂಧಾನ ಮಾಡಿಕೊಳ್ಳಲು ಆಡಳಿತಾರೂಢ ಸಿಪಿಐ(ಎಂ) ಸರ್ಕಾರ ನನಗೆ ₹30 ಕೋಟಿ ಆಫರ್ ಕೊಟ್ಟಿದೆ ಎಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.

ವಿಜಯ್ ಪಿಳ್ಳೆ ಎಂಬ ಮಧ್ಯವರ್ತಿ ನನ್ನ ಬಳಿ ಸಂಧಾನಕ್ಕೆ ಆಗಮಿಸಿದ್ದ ಎಂದು ಸ್ವಪ್ನಾ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದಾರೆ.

ವಿಜಯ್ ಅವರನ್ನು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಕಳುಹಿಸಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ತನಗೆ ಒಪ್ಪಿಸುವಂತೆ ವಿಜಯ್ ಕೇಳಿದರು. ಅಲ್ಲದೆ, ಸಿಎಂ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವಂತೆಯೂ ಸೂಚಿಸಿದ್ದರು ಎಂದು ಸ್ವಪ್ನಾ ಹೇಳಿದ್ದಾರೆ.

‘ಜೈಪುರ ಅಥವಾ ಹರಿಯಾಣಕ್ಕೆ ಹೋಗಲು ಅವರು ನನಗೆ ಸೂಚಿಸಿದ್ದರು. ಫ್ಲಾಟ್ ಸೇರಿದಂತೆ ಅದಕ್ಕೆ ಬೇಕಾದ ಎಲ್ಲ ನೆರವನ್ನೂ ನೀಡುವುದಾಗಿ ಹೇಳಿದ್ದರು. ಅಲ್ಲದೆ, ನಕಲಿ ಪಾಸ್‌ಪೋರ್ಟ್ ಸಿದ್ಧವಾದ ಬಳಿಕ ದೇಶ ಬಿಟ್ಟು ತೆರಳಲೂ ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದರು’ಎಂದು ಸ್ವಪ್ನಾ ಹೇಳಿದ್ದಾರೆ.

ಸಂದರ್ಶನದ ನೆಪದಲ್ಲಿ ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಪಿಳ್ಳೆ, ಬಳಿಕ ಸಂಧಾನಕ್ಕಾಗಿ ಬಂದಿರುವುದಾಗಿ ತಿಳಿಸಿದರು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರು ಎರಡು ದಿನ ಕಾಲಾವಕಾಶ ನೀಡಿದ್ದಾರೆ. ತಪ್ಪಿದಲ್ಲಿ ನಿಮ್ಮ ಜೀವಕ್ಕೆ ಅಪಾಯ ಆಗಬಹುದು ಎಂದು ಪಿಳ್ಳೆ ಹೇಳಿರುವುದಾಗಿ ಸ್ವಪ್ನಾ ಬಹಿರಂಗಪಡಿಸಿದ್ದಾರೆ.

‘ಸಿಎಂ ಪಿಣರಾಯಿ ವಿಜಯನ್ ಅಥವಾ ಅವರ ಕುಟುಂಬದೊಂದಿಗೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ, ಅವರ ರಾಜಕೀಯ ಜೀವನವನ್ನು ನಾಶಮಾಡಲು ಬಯಸುವುದಿಲ್ಲ, ಸಿಪಿಎಂ ಕಾರ್ಯದರ್ಶಿ ಗೋವಿಂದನ್ ನನ್ನ ಪ್ರಾಣ ತೆಗೆಯುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ನಿರ್ಧಾರ ತೆಗೆದುಕೊಳ್ಳಲು ಮಧ್ಯವರ್ತಿ ನನಗೆ ಎರಡು ದಿನಗಳ ಕಾಲಾವಕಾಶ ನೀಡುತ್ತೇನೆ ಎಂದು ಹೇಳಿದ್ದಾರೆ. ನಾನು ಅವರ ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸದ ವಿವರಗಳನ್ನು ನನ್ನ ವಕೀಲರಿಗೆ ಕಳುಹಿಸಿದ್ದೇನೆ’ಎಂದು ಸ್ವಪ್ನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT