ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ನಿಗ್ರಹಕ್ಕೆ ಸದಾ ಸಿದ್ಧ: ಸಿಆರ್‌ಪಿಎಫ್‌ನ ಐಜಿ ಎಂ.ಎಸ್‌ ಭಾಟಿಯ

Last Updated 5 ಮಾರ್ಚ್ 2023, 9:17 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸದಾ ಸಜ್ಜಾಗಿರುತ್ತದೆ. ವಹಿಸಿದ ಕೆಲಸವನ್ನು ಅರೆಸೈನಿಕ ಪಡೆಯು ಸಮರ್ಥವಾಗಿ ನಿಭಾಯಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು ವರ್ಷಗಳಿಂದ ರಕ್ಷಣಾ ಪರಿಸ್ಥಿತಿಯೂ ಸುಧಾರಿಸಿದೆ. ರಕ್ಷಣಾ ‍‍ಪಡೆಗಳು ನಿರಂತರವಾಗಿ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದು, ಸದಾ ಜಾಗರೂಕವಾಗಿವೆ ಎಂದು ಅವರು ಹೇಳಿದರು.

‘ಬಂಡಾಯ ನಿಗ್ರಹದಂತಹ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ, ತರಬೇತಿ ಮತ್ತು ತಂತ್ರಜ್ಞಾನ ಸಿಆರ್‌ಪಿಎಫ್‌ ಬಳಿ ಇದೆ’ ಎಂದು ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್‌ ಜನರಲ್ (ಐಜಿ) ಎಂ.ಎಸ್‌ ಭಾಟಿಯಾ ಪಿಟಿಐಗೆ ತಿಳಿಸಿದರು.

ಕಾಶ್ಮೀರದ ಒಳನಾಡಿನಿಂದ ಸೇನೆಯನ್ನು ಹಂತ ಹಂತವಾಗಿ ಹಿಂಪಡೆಯಲು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಕಳೆದ ತಿಂಗಳು ಪ್ರಕಟವಾಗಿದ್ದ ಮಾಧ್ಯಮ ವರದಿಗೆ ಸಂಬಂಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು, ನೀತಿ ನಿರೂಪಣೆಗೆ ಸಂಬಂಧಿಸಿದ ಉನ್ನತ ಮಟ್ಟದ ವಿಷಯ. ನಮಗೆ ನೀಡಿದ ಆದೇಶದಂತೆ ನಾವು ನಡೆದುಕೊಳ್ಳುತ್ತೇವೆ. ನಾವು ಈಗ ಸೇನೆ ಮತ್ತು ಜಮ್ಮು– ಕಾಶ್ಮೀರ ಪೊಲೀಸರೊಂದಿಗೆ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ‘ ಎಂದು ಭಾಟಿಯಾ ಹೇಳಿದರು.‌

ಕಾಶ್ಮೀರದಲ್ಲಿನ ಬಂಡಾಯ ನಿಗ್ರಹ ಕಾರ್ಯಾಚರಣೆಗಾಗಿ 2005ರಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಗೆ ಬದಲಾಗಿ ಸಿಆರ್‌ಪಿಎಫ್‌ ಅನ್ನು ನಿಯೋಜಿಸಲಾಗಿತ್ತು.

370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆಯ ರಾಜ್ಯದಲ್ಲಿನ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ ಎಂದು ಭಾಟಿಯಾ ಹೇಳಿದರು.

‘ನಾವು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಅದು ಹಿಂದಿಗಿಂತಲೂ ಕಡಿಮೆಯಾಗಿದೆ. ಭಯೋತ್ಪಾದನ ಪ್ರಕರಣಗಳ ಸಂಖ್ಯೆ ಮತ್ತು ನೇಮಕಾತಿ ಕುಗ್ಗಿದೆ. ಭಯೋತ್ಪಾದನಾ ಚಟುವಟಿಕೆ ಕುಗ್ಗಿದೆ. ಕೆಲವು ದಾರಿತಪ್ಪಿದ ಯುವಕರು ಚಟುವಟಿಕೆಗಳಲ್ಲಿ ತೊಡಗಿರಬಹುದು. ಅವರನ್ನೂ ಅದರಿಂದ ಹೊರಗೆ ತರಲಾಗುತ್ತದೆ’ ಎಂದು ಸಿಆರ್‌ಪಿಎಫ್‌ನ ಐಜಿ ವಿವರಿಸಿದರು.

ಗುಪ್ತಚರ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಅಪರಾಧಿಗಳ ಮೇಲೆ ಕಣ್ಣಿಡಲು ನೆರವಾಗುತ್ತಿದೆ ಎಂದರು.

ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿಆರ್‌ಪಿಎಫ್‌ ತನ್ನ ತಂತ್ರಗಾರಿಕೆಯನ್ನು ಆಧುನೀಕರಿಸುತ್ತಲೇ ಇರುತ್ತದೆ ಎಂದು ಅವರು ಹೇಳಿದರು.

ಬುಲೆಟ್-ಪ್ರೂಫ್ ವಾಹನಗಳು, ವಾಲ್-ಥ್ರೂ ರಾಡಾರ್‌ಗಳು ಮತ್ತು ಡ್ರೋನ್‌ಗಳು ರಕ್ಷಣಾ ಪಡೆಗೆ ಸೇರ್ಪಡೆಯಾದ ಹೊಸ ಗ್ಯಾಜೆಟ್‌ಗಳಾಗಿವೆ. ಇವು ಭಯೋತ್ಪಾದಕರ ವಿರುದ್ಧದ ನಿಖರ ಕಾರ್ಯಾಚರಣೆಗೆ ನೆರವಾಗುತ್ತವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT