ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ: ದುರ್ಗೆಯ ಪೂಜಾ ಮಂಟಪದಲ್ಲಿ ರೈತರ ಚಳವಳಿ ಅನಾವರಣ

ಬೃಹತ್‌ ಟ್ರ್ಯಾಕ್ಟರ್‌ ಭಿತ್ತಿಚಿತ್ರ ಮೂಲಕ ಮೃತ ರೈತರ ಸ್ಮರಣೆ
Last Updated 6 ಅಕ್ಟೋಬರ್ 2021, 12:02 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಈ ವರ್ಷ ಕೋಲ್ಕತ್ತದ ಪ್ರಸಿದ್ಧ ದುರ್ಗೆಯ ಪೂಜೆ ವೇಳೆ ನಿರ್ಮಿಸುವ ಪೂಜಾ ಮಂಟಪ ಮತ್ತು ಭಿತ್ತಿಚಿತ್ರಗಳು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿಯನ್ನು ಅಕ್ಷರಶಃ ಪ್ರತಿಬಿಂಬಿಸಿದೆ.

ಇಲ್ಲಿ ಉತ್ತರ ಪ್ರದೇಶದ ಲಖಿಂಪುರ–ಖೇರಿ ಪ್ರದೇಶದಲ್ಲಿ ರೈತರ ಮೇಲೆ ನಡೆದ ಹಿಂಸಾಚಾರವೂ ಭಿತ್ತಿಚಿತ್ರಗಳಲ್ಲಿ ಬಿಂಬಿತವಾಗಿದೆ.

ನಗರದ ಉತ್ತರದ ಅಂಚಿನಲ್ಲಿರುವ ಪ್ರದೇಶದ ಭಾರತ್‌ ಚಕ್ರ ಮಂಟಪದ ಪ್ರವೇಶದ್ವಾರದಲ್ಲಿ ರೈತರ ಹೋರಾಟವನ್ನು ಚಿತ್ರಿಸುವ ಬೃಹತ್‌ ಟ್ರ್ಯಾಕ್ಟರ್‌ವೊಂದರ ಪ್ರತಿಕೃತಿಯನ್ನು ಇರಿಸಲಾಗಿದೆ.

ಇಲ್ಲಿನ ಕಾಲುದಾರಿಯಲ್ಲಿ ಕಾರಿನ ರೇಖಾಚಿತ್ರವನ್ನು ಮತ್ತು ದಾರಿಯಲ್ಲಿ ರೈತ ಬಿದ್ದಿರುವ ಚಿತ್ರವನ್ನು ಬಿಡಿಸಲಾಗಿದೆ. ಇವುಗಳ ಜೊತೆಗೆ ‘ಕಾರು ತನ್ನ ದೂಳಿನ ಸುಳಿಯನ್ನು ಬಿಟ್ಟು ಹೋಗುತ್ತದೆ, ರೈತ ಅದರಲ್ಲಿ ಸಿಲುಕಿಕೊಳ್ಳುತ್ತಾನೆ’ ಎಂಬ ಬಂಗಾಳಿ ಭಾಷೆಯ ಸಾಲುಗಳು ರೈತರ ದಯನೀಯ ಸ್ಥಿತಿಯನ್ನು ಧ್ವನಿಸಿವೆ.

ರೈತರ ಪ್ರತಿಭಟನೆಯ ನಂತರದ ದೃಶ್ಯಗಳನ್ನು ಸಂಕೇತಿಸುವ ನೂರಾರು ಚಪ್ಪಲಿಗಳು ಮಂಟಪದ ನೆಲದಲ್ಲಿ ಬಿದ್ದಿವೆ. ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದಾಗ ಅವರು ದಿಕ್ಕಾಪಾಲಾಗಿ ಓಡಿದ್ದರು. ಈ ವೇಳೆ ಅವರ ಬೂಟುಗಳು ಅಲ್ಲಿ ಬಿದ್ದಿದ್ದವು.

ಪ್ರಮುಖ ಮಂಟಪವನ್ನು ಭತ್ತದ ಪ್ರತಿಕೃತಿಗಳಿಂದ ಅಲಂಕರಿಸಲಾಗಿದೆ. ಅದರ ಮೇಲ್ಛಾವಣಿಯಿಂದಲೂ ಭತ್ತದ ಸಸಿಗಳನ್ನು ಇಳಿಬಿಡಲಾಗಿದೆ.

ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಹೆಸರನ್ನು ಕಾಗದದಲ್ಲಿ ಬರೆದು ಟ್ರ್ಯಾಕ್ಟರ್‌ ಮೇಲೆ ಅಂಟಿಸಲಾಗಿದೆ ಎಂದು ಈ ಪರಿಕಲ್ಪನೆಯನ್ನು ಸಿದ್ಧಗೊಳಿಸಿರುವ ಕಲಾವಿದ ಅನಿರ್ಬನ್‌ ದಾಸ್‌ ಪಿಟಿಐಗೆ ತಿಳಿಸಿದರು.

‘ರೈತರು ಬಂಧನದಿಂದ ಮುಕ್ತರಾಗುವ ಬಯಕೆಯನ್ನು ಟ್ರ್ಯಾಕ್ಟರ್‌ ಸಂಕೇತಿಸುತ್ತದೆ’ ಎಂದು ಅವರು ವಿವರಿಸಿದರು.

‘ನಾವು ರೈತರು, ಭಯೋತ್ಪಾದಕರಲ್ಲ, ರೈತರು ಆಹಾರ ಸೈನಿಕರು’ ಎಂದು ಮಂಟಪದಲ್ಲಿಯ ಇನ್ನೊಂದು ಪೋಸ್ಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ರೈತರ ಮೇಲಿನ ಶೋಷಣೆಯನ್ನು ಎತ್ತಿ ತೋರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪೂಜಾ ಸಮಿತಿಯ ಕಾರ್ಯದರ್ಶಿ ಪ್ರತೀಕ್ ಚೌಧರಿ ಹೇಳಿದರು.

‘ನಮ್ಮ ಮಂಟಪವು ಬಹುತೇಕ ತಯಾರಾಗಿದ್ದಾಗ ಲಖಿಂಪುರ–ಖೇರಿ ಹಿಂಸಾಚಾರ ನಡೆದಿದೆ. ಅದಕ್ಕೆ ನಾವು ಅದನ್ನೂ ಸೇರಿಸಿದ್ದೇವೆ’ ಎಂದೂ ಅವರು ಹೇಳಿದರು.

ಕೋಲ್ಕತ್ತಾದ ದುರ್ಗಾ ಪೂಜಾ ಮಂಟಪಗಳು ಪ್ರಸ್ತುತ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಚಿತ್ರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT