ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಭಾವನೆಗಳನ್ನು ಹಂಚಿಕೊಂಡ ಮುಂಬೈ ವೈದ್ಯೆಯ ವಿಡಿಯೊ ವೈರಲ್

Doctor breaks down, video went viral
Last Updated 21 ಏಪ್ರಿಲ್ 2021, 14:10 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌ ರೋಗಿಗಳ ಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಮುಂಬೈನ ಸಾಂಕ್ರಾಮಿಕ ರೋಗಗಳ ತಜ್ಞೆ ಡಾ.ತೃಪ್ತಿ ಗಿಲದಾ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ನಾವು ಅಸಹಾಯಕರಾಗಿದ್ದೇವೆ. ಇಂಥ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ. ಜನರು ತುಂಬಾ ಭಯಭೀತರಾಗಿದ್ದಾರೆ. ಬಹಳಷ್ಟು ವೈದ್ಯರಂತೆ ನಾನೂ ಅಸಹಾಯಕಳಾಗಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಹೇಳುತ್ತಿರುವುದನ್ನು ನೀವು ಅರ್ಥ ಮಾಡಿಕೊಂಡರೆ ನನಗೆ ಸಮಾಧಾನವಾಗಬಲ್ಲದು. ದಯಮಾಡಿ ಯಾರೂ ಕೋವಿಡ್–19 ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ’ ಎಂದು ಡಾ.ತೃಪ್ತಿ ವಿಡಿಯೊದಲ್ಲಿ ಹೇಳಿದ್ದಾರೆ.

‘ಮುಂಬೈನಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆ, ಆಮ್ಲಜನಕದ ಕೊರತೆ ಆಗಿದೆ. ಈ ಸಾಂಕ್ರಾಮಿಕ ರೋಗ ಮುಂಬೈಗೆ ಅತ್ಯಂತ ಕೆಟ್ಟ ಪರಿಸ್ಥಿತಿ ತಂದೊಡ್ಡಿದೆ. ನಾವು ಬಹಳಷ್ಟು ರೋಗಿಗಳನ್ನು ನಿಭಾಯಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದೇವೆ. ಇಂಥ ಸ್ಥಿತಿಯನ್ನು ನಾವ್ಯಾರೂ ಊಹಿಸಿರಲಿಲ್ಲ’ ಎಂದು ಗದ್ಗದಿತರಾಗಿದ್ದಾರೆ.

‘ದಯಮಾಡಿ ಎಚ್ಚರಿಕೆಯಿಂದ ಇರಿ. ಮಾಸ್ಕ್ ಧರಿಸಿ, ಕೋವಿಡ್ ಲಸಿಕೆ ತೆಗೆದುಕೊಳ್ಳಿ’ ಎಂದು ಅವರು ವಿಡಿಯೊದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

‘ದೇಹ ಸಾಯುತ್ತದೆ. ಆದರೆ, ಆತ್ಮವಲ್ಲ...’

ಮುಂಬೈ: ‘ದೇಹ ಸಾಯುತ್ತದೆ. ಆದರೆ, ಆತ್ಮವಲ್ಲ’

–ಇವು ಕೋವಿಡ್‌–19 ಸೋಂಕಿನಿಂದ ಸಾಯುವ ಕೆಲವೇ ಗಂಟೆಗಳ ಮುನ್ನ ಮುಂಬೈನಸೆವ್ರಿ ಟಿ.ಬಿ ಆಸ್ಪತ್ರೆಯ ಕ್ಷಯರೋಗ ತಜ್ಞೆ ಡಾ.ಮನೀಷಾ ಜಾಧವ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಸಾಲುಗಳು.

‘ಬಹುಶಃ ಇದು ನನ್ನ ಕೊನೆಯ ಗುಡ್‌ಮಾರ್ನಿಂಗ್. ಈ ವೇದಿಕೆಯಲ್ಲಿ ನಾನು ಮತ್ತೆ ನಿಮ್ಮನ್ನು ಭೇಟಿಯಾಗದಿರಬಹುದು. ಎಲ್ಲರೂ ಜೋಪಾನವಾಗಿರಿ. ದೇಹ ಸಾಯುತ್ತದೆ. ಆದರೆ, ಆತ್ಮವಲ್ಲ. ಆತ್ಮವು ಅಮರವಾದದ್ದು’ ಎಂದು ಡಾ.ಮನೀಷಾ ಜಾಧವ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಹೀಗೆ ಬರೆದ ಕೆಲವೇ ಗಂಟೆಗಳಲ್ಲಿ ಖಂಡಿವಲಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮನೀಷಾ ಕೊನೆಯುಸಿರೆಳೆದರು.

ಅವರಿಗೆ ಪತಿ ಡಾ.ನವನಾಥ್ ಜಾಧವ್ ಹಾಗೂ ಒಬ್ಬ ಪುತ್ರನಿದ್ದಾನೆ. ಡಾ.ಮನೀಷಾ ಸೆವ್ರಿ ಟಿ.ಬಿ ಆಸ್ಪತ್ರೆಯಲ್ಲಿ ಎರಡು ದಶಕಗಳಿಂದ ಕ್ಲಿನಿಕಲ್ ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT