ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಮತದಾನದ ಹಕ್ಕು ಕುರಿತ ಪಿಐಎಲ್ ನಿರಾಕರಿಸಿದ ದೆಹಲಿ ಹೈಕೋರ್ಟ್

Last Updated 17 ಮಾರ್ಚ್ 2023, 12:38 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ‘ವ್ಯಕ್ತಿಯೊಬ್ಬನಿಗೆ ಮತದಾನ ಮಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ನಾವು ಕಾನೂನು ರೂಪಿಸುವವರಲ್ಲ. ನಾವು ಅಂಥ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ಯಾವುದೇ ಅವಕಾಶವಿದೆಯೇ?’ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.

ಅರ್ಜಿದಾರರಾದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ಅರ್ಜಿಯನ್ನು ದಂಡದೊಂದಿಗೆ ವಜಾಗೊಳಿಸುವುದಾಗಿ ನ್ಯಾಯಪೀಠವು ಎಚ್ಚರಿಕೆ ನೀಡಿದ ಬಳಿಕ, ಅರ್ಜಿದಾರರು ಅರ್ಜಿಯನ್ನು ಹಿಂಪಡೆದರು.

‘ಕಡ್ಡಾಯ ಮತದಾನವು ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಖಚಿತಪಡಿಸುತ್ತದೆ. ಪ್ರಜಾಪ್ರಭುತ್ವದ ಗುಣಮಟ್ಟವನ್ನು ಸುಧಾರಿಸಿ, ಮತದಾನದ ಹಕ್ಕನ್ನು ಭದ್ರಪಡಿಸುತ್ತದೆ’ ಎಂದು ಪ್ರತಿಪಾದಿಸಿ ಅಶ್ವಿನಿ ಕುಮಾರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರು ವಾಹನ ಚಾಲಕರ ಉದಾಹರಣೆ ನೀಡಿ, ‘ವಾಹನ ಚಾಲಕರಲ್ಲಿ ಅನೇಕರು ಇತರ ನಗರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ, ಅವರಿಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಅದು ಅವರ ಹಕ್ಕು ಮತ್ತು ಆಯ್ಕೆಯಾಗಿದೆ’ ಎಂದು ಹೇಳಿತು.

‘ಚೆನ್ನೈನಲ್ಲಿ ಕೆಲಸದ ನಿಮಿತ್ತ ಇರುವ ವ್ಯಕ್ತಿಯೊಬ್ಬರಿಗೆ ನಾವು ಅವರ ಸ್ವಂತ ಊರಾದ ಶ್ರೀನಗರಕ್ಕೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ. ನಿಮ್ಮ ವಾದ ಹೇಗಿದೆಯೆಂದರೆ, ಆ ವ್ಯಕ್ತಿಯನ್ನು ಪೊಲೀಸರು ಹೇಗಾದರೂ ಹುಡುಕಿ, ಆತನನ್ನು ಶ್ರೀನಗರಕ್ಕೆ ಕಳುಹಿಸಬೇಕು ಎಂಬಂತಿದೆ’ ಎಂದು ಹೇಳಿದ ನ್ಯಾಯಪೀಠವು, ‘ಈ ವಿಚಾರದಲ್ಲಿ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನಿರ್ದೇಶಕ ನೀಡಲು ಸಾಧ್ಯವಿಲ್ಲ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT