ಗುರುವಾರ , ಜೂನ್ 17, 2021
22 °C

ಬಂಗಾಳದ ವಿಶ್ವ ಭಾರತಿ ವಿ.ವಿ. ಆವರಣದಲ್ಲಿ ಗಲಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಉದ್ರಿಕ್ತರ ಗುಂಪೊಂದು ಪಶ್ಚಿಮ ಬಂಗಾಳದ ಬಿರ್ಭುಮ್‌ ಜಿಲ್ಲೆಯ ಬೋಲಾಪುರದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಗಲಭೆ ನಡೆಸಿದೆ.

‘ವಿಶ್ವವಿದ್ಯಾಲಯದ ಮೈದಾನದಲ್ಲಿ ಪ್ರತಿ ವರ್ಷವೂ ಚಳಿಗಾಲದ ಅವಧಿಯಲ್ಲಿ ಪೌಶ್‌ ಮೇಳ ಆಯೋಜಿಸಲಾಗುತ್ತದೆ. ಈ ಬಾರಿ ಮೇಳ ರದ್ದು ಮಾಡುವುದಾಗಿ ತಿಳಿಸಿದ್ದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಮೈದಾನದ ಸುತ್ತಲೂ ತಡೆಗೋಡೆ ನಿರ್ಮಿಸಲು ಮುಂದಾಗಿತ್ತು. ಇದರಿಂದ ಕೆರಳಿದ ಸುಮಾರು 4,000 ಮಂದಿಯನ್ನೊಳಗೊಂಡ ಗುಂಪು ಗಲಭೆ ನಡೆಸಿದೆ’ ಎಂದು ವಿಶ್ವವಿದ್ಯಾಲಯದ ಮೂಲಗಳಿಂದ ತಿಳಿದುಬಂದಿದೆ.

ಬೋಲಾಪುರ ನಗರದಲ್ಲಿ ಸೋಮವಾರ ಬೆಳಿಗ್ಗೆ 10ಗಂಟೆಗೆ ಜಮಾವಣೆಗೊಂಡ ಜನರು ಮೈದಾನದಲ್ಲಿ ನಿರ್ಮಿಸಲಾಗುತ್ತಿದ್ದ ತಡೆಗೋಡೆಯನ್ನು ಕೆಡವಿದರು. ಕೆಲ ಉಪಕರಣಗಳನ್ನೂ ಧ್ವಂಸಗೊಳಿಸಿದರು. ಜೊತೆಗೆ ವಿಶ್ವವಿದ್ಯಾಲಯದ ಪ್ರವೇಶ ದ್ವಾರವೊಂದನ್ನು ಜೆಸಿಬಿಯಿಂದ ನೆಲಕ್ಕುರುಳಿಸಿದರು ಎಂದು ಹೇಳಲಾಗಿದೆ. 

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಪರಿಸ್ಥಿತಿ ಶಾಂತವಾಗುವವರೆಗೂ ವಿಶ್ವವಿದ್ಯಾಲಯದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಘಟನೆ ಸಂಬಂಧ ಮಾಹಿತಿ ನೀಡುವಂತೆ ರಾಜ್ಯಪಾಲ ಜಗದೀಪ್‌ ಧನಕರ್‌ ಕೇಳಿದ್ದರು. ಅದು ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವುದರಿಂದ ರಾಜ್ಯ ಸರ್ಕಾರವು ಅದರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದರು.

‘ಸ್ಥಳೀಯ ಮುಖಂಡರು ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿ ರಾಜಿ ಸಂಧಾನ ಮಾಡುವಂತೆ ಬಿರ್ಭುಮ್‌ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದ್ದೇನೆ. ಘಟನಾ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ರಾಜ್ಯಪಾಲ ಧನಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.