ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ವರ್ಸಸ್ ಸುವೇಂದು ಅಧಿಕಾರಿ: ನಂದಿಗ್ರಾಮ ಚುನಾವಣೆಯತ್ತ ಎಲ್ಲರ ಚಿತ್ತ

Last Updated 1 ಏಪ್ರಿಲ್ 2021, 4:42 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಗೆ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಒಂದು ಕಾಲದ ಆಪ್ತ ಸುವೇಂದು ಅಧಿಕಾರಿ ಸ್ಪರ್ಧಿಸಿರುವ ನಂದಿಗ್ರಾಮ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಇದರ, ಜೊತೆಗೆ ಬಂಗಾಳದಲ್ಲಿ ಕೆಲ ಸೆಲಬ್ರಿಟಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

2016ರ ಚುನಾವಣೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಬೆನ್ನೆಲುಬಾಗಿ ನಿಂತು ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವದ ವಿರುದ್ಧ ಬಂಡೆದ್ದು, ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು, ಶತಾಯಗತಾಯ ಇಲ್ಲಿ ಕಮಲ ಅರಳಿಸುವ ಪಣ ತೊಟ್ಟಿದ್ದಾರೆ. ತಮ್ಮ ಮಾಜಿ ನಾಯಕಿಗೆ ದೊಡ್ಡ ಸವಾಲಾಗಿದ್ದಾರೆ. ಟಿಎಂಸಿ ಭದ್ರಕೋಟೆಯಾಗಿದ್ದ ನಂದಿಗ್ರಾಮದಲ್ಲಿ ಬಿಜೆಪಿ ಪರ್ವ ಆರಂಭಿಸುವ ಸವಾಲು ಹಾಕಿದ್ದಾರೆ. ಇನ್ನು, ಮಮತಾ ಬ್ಯಾನರ್ಜಿ ಅವರು ತಮ್ಮ ಕಡು ವಿರೋಧಿ ಪಕ್ಷ ಎಂದೇ ಪರಿಗಣಿಸುವ ಬಿಜೆಪಿ ಪಕ್ಷ ಸೇರಿರುವ ತಮ್ಮ ಮಾಜಿ ಆಪ್ತ ಸುವೇಂದು ಅಧಿಕಾರಿ ಅವರನ್ನು ಸೋಲಿಸಿಯೇ ತೀರಬೇಕೆಂಬ ಹಠದಲ್ಲಿದ್ದಾರೆ ದೀದಿ ಮಮತಾ.

ನಂದಿಗ್ರಾಮ ಕ್ಷೇತ್ರದ ಚುನಾವಣೆ ಡಿಸೆಂಬರ್ 2006ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯನ್ನು ನೆನಪಿಸುತ್ತದೆ. ಅಂದು ಸಿದ್ದರಾಮಯ್ಯ,ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಉಪಚುನಾವಣೆ ನಡೆಯಿತು.ಭಾರೀ ಪೈಪೋಟಿ ಬಳಿಕ ಸಿದ್ದರಾಮಯ್ಯಗೆದ್ದಿದ್ದರು. ಚಾಮುಂಡೇಶ್ವರಿಯಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎದುರು ಭಾರೀ ಪ್ರಚಾರ ನಡೆಸಿದ್ದರು. ಆ ಉಪಚುನಾವಣೆ ಮುಖ್ಯಮಂತ್ರಿ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿತ್ತು.

ನಂದಿಗ್ರಾಮದಲ್ಲಿ ಸದ್ಯ ಅದೇ ಪರಿಸ್ಥಿತಿ ಇದೆ. ಇಲ್ಲಿ ಮುಖ್ಯಮಂತ್ರಿಯೇ ಅಭ್ಯರ್ಥಿಯಾಗಿರುವುದು ಮತ್ತೊಂದು ವಿಶೇಷ. ನಂದಿಗ್ರಾಮದ ಮನೆ ಮಗನಂತಿರುವ ಸುವೇಂದು ಅಧಿಕಾರಿ, ಮಮತಾ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಒಂದೊಮ್ಮೆ, ಮಮತಾ ಅವರು ಸುವೇಂದು ಅವರನ್ನು ಸೋಲಿಸಿದರೆ, ಪ್ರಬಲ ಪೈಪೋಟಿ ನೀಡಿದ ಹೆಮ್ಮೆ ಉಳಿಯಲಿದೆ. ಮಮತಾ ಸೋತರೆ, ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ದೊಡ್ಡ ಅಗ್ನಿಪರೀಕ್ಷೆ ಗೆದ್ದಂತಾಗುತ್ತದೆ.

ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ ಜೊತೆಗೆ ಮತ್ತಷ್ಟು ಸೆಲೆಬ್ರಿಟಿಗಳ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಪೂರ್ವ ಮೇದಿನಿಪುರ ಜಿಲ್ಲೆಯ ಚಂಡಿಪುರ ಕ್ಷೇತ್ರದಿಂದ ಬಂಗಾಳಿ ಚಲನಚಿತ್ರ ತಾರೆ ಸೋಹಮ್ ಚಕ್ರವರ್ತಿಯನ್ನು ಟಿಎಂಸಿ ಕಣಕ್ಕಿಳಿಸಿದೆ.

ಖ್ಯಾತ ನಟ ಸಯಂತಿಕಾ ಬಂಡೋಪಾಧ್ಯಾಯ ಬಂಕುರಾ ಜಿಲ್ಲೆಯ ಬಂಕುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಪದಾರ್ಪಣೆ ಮಾಡಿದ್ಧರೆ. ನಟ ಹಿರಾನ್ ಚಟರ್ಜಿ ಪಶ್ಚಿಮ ಮೇದಿನಿಪುರ ಜಿಲ್ಲೆಯ ಖರಗ್‌ಪುರ್ ಸದರ್ ಸ್ಥಾನದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಅವರು ಪೂರ್ವ ಮೇದಿನಿಪುರ ಜಿಲ್ಲೆಯ ಮೊಯ್ನಾದಿಂದ ಕಣಕ್ಕಿಳಿದಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ರಾಜಕೀಯ ಚಿತ್ರಣ ಬದಲು: ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 30 ಸ್ಥಾನಗಳ ಪೈಕಿ 21 ಸ್ಥಾನಗಳನ್ನು 2016 ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆದ್ದಿತ್ತು. ಇದರಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿಸನ್ನಿವೇಶ ಬದಲಾಗಿತ್ತು.

2016 ರ ವಿಧಾನಸಭಾ ಚುನಾವಣೆಯಲ್ಲಿ ಈ 30 ಕ್ಷೇತ್ರಗಳಲ್ಲಿ 7.38% ರಷ್ಟಿದ್ದ ಬಿಜೆಪಿಯ ಮತ ಹಂಚಿಕೆ ಪಾಲು ಕಳೆದ ಲೋಕಸಭಾ ಚುನಾವಣೆಯಲ್ಲಿ 42.40% ಕ್ಕೆ ಏರಿತ್ತು. ಟಿಎಂಸಿಯ ಮತ ಪಾಲು 2016 ರ ವಿಧಾನಸಭಾ ಚುನಾವಣೆಯಲ್ಲಿ 47.88% ರಿಂದ 2019 ರ ಲೋಕಸಭಾ ಚುನಾವಣೆಯಲ್ಲಿ 45.89%ಕ್ಕೆ ಇಳಿದಿತ್ತು.

ನಂದಿಗ್ರಾಮ ಏಕೆ ಹೆಸರುವಾಸಿ?: 2007ರಲ್ಲಿ ಇಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದಿದ್ದ ಹಿಂದೆ ಚಳವಳಿ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ’ತೋಮರ್‌ ನಾಮ್‌, ಅಮರ್‌ ನಾಮ್‌, ನಂದಿಗ್ರಾಮ, ನಂದಿಗ್ರಾಮ’ (ನಿನ್ನ ಹೆಸರು, ನನ್ನ ಹೆಸರು, ನಂದಿಗ್ರಾಮ, ನಂದಿಗ್ರಾಮ) ಎನ್ನುವ ಘೋಷಣೆಯೊಂದಿಗೆ ಹೋರಾಟ ಆರಂಭವಾಗಿತ್ತು. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಎಡರಂಗ ಸರ್ಕಾರದ ವಿರುದ್ಧ ಸಾಮಾಜಿಕವಾಗಿಯೂ ಮತ್ತು ರಾಜಕೀಯವಾಗಿಯೂ ಒಗ್ಗೂಡಿ ಪ್ರಬಲ ಹೋರಾಟವೇ ನಡೆಸಿದ್ದು ಅಪರೂಪವಾಗಿತ್ತು.

ನಂದಿಗ್ರಾಮ ಚಳವಳಿಗೆ ನೇತೃತ್ವವಹಿಸಿದ್ದ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಎಲ್ಲರ ಕಣ್ಮಣಿಯಾಗಿದ್ದರು. ಮಮತಾ ಬ್ಯಾನರ್ಜಿ ಅವರ ನಿರ್ದೇಶನದಂತೆ ಹೋರಾಟಗಳು ನಡೆದಿದ್ದವು. ವಿಶೇಷ ಆರ್ಥಿಕ ವಲಯದಲ್ಲಿ ಇಂಡೊನೇಷ್ಯಾದ ಸಲಿಂ ಸಮೂಹ ಸ್ಥಾಪಿಸಲು ಉದ್ದೇಶಿಸಿದ್ದ ‘ಕೆಮಿಕಲ್‌ ಹಬ್‌’ ವಿರುದ್ಧ ಸಾಮೂಹಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಟಿಎಂಸಿ ಲೋಕಸಭಾ ಸದಸ್ಯರಾಗಿರುವ ಅಧಿಕಾರಿ ಅವರ ತಂದೆ ಸಿಸಿರ್‌ ಅವರು ‘ಭೂಮಿ ಉಚ್ಚೇದ್‌ ಪ್ರತಿರೋಧ ಕಮಿಟಿ’ಯ (ಬಿಯುಪಿಸಿ) ಸಂಚಾಲಕರಾಗಿದ್ದರು. ವಿಭಿನ್ನ ರಾಜಕೀಯ ಸಿದ್ಧಾಂತ ಹೊಂದಿದವರು ಈ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಟಿಎಂಸಿ, ಕಾಂಗ್ರೆಸ್‌, ಎಡಪಕ್ಷಗಳ ಧೋರಣೆಯಿಂದ ಅಸಮಾಧಾನಗೊಂಡಿದ್ದವರು ಒಗ್ಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಸಂದರ್ಭದಲ್ಲಿ ನಡೆದ ಪೊಲೀಸರ ಗುಂಡಿನ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದರು.

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಮೂಲೆಗುಂಪಾದ ಬಳಿಕ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಬಿಜೆಪಿ ನಡುವೆ ಈಗ ನಂದಿಗ್ರಾಮಕ್ಕಾಗಿ ರಾಜಕೀಯ ಹೋರಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT