ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಣು ಬಿಗಿತದಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಸಾವು: ಮರಣೊತ್ತರ ಪರೀಕ್ಷಾ ವರದಿ

Last Updated 10 ಮೇ 2022, 8:21 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಸಾವಿಗೆ ನೇಣು ಬಿಗಿದುಕೊಂಡಿರುವುದೇ ಕಾರಣ ಎಂದು ಮರಣೊತ್ತರ ಪರೀಕ್ಷೆ ವರದಿ ಹೇಳಿದೆ.

ಕೋಲ್ಕತ್ತದ ಕಮಾಂಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಕೋರ್ಟ್ ಶುಕ್ರವಾರ ನೀಡಿದ್ದ ಆದೇಶದ ಅನುಸಾರ ಮರಣೋತ್ತರ ‍ಪರೀಕ್ಷೆ ನಡೆಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಆರ್. ಭಾರದ್ವಾಜ್ ಅವರಿದ್ದ ನ್ಯಾಯಪೀಠವು ಚೌರಾಸಿಯಾ ನೇಣು ಬಿಗಿದಿರುವುದು ಮತ್ತು ಅವರ ಕುತ್ತಿಗೆಯಲ್ಲಿ ಗಾಯವಾಗಿರುವ ಬಗ್ಗೆ ಶುಕ್ರವಾರದ ಆದೇಶದಲ್ಲಿ ಉಲ್ಲೇಖಿಸಿತ್ತು.

ಮರಣೋತ್ತರ ಪರೀಕ್ಷೆಯ ವರದಿಯನ್ನು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ಅಡ್ವೊಕೇಟ್ ಜನರಲ್ ಎಸ್.ಎನ್. ಮುಖರ್ಜಿ ಅವರಿಗೆ ಹಸ್ತಾಂತರಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ. ಜತೆಗೆ, ಚೌರಾಸಿಯಾ ಅವರ ಆಂತರಿಕ ಅವಯವಗಳ ಮಾದರಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ನೀಡುವಂತೆಯೂ ಸೂಚಿಸಿದೆ.

ಉತ್ತರ ಕೋಲ್ಕತ್ತದ ಕಾಶಿಪುರ ಪ್ರದೇಶದಲ್ಲಿ ಅರ್ಜುನ್ ಚೌರಾಸಿಯಾ ಅವರ ಮೃತದೇಹ ನಿರ್ಜನ ಕಟ್ಟಡವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಮ್ಮ ಕಾರ್ಯಕರ್ತನನ್ನು ಹತ್ಯೆ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಅದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭೇಟಿಯಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಚೌರಾಸಿಯಾ ಅವರ ಮನೆಗೂ ಭೇಟಿ ನೀಡಿದ್ದ ಅಮಿತ್ ಶಾ, ಸಾವಿಗೆ ಸಂಬಂಧಿಸಿ ರಾಜ್ಯ ಸರ್ಕಾರದಿಂದ ವರದಿ ಕೇಳಿರುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT