ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾಗೆ ಮಾಡು ಇಲ್ಲವೇ ಮಡಿ ಹೋರಾಟ: ಬಿಜೆಪಿಯ ತಂತ್ರಗಳಿಗೆ ಟಿಎಂಸಿ ಪ್ರತಿತಂತ್ರ

ಮೃದು ಹಿಂದುತ್ವ, ಬಂಗಾಳದ ಮಗಳು ಕಾರ್ಯತಂತ್ರ
Last Updated 10 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಸರಿಯಾಗಿ ಹತ್ತು ವರ್ಷಗಳ ಹಿಂದೆ ಕಮ್ಯುನಿಸ್ಟ್‌ ಭದ್ರಕೋಟೆಯನ್ನು ಭೇದಿಸಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ, ಈಗಿನ ವಿಧಾನಸಭಾ ಚುನಾವಣೆಯು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ.

ಪಶ್ಚಿಮ ಬಂಗಾಳವನ್ನು ಅತ್ಯಂತ ದೀರ್ಘಾವಧಿ ಆಳಿದ್ದ ಕಮ್ಯುನಿಸ್ಟ್ ಪಕ್ಷಗಳನ್ನು ಸೋಲಿಸಲು, ಬೀದಿಗಿಳಿದು ಮಮತಾ ಅವರು ಉಗ್ರ ಹೋರಾಟ ನಡೆಸಿದ್ದರು. ಈಗ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಅವರು ಅಂಥದ್ದೇ ಉಗ್ರ ಹೋರಾಟ ನಡೆಸಬೇಕಿದೆ.

ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಗಳನ್ನು ಎದುರಿಸುವ ಬಿಜೆಪಿಯನ್ನು ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಿ ಎದುರಿಸಬೇಕಿದೆ. ಜತೆಗೆ ಅನಿರೀಕ್ಷಿತವಾಗಿ ಟಿಎಂಸಿ ತೊರೆಯುತ್ತಿರುವ ನಾಯಕರನ್ನು ಹಾಗೂ ಪಕ್ಷದೊಳಗಿನ ಭಿನ್ನಮತವನ್ನು ಎದುರಿಸಬೇಕಿದೆ. ಇಂತಹ ಬೆಳವಣಿಗೆಗಳಿಂದ ಟಿಎಂಸಿಯನ್ನು ಮುಳುಗುತ್ತಿರುವ ಹಡಗು ಎಂದು ಪರಿಗಣಿಸಲಾಗುತ್ತಿದೆ. ಹಾಗಿದ್ದರೂ ಮಮತಾ ಅವರು ಎದೆಗುಂದಿಲ್ಲ. ಈ ಚುನಾವಣೆಯನ್ನು ಬಂಗಾಳದ ಮಗಳು ಮತ್ತು ಗುಜರಾತ್ ಮೂಲದ ಹೊರಗಿನವರ ನಡುವಣ ಹೋರಾಟ ಎಂದು ಅವರು ಬಿಂಬಿಸುತ್ತಿದ್ದಾರೆ. ಮಮತಾ ಅವರ ಈ ಉಪರಾಷ್ಟ್ರೀಯತೆಯ ನೀತಿ ಫಲ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

1998ರಲ್ಲಿ ಕಾಂಗ್ರೆಸ್‌ನಿಂದ ಕವಲೊಡೆದು ಟಿಎಂಸಿ ಜನ್ಮತಳೆದಿದ್ದರೂ, ಎಡಪಕ್ಷಗಳನ್ನು ವಿರೋಧಿಸುವುದೇ ಅದರ ಸಿದ್ಧಾಂತವಾಗಿತ್ತು. 2001 ಮತ್ತು 2006ರ ಚುನಾವಣೆಗಳಲ್ಲಿ ಸೋತರೂ ಸಿಂಗೂರು ಮತ್ತು ನಂದಿಗ್ರಾಮ ಹೋರಾಟಗಳು, 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬರುವಲ್ಲಿ ನೆರವಾದವು. 2016ರಲ್ಲಿ 201 ಕ್ಷೇತ್ರಗಳಲ್ಲಿ ಆರಿಸಿಬರುವ ಮೂಲಕ ಬಂಗಾಳದಲ್ಲಿ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರ ಹಿಡಿತ ಬಿಗಿಯಾಯಿತು. ಆದರೆ, ಬಿಜೆಪಿ ಕಾರ್ಯತಂತ್ರವು 2019ರ ಲೋಕಸಭಾ ಚುನಾವಣೆಯಲ್ಲಿ ಫಲನೀಡಿತು. 42ರಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಟಿಎಂಸಿಗಿಂತ ನಾಲ್ಕು ಸ್ಥಾನಗಳಷ್ಟೇ ಕಡಿಮೆ. ಅಲ್ಲಿಂದ ಬಿಜೆಪಿಯ ಬಲ ಹೆಚ್ಚಾದರೆ, ಟಿಎಂಸಿಯ ಬಲಕುಂದಿತು.

‘2016ರ ಚುನಾವಣೆಯೂ ನಮಗೆ ಕಷ್ಟವಾಗಿರಲಿಲ್ಲ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಧಿಕಾರದ ಬಲ ಮತ್ತು ಹಣದ ಬಲವನ್ನು ಬಳಸುತ್ತಿರುವ ಕಾರಣ ಈಗಿನ ಚುನಾವಣೆ ಅತ್ಯಂತ ಸವಾಲಿನದ್ದು’ ಎಂದಿದ್ದಾರೆ ಪಕ್ಷದ ವಕ್ತಾರ ಸೌಗತಾ ರಾಯ್.

ಬಿಜೆಪಿಯನ್ನು ಎದುರಿಸಲು ಮಮತಾ ಅವರು ಹಲವು ತಂತ್ರಗಳ ಮೊರೆ ಹೋಗಿದ್ದಾರೆ. ಪಕ್ಷವು ಈ ಚುನಾವಣೆಯನ್ನು ಸ್ಥಳೀಯರು ಮತ್ತು ಹೊರಗಿನವರ ಹೋರಾಟ ಎಂದು ಬಿಂಬಿಸುತ್ತಿದೆ. ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತಂದಾಗ 16 ಲಕ್ಷದಷ್ಟು ಬಂಗಾಳಿ ಜನರನ್ನು ನೋಂದಣಿಯಿಂದ ಹೊರಗೆ ಇರಿಸಲಾಗಿತ್ತು. ಇದನ್ನು ಟಿಎಂಸಿ ಚುನಾವಣೆಗೆ ಬಳಸಿಕೊಳ್ಳುತ್ತಿದೆ. ಬಿಜೆಪಿಯು ಬಂಗಾಳಿಗಳನ್ನು ಕಡೆಗಣಿಸಿತ್ತು ಎಂಬ ಭಾವನೆಯನ್ನು ಟಿಎಂಸಿ ನಾಯಕರು ಪ್ರಚಾರದ ವೇಳೆ ಮೂಡಿಸುತ್ತಿದ್ದಾರೆ. ಈ ತಂತ್ರ ಫಲ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಹಿಂದುತ್ವ ಪ್ರತಿಪಾದನೆಯ ಎದುರು ಟಿಎಂಸಿ ಮೃದುಹಿಂದುತ್ವದ ಮೊರೆ ಹೋಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದಲ್ಲಿ ಗಟ್ಟಿನೆಲೆ ಕಂಡುಕೊಂಡ ಬೆನ್ನಲ್ಲೇ ಟಿಎಂಸಿ ಹಿಂದೂಗಳ ಓಲೈಕೆಗೆ ಮುಂದಾಯಿತು. ಅರ್ಚಕರಿಗೆ ವಿಶೇಷ ವೇತನ, ಸೌಕರ್ಯಗಳನ್ನು ಘೋಷಿಸಿತು. ದುರ್ಗಾಪೂಜಾ ಮಂಡಳಿಗಳಿಗೆ ಹೆಚ್ಚಿನ ದೇಣಿಗೆಯನ್ನು ಸರ್ಕಾರದ ವತಿಯಿಂದ ನೀಡಲಾಯಿತು. ಬುಧವಾರ ಮಮತಾ ಬ್ಯಾನರ್ಜಿ ಅವರು ಚಂಡೀಪಾಠ್ಪಠಿಸಿದ್ದು ಸಹ ಈ ತಂತ್ರದ ಭಾಗವೇ. ಟಿಎಂಸಿಯು ಮುಸ್ಲಿಮರನ್ನಷ್ಟೇ ಓಲೈಸುವುದಿಲ್ಲ ಎಂಬ ಭಾವನೆ ಹುಟ್ಟಲು ಇದು ನೆರವಾಗುತ್ತದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈಗಷ್ಟೇ ಚುನಾವಣಾ ರಂಗ ಪ್ರವೇಶಿಸಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್‌) ಟಿಎಂಸಿಗೆ ಮುಳುವಾಗುತ್ತದೆ. ಟಿಎಂಸಿಯ ಮುಸ್ಲಿಂ ಮತದಾರರನ್ನು ಐಎಸ್‌ಎಫ್ ಕಸಿದುಕೊಳ್ಳುತ್ತದೆ. ಇದರಿಂದ ಬಿಜೆಪಿಗೆ ನೆರವಾಗುತ್ತದೆ ಎಂಬ ವಾದ ಒಂದು ಕಡೆ ಇದೆ. ಮುಸ್ಲಿಮರ ಮತಗಳು ವಿಭಜನೆಯಾದರೂ, ಟಿಎಂಸಿಗೆ ಅದು ನೆರವಾಗುತ್ತದೆ ಎಂದೂ ಪಕ್ಷದ ನಾಯಕರು ಹೇಳಿದ್ದಾರೆ. ‘ಮುಸ್ಲಿಮರ ಮತ ವಿಭಜನೆಯಾದರೆ, ಟಿಎಂಸಿ ಸೋಲುತ್ತದೆ. ಆಗ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂಬ ಆತಂಕ ಬಂಗಾಳಿ ಹಿಂದೂಗಳಲ್ಲಿ ಇದೆ. ಇದರಿಂದ ಅವರು ಬಿಜೆಪಿಗೆ ವಿರುದ್ಧವಾಗಿ, ಟಿಎಂಸಿ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ’ ಎಂದು ಪಕ್ಷದ ನಾಯಕರೊಬ್ಬರು ಪ್ರತಿಪಾದಿಸಿದ್ದಾರೆ.

ಬುಧವಾರದ ಬೆಳವಣಿಗೆಗಳು...

* ಸಿಪಿಎಂನ ಯುವ ವಿಭಾಗ ಡಿವೈಎಫ್‌ಐನ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಮುಖರ್ಜಿ ಅವರು ನಂದಿಗ್ರಾಮದಲ್ಲಿ ಮಮತಾ ಮತ್ತು ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಲಿದ್ದಾರೆ

* ಎಐಎಡಿಎಂಕೆ ಪಕ್ಷವು ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸಲಿರುವ 171 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಆರು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು

* ಟಿ.ಟಿ.ವಿ. ದಿನಕರನ್‌ ನೇತೃತ್ವದ ಎಎಂಎಂಕೆ ಪಕ್ಷವು 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಸಂಸದರಾದ ಎಸ್‌. ಅನ್ಬಳಗನ್‌, ಕೆ.ಸುಕುಮಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೆಲವು ಮಾಜಿ ಶಾಸಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

**
ಗುಂಪುಗಾರಿಕೆಯು ಕೇರಳ ಕಾಂಗ್ರೆಸ್ ಘಟಕದ ಅತಿದೊಡ್ಡ ಸಮಸ್ಯೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಬರಬೇಕೆಂದು ಜನ ಬಯಸುತ್ತಿದ್ದಾರೆ. ಆದರೆ, ಪಕ್ಷದ ಹಿರಿಯ ನಾಯಕರೇ ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ.
-ಪಿ.ಸಿ. ಚಾಕೋ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದವರು

**
ದೆಹಲಿ ಕಾಂಗ್ರೆಸ್ ಘಟಕದಲ್ಲಿ ವರ್ಷಗಳ ಕಾಲ ಗುಂಪುಗಾರಿಕೆಯನ್ನು ಪ್ರೋತ್ಸಾಹಿಸಿದ ವ್ಯಕ್ತಿಯೇ ಈಗ ಗುಂಪುಗಾರಿಕೆ ಬಗ್ಗೆ ಮಾತನಾಡುತ್ತಿದ್ದಾರೆ.
-ಪವನ್ ಖೇರಾ, ಕಾಂಗ್ರೆಸ್ ವಕ್ತಾರ

**
ಈ ವಾರ ಕೋಲ್ಕತ್ತಕ್ಕೆ ಹೋಗಿ ಬಿಜೆಪಿಯನ್ನು ಸೋಲಿಸುವಂತೆ ರೈತರನ್ನು ಕೋರುತ್ತೇನೆ. ಆದರೆ, ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ನಾನು ಹೋಗುವುದು ಮತ ಕೇಳಲು ಅಲ್ಲ.
-ರಾಕೇಶ್‌ ಟಿಕಾಯತ್‌, ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT