ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಬ್ಯಾನರ್ಜಿ ಹಲ್ಲೆ ಪ್ರಕರಣ: ಟಿಎಂಸಿ, ಬಿಜೆಪಿ ಜಟಾಪಟಿ

ಮಮತಾ ಹತ್ಯೆಗೆ ಸಂಚು: ತೃಣಮೂಲ ಕಾಂಗ್ರೆಸ್‌ ಆರೋಪ
Last Updated 11 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೋಲ್ಕತ್ತ:ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ನೂಕುನುಗ್ಗಲಿನಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಟಿಎಂಸಿ ಆರೋಪಿಸಿದೆ. ಇದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಕೆಲವೆಡೆ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿದ್ದಾರೆ. ಶಾಂತಿ ಕಾಪಾಡುವಂತೆ ಮಮತಾ ಅವರು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

‘ಮಮತಾ ಬ್ಯಾನರ್ಜಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ದಾಳಿ ನಡೆದ ವೇಳೆ ಅಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಇದು ಸಂಚಿನ ಭಾಗವಾಗಿತ್ತು’ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ಟಿಎಂಸಿ ದೂರು ನೀಡಿದೆ. ಟಿಎಂಸಿ ನಿಯೋಗವು ಈ ಸಂಬಂಧ ಶುಕ್ರವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ.

ಸಂಚಿನ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಮಮತಾ ಅವರು ಗಾಯಗೊಂಡ ಘಟನೆಯ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ಆಗ್ರಹಿಸಿದೆ. ಆಯೋಗಕ್ಕೆ ಮನವಿಯನ್ನೂ ಸಲ್ಲಿಸಿದೆ.

‘ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಕಾರಿನ ಬಳಿ ನನ್ನನ್ನು ನಾಲ್ಕೈದು ಮಂದಿ ತಳ್ಳಿದರು. ಆಗ ಗಾಯಗೊಂಡೆ. ಇದರ ಹಿಂದೆ ಸಂಚು ಇದೆ’ ಎಂದು ಅವರು ಬುಧವಾರ ಆರೋಪಿಸಿದ್ದರು. ಆದರೆ, ಗುರುವಾರ ಬೆಳಿಗ್ಗೆ ಮಮತಾ ಬ್ಯಾನರ್ಜಿ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ‘ನನಗೆ ತುಂಬಾ ನೋವಾಗಿದೆ. ಕೈ ಮತ್ತು ಕಾಲಿಗೆ ಗಾಯವಾಗಿದೆ. ಮೂಳೆಗಳೂ ಮುರಿದಿವೆ. ಎದೆನೋವು ಸಹ ಬಂದಿತ್ತು. ಕಾರಿನ ಬಾನೆಟ್ ಮೇಲೆ ನಿಂತು, ಜನರೊಂದಿಗೆ ಮಾತನಾಡುತ್ತಿದ್ದೆ. ಕೆಲವು ಜನರ ಗುಂಪು ನನ್ನ ಮೇಲೆ ಮುಗಿಬಿತ್ತು. ನನ್ನನ್ನು ನೆಲದತ್ತ ತಳ್ಳಲಾಯಿತು. ನನ್ನ ಕಾಲು ಸಿಲುಕಿಕೊಂಡಿತು’ ಎಂದಷ್ಟೇ ಹೇಳಿದ್ದಾರೆ.

ಮಮತಾ ಅವರ ಹೇಳಿಕೆಗಳಲ್ಲಿ ಇರುವ ವ್ಯತ್ಯಾಸವನ್ನು ಬಿಜೆಪಿ ಲೇವಡಿ ಮಾಡುತ್ತಿದೆ. ‘ಮಮತಾ ಅವರು ಬುಧವಾರ ತಮ್ಮ ಮೇಲಿನ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದರು. ಈಗ ನೂಕುನುಗ್ಗಲಿನಲ್ಲಿ ಗಾಯಗೊಂಡೆ ಎಂದು ಹೇಳಿದ್ದಾರೆ. ಆಕಸ್ಮಿಕ ಘಟನೆಯನ್ನು ದಾಳಿಯ ಸಂಚು ಎಂದು ಬಿಂಬಿಸಲು ಹೊರಟಿದ್ದಾರೆ. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು. ಆ ಸ್ಥಳದಲ್ಲಿ ಏನು ನಡೆಯಿತು ಎಂಬುದರ ವಿಡಿಯೊವನ್ನೂ ನಾವು ಬಿಡುಗಡೆ ಮಾಡಿದ್ದೇವೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಹೇಳಿದೆ.

ಕಾಂಗ್ರೆಸ್‌ ನಾಯಕ ಅಧಿರ್ ರಂಜನ್ ಚೌಧರಿ ಅವರು, ಮಮತಾ ಅವರು ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಲಿಗೆ ಗಾಯ: ಬುಧವಾರದ ಘಟನೆಯಲ್ಲಿ ಮಮತಾ ಬ್ಯಾನರ್ಜಿ ಅವರ ಎಡಗಾಲಿನ ಹಿಮ್ಮಡಿ ಮತ್ತು ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ‘ಒಂದೆರಡು ದಿನದ ಚಿಕಿತ್ಸೆಯ ನಂತರ, ಗಾಲಿಕುರ್ಚಿಯಲ್ಲಿ ಪ್ರಚಾರಕ್ಕೆ ವಾಪಸಾಗುತ್ತೇನೆ’ ಎಂದು ಮಮತಾ ಹೇಳಿದ್ದಾರೆ.

ಮಮತಾ ಅವರು ಬೇಗ ಗುಣಮುಖರಾಗಲಿ ಎಂದುಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹಾರೈಸಿದ್ದಾರೆ.

ಟಿಎಂಸಿ ಕಾರ್ಯಕರ್ತರಿಂದ ಬಲೂರ್‌ಘಾಟ್‌ನಲ್ಲಿ ಪ್ರತಿಭಟನೆ -ಪಿಟಿಐ ಚಿತ್ರ
ಟಿಎಂಸಿ ಕಾರ್ಯಕರ್ತರಿಂದ ಬಲೂರ್‌ಘಾಟ್‌ನಲ್ಲಿ ಪ್ರತಿಭಟನೆ -ಪಿಟಿಐ ಚಿತ್ರ

ಆರೋಪ ಸರಿಯಿಲ್ಲ: ಚುನಾವಣಾ ಆಯೋಗ
ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಮಾಡಿದ್ದ ಆರೋಪಗಳಿಗೆ ಚುನಾವಣಾ ಆಯೋಗವು ಖಾರವಾಗಿ ಪ್ರತಿಕ್ರಿಯಿಸಿದೆ.

‘ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರನ್ನು ಬದಲಾಯಿಸಿತ್ತು. ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಾಗ ಅಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ. ಇದು ಸಂಚಿನ ಭಾಗ’ ಎಂದು ಟಿಎಂಸಿ ಆರೋಪಿಸಿತ್ತು.

‘ಈ ಆರೋಪ ಸರಿಯಿಲ್ಲ. ರಾಜ್ಯ ಸರ್ಕಾರಗಳ ದೈನಂದಿನ ಕೆಲಸಗಳಲ್ಲಿ ಆಯೋಗವು ಹಸ್ತಕ್ಷೇಪ ಮಾಡುವುದಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷದ ಇಂತಹ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದು ಸಹಕೀಳಾಗಿ ಕಾಣುತ್ತದೆ. ಈ ಆರೋಪಗಳು ಚುನಾವಣಾ ಆಯೋಗದ ರಚನೆ ಮತ್ತು ಕಾರ್ಯನಿರ್ವಹಣೆಯನ್ನೇ ಪ್ರಶ್ನಿಸುತ್ತವೆ’ ಎಂದು ಚುನಾವಣಾ ಆಯೋಗವು ಹೇಳಿದೆ.

ಗುರುವಾರದ ಬೆಳವಣಿಗೆ...

*ಮಮತಾ ಅವರು ಚಿಕಿತ್ಸೆ ಪಡೆಯುತ್ತಿರುವ ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಬಿಜೆಪಿಯ ನಿಯೋಗವೊಂದು ಭೇಟಿ ಕೊಟ್ಟಿದೆ. ಆದರೆ, ವೈದ್ಯಕೀಯ ಕಾರಣಗಳಿಂದಾಗಿ ಮಮತಾ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಸಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ

*ಮಮತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಟಿಎಂಸಿಯ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಲಾಗಿದೆ. ಗುರುವಾರ ಸಂಜೆ ಪ್ರಣಾಳಿಕೆ ಬಿಡುಗಡೆ ಆಗಬೇಕಿತ್ತು.

* ಮಮತಾ ಮೇಲಿನ ಹಲ್ಲೆಯನ್ನು ಖಂಡಿಸಿ ಟಿಎಂಸಿ ಕಾರ್ಯಕರ್ತರು ಕೋಲ್ಕತ್ತ, ಉತ್ತರ 24 ಪರಗಣ, ಹೂಗ್ಲಿ, ಹೌರಾ, ಬಿರ್‌ಭೂಮ್‌, ದಕ್ಷಿಣ 24 ಪರಗಣ, ಜಲ್‌ಪೈಗುರಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ; ಟೈರ್‌ ಸುಟ್ಟು ರಸ್ತೆ ತಡೆ ನಡೆಸಿದ್ದಾರೆ.

*ಮಮತಾ ವಿರುದ್ಧ ನಂದಿಗ್ರಾಮದಲ್ಲಿ ಬಿಜೆಪಿ ಕಣಕ್ಕಿಳಿಸಲಿರುವ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಇಲ್ಲಿನ ಸೋನಾಚೂರ ತ್ರಿಲೋಕೇಶ್ವರ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸಿದ್ದಾರೆ. ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

*ಎಐಎಡಿಎಂಕೆ ಟಿಕೆಟ್‌ ನಿರಾಕರಿಸಿದ ಕಾರಣ ಶಾಸಕ ಎಂ.ಎಸ್‌.ಆರ್‌. ರಾಜವರ್ಮನ್‌ ಅವರು ಟಿ.ಟಿ.ವಿ. ದಿನಕರನ್‌ ಅವರ ಎಎಂಎಂಕೆ ಪಕ್ಷಕ್ಕೆ ಸೇರಿದ್ದಾರೆ. ರಾಜವರ್ಮನ್‌ ಅವರನ್ನು ಎಐಎಡಿಎಂಕೆ ಉಚ್ಚಾಟಿಸಿದೆ.

ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಇಲ್ಲ
ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್‌–19 ತಡೆ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಮುದ್ರಣವಾಗದಂತೆ ಕೋ–ವಿನ್‌ ಪೋರ್ಟಲ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಫಿಲ್ಟರ್‌ಗಳನ್ನು ಅಳವಡಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊ ಇರುವ ಬಗ್ಗೆ ತೃಣಮೂಲ ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದರಿಂದಾಗಿ, ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಪಾಲಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಆಯೋಗವು ಸೂಚಿಸಿತ್ತು.

ಆರೋಗ್ಯ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಆಯೋಗವು ಯಾವುದೇ ವ್ಯಕ್ತಿಯ ಹೆಸರು ಉಲ್ಲೇಖಿಸಿಲ್ಲ. ಬದಲಿಗೆ, ನೀತಿ ಸಂಹಿತೆಯನ್ನು ಪಾಲಿಸುವಂತೆ ಸೂಚಿಸಿದೆ ಎಂದು ಈ ಪತ್ರವ್ಯವಹಾರಗಳ ಬಗ್ಗೆ ಅರಿವು ಇರುವ ಮೂಲಗಳು ಹೇಳಿವೆ. ನೀತಿ ಸಂಹಿತೆಯನ್ನು ಪಾಲಿಸುವುದಕ್ಕಾಗಿ ಪೋರ್ಟಲ್‌ಗೆ ಫಿಲ್ಟರ್‌ಗಳನ್ನು ಅಳವಡಿಸಬಹುದು ಎಂದು ಆಯೋಗವೇ ಸಲಹೆ ನೀಡಿತ್ತು.

*
ಮಮತಾ ಬ್ಯಾನರ್ಜಿ ಅವರಿಗೆ ಝಡ್‌+ ಭದ್ರತೆ ಇದೆ. ಅವರ ವಾಹನದ ಜತೆ 12 ವಾಹನಗಳು ಇರುತ್ತವೆ. ಅಷ್ಟು ಭದ್ರತೆಯನ್ನು ಮುರಿದು, ಯಾರೋ ದಾಳಿ ನಡೆಸಿದ್ದಾದರೂ ಹೇಗೆ?
–ಪಶ್ಚಿಮ ಬಂಗಾಳ ಬಿಜೆಪಿ ಘಟಕ

*
ರಾಜಕೀಯದಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ಹೋಗಬಾರದು.
–ಎಚ್‌.ಡಿ.ದೇವೇಗೌಡ, ಜೆಡಿಎಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT