ಸೋಮವಾರ, ಜೂನ್ 14, 2021
22 °C
ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ

ಮತ್ತಿಬ್ಬರ ಹತ್ಯೆ: ಪಶ್ಚಿಮ ಬಂಗಾಳ ಬಿಜೆಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಟಿಎಂಸಿ ಗೂಂಡಾಗಳು ಶುಕ್ರವಾರ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.

‘ಮಾಲ್ಡಾ ಜಿಲ್ಲೆಯ ಮೋಠಾಬರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕುಟುಂಬದವರಾದ ಮನೋಜ್ ಮಂಡಲ್ (21) ಮಷತ್ತು ಚೈತನ್ಯ ಮಂಡಲ್ (19) ಎಂಬ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇಬ್ಬರನ್ನೂ ಹತ್ಯೆ ಮಾಡಿ, ಆನಂತರ ಮರಕ್ಕೆ ನೇಣುಹಾಕಲಾಗಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿದ್ದ ಪಕ್ಷದ ಇನ್ನೊಬ್ಬ ಕಾರ್ಯಕರ್ತ ಶುಕ್ರವಾರ ಮೃತಪಟ್ಟಿದ್ದಾನೆ’ ಎಂದೂ ಬಿಜೆಪಿ ಹೇಳಿದೆ.

ಪೂರ್ವ ವರ್ಧಮಾನ್, ಕೂಚ್‌ಬಿಹಾರ್ ಮತ್ತು ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಎಬಿವಿಪಿ ಕಾರ್ಯಕರ್ತರು ಮತ್ತು ನಾಯಕರ ಮೇಲೇಯೂ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಆರೋಪಗಳನ್ನು ಟಿಎಂಸಿ ಅಲ್ಲಗೆಳೆದಿದೆ.

ಪ್ರಮಾಣ ಪತ್ರ ಸಲ್ಲಿಸಿ: ರಾಜ್ಯದಲ್ಲಿನ ಚುನಾವಣೋತ್ತರ ಹಿಂಸಾಚಾರ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಕೋಲ್ಕತ್ತ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಐವರು ನ್ಯಾಯಮೂರ್ತಿಗಳ ಪೀಠವು ಈ ಸೂಚನೆ ನೀಡಿದೆ. ‘ಎಲ್ಲಿ ಹಿಂಸಾಚಾರ ನಡೆಯಿತು ಮತ್ತು ಅದನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಸೋಮವಾರದ ಒಳಗೆ ನೀಡಿ’ ಎಂದು ಹೈಕೋರ್ಟ್‌ ಸೂಚಿಸಿದೆ.

ರಾಜ್ಯಪಾಲರ ವರದಿಗೆ ಮನವಿ

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಪರಿಶೀಲನೆ ನಡೆಸಲು ಬಂದಿರುವ ಕೇಂದ್ರಗೃಹ ಸಚಿವಾಲಯದ ತಂಡವು ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಶುಕ್ರವಾರ ಭೇಟಿ ಮಾಡಿದೆ. ಮೇ 3ರಂದು ನಡೆದ ಹಿಂಸಾಚಾರ, ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವರದಿ ನೀಡಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಟಿಎಂಸಿ ವಿರುದ್ಧ ಅಪಪ್ರಚಾರ: ಶಿವಸೇನಾ

ಮುಂಬೈ (ಪಿಟಿಐ): ‘ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಹಿಂಸಾಚಾರ ನಡೆದಿತ್ತು. ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತ ನಂತರ ಹಿಂಸಾಚಾರ ನಡೆದಿದೆ. ಟಿಎಂಸಿ ಗೂಂಡಾಗಳು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಪ್ರಚಾರ ನಡೆಸಲಾಗುತ್ತಿದೆ’ ಎಂದು ಶಿವಸೇನಾ ಆಶ್ಚರ್ಯ ವ್ಯಕ್ತಪಡಿಸಿದೆ.

ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪಶ್ಚಿಮ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಬರೆಯಲಾಗಿದೆ. ‘ಇವುಗಳ ಹಿಂದೆ ಯಾರ ಕೈವಾಡವಿದೆ? ಈ ವಿಷಯಗಳು ಸ್ಪಷ್ಟವಾಗಬೇಕು. ಈ ಚುನಾವಣೆಯಲ್ಲಿ ಬಿಜೆಪಿ ಸೋತ ತಕ್ಷಣವೇ, ಹಿಂಸಾಚಾರ ಭುಗಿಲೇಳುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಲಾಗುತ್ತಿದೆ. ಆದರೆ ಇದೆಲ್ಲವೂ ಅಪಪ್ರಚಾರ’ ಎಂದು ಶಿವಸೇನಾ ಹೇಳಿದೆ.

'ಬಂಗಾಳದ ರಾಜ್ಯಪಾಲರಿಗೆ ಕರೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರದ ಬಗ್ಗೆ ಮಾಹಿತಿ ಪಡೆದುಕೊಂಡರು. ಅದರ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ಕೋರಿದ್ದಾರೆ. ಬಿಜೆಪಿಯೇ ಹೀಗೆ ಕಳ್ಳಾಟವಾಡುತ್ತಿದೆ’ ಎಂದು ಶಿವಸೇನಾ ಆರೋಪಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು