ನೆರೆ ರಾಜ್ಯಗಳಿಂದ ವಾಯು ಮಾಲಿನ್ಯ; ಗಡಿಯಲ್ಲಿ ಮರ ಬೆಳೆಸಲು ಸಜ್ಜಾದ ಪಶ್ಚಿಮ ಬಂಗಾಳ

ಕೋಲ್ಕತ್ತ: ನೆರೆಯ ಜಾರ್ಖಂಡ್ ಹಾಗೂ ಬಿಹಾರದಲ್ಲಿ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಪರಿಸರ ಸಚಿವ ಮಾನಸ್ ಭುನಿಯಾ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎತ್ತರಕ್ಕೆ ಬೆಳೆಯುವ ಮರಗಳನ್ನು ವಾಯು ಮಾಲಿನ್ಯದ ನಿಯಂತ್ರಣದ ಸಲುವಾಗಿ ಗಡಿಯುದ್ದಕ್ಕೂ ಬೆಳೆಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಈ ಬಗ್ಗೆ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಈ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ (ಡಬ್ಲ್ಯೂಬಿಪಿಸಿಬಿ) ಅಧ್ಯಕ್ಷ ಕಲ್ಯಾಣ್ ರುದ್ರ ಅವರು, ವಾಯು ಮಾಲಿನ್ಯದ ಪರಿವೀಕ್ಷಣೆ ಸಲುವಾಗಿ ಐಐಟಿ–ದೆಹಲಿ ಸಹಯೋಗದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿವರಿಸಿದ ಸಚಿವರು, ಕೋಲ್ಕತ್ತದ ರಸ್ತೆಗಳಲ್ಲಿ ಸಂಚರಿಸುವ ಹಾಗೂ ಒಂದನ್ನೊಂದು ಸಂಧಿಸದ ಆರು–ಏಳು ಮಾರ್ಗಗಳ ಸರ್ಕಾರಿ ಬಸ್‌ಗಳಲ್ಲಿ ವಾಯ ಮಾಲಿನ್ಯ ಪ್ರಮಾಣವನ್ನು ಅಳೆಯುವ ಸೆನ್ಸಾರ್ ಸಾಧನಗಳನ್ನು ಅಳವಡಿಸಲಾಗುವುದು. ನೈಜ ಸಮಯದ ಡೇಟಾವನ್ನು ಸಂಗ್ರಹಿಸಲು ಪ್ರತಿ ಮಾರ್ಗದಲ್ಲಿ ಹವಾನಿಯಂತ್ರಿವಲ್ಲದ (ನಾನ್ ಎಸಿ) 3–4 ಬಸ್‌ಗಳಲ್ಲಿ ಸೆನ್ಸಾರ್ ಇರಿಸಲಾಗುವುದು. ಐಐಟಿ–ದೆಹಲಿ ತಜ್ಞರ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.