ಮಂಗಳವಾರ, ಜೂನ್ 22, 2021
24 °C

ರೈತರ ಪ್ರತಿಭಟನೆ ವೇಳೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ: ಎಸ್‌ಕೆಎಂ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸಂಘಟನೆಯು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಭಾನುವಾರ ಹೇಳಿದೆ.

‘ದೆಹಲಿಯ ಗಡಿಯ ಬಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಆಕೆಯ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿ ಮಾಡಲಾಗಿದೆ. ಈ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಕೆಎಂ ಹೇಳಿಕೆ ಬಿಡುಗಡೆ ಮಾಡಿದೆ.

‘ನಾವು ಸದಾ ಮಹಿಳೆಯರ ಜತೆಗೆ ನಿಂತಿದ್ದೇವೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳ ವಿರುದ್ಧ ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ನಾವು ಇದನ್ನು ನ್ಯಾಯಯುತವಾಗಿ ಹೋರಾಡಲು ಸಿದ್ಧವಿದ್ದೇವೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಪಶ್ಚಿಮ ಬಂಗಾಳದ 26 ವರ್ಷದ ಮಹಿಳೆಯೊಬ್ಬರು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ’ಕಿಸಾನ್‌ ಸೋಷಿಯಲ್‌ ಆರ್ಮಿ’ ಎಂಬ ಹೆಸರಿನ ಸಂಘಟನೆ ಸದಸ್ಯರೊಂದಿಗೆ ದೆಹಲಿಗೆ ತೆರಳಿದ್ದರು. ಆದರೆ ತಿಕ್ರಿ ಗಡಿಯ ಬಳಿ ಆಕೆಯ ಮೇಲೆ ದೌರ್ಜನ್ಯವೆಸಗಲಾಗಿದೆ. ಈ ಘಟನೆ ನಡೆದ ಒಂದು ವಾರಗಳ ಬಳಿಕ ಆಕೆಗೆ ಕೋವಿಡ್‌ ದೃಢಪಟ್ಟಿದೆ. ಬಹದುರ್ಗಾದ ಖಾಸಗಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆದರೆ ಏಪ್ರಿಲ್‌ 30ರಂದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು’ ಎಂದು ರೈತರ ಗುಂಪುಗಳು ಹೇಳಿವೆ.

‘ನಾಲ್ಕು ದಿನಗಳ ಹಿಂದೆ ತಿಕ್ರಿಯ ಸಿಕೆಎಂ ಸಮಿತಿಯು ‘ಕಿಸಾನ್‌ ಸೋಷಿಯಲ್‌ ಆರ್ಮಿ’ ಸಂಘಟನೆಯ ಟೆಂಟ್‌ ಮತ್ತು ಬ್ಯಾನರ್‌ಗಳನ್ನು ಅಲ್ಲಿಂದ ಕಿತ್ತು ಹಾಕಿದೆ. ಅಲ್ಲದೆ ಅವರನ್ನು ರೈತರ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಬಹಿಷ್ಕರಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶೇಷ ತನಿಖಾ ದಳ ತಂಡ ರಚನೆ: ಈ ಮಧ್ಯೆ, ನತದೃಷ್ಟ ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲು ಹರಿಯಾಣ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಎಫ್‌ಐಆರ್‌ನಲ್ಲಿ ಇಬ್ಬರು ಪ್ರಮುಖ ಆರೋಪಿಗಳ ಸಹಿತ ಆರು ಮಂದಿಯನ್ನು ಹೆಸರಿಸಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು