ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಸದ ಸೊಂಕರ್‌ ಪರ ಫೇಸ್‌ಬುಕ್ ಕೆಲಸ: ಹೋರಾಟಗಾರ್ತಿ ಸೋಫಿ ಜಾಂಗ್ ಆರೋಪ

Last Updated 6 ಜೂನ್ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: 2019ರ ಚುನಾವಣೆ ವೇಳೆ ಉತ್ತರ ಪ್ರದೇಶದ ಕೌಶಾಂಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿನೋದ್ ಕುಮಾರ್ ಸೊಂಕರ್ ಅವರ ಪರವಾಗಿ ಕೆಲಸ ಮಾಡುತ್ತಿದ್ದ ವ್ಯವಸ್ಥಿತ ಜಾಲದ ಬಗ್ಗೆ ಫೇಸ್‌ಬುಕ್ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಸೋಫಿ ಜಾಂಗ್ ಅವರು ಆರೋಪಿಸಿದ್ದಾರೆ. 

ವಿವಿಧ ದೇಶಗಳ ಚುನಾವಣೆ ಮೇಲೆ ಪ್ರಭಾವ ಬೀರಿದ ಖಾತೆಗಳ ಬಗ್ಗೆ ಫೇಸ್‌ಬುಕ್ ನಿರ್ಲಕ್ಷ್ಯ ವಹಿಸಿದೆ ಎಂದು ಈ ಮೊದಲು ಆರೋಪಿಸಿದ್ದ ಜಾಂಗ್ ಅವರು, ವಿನೋದ್ ಕುಮಾರ್ ಅವರಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಆಂತರಿಕವಾಗಿ ನಡೆದ ಚರ್ಚೆಗಳ ಕಡತಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ವಿನೋದ್ ಕುಮಾರ್ ಅವರನ್ನು ಪ್ರಶಂಸಿಸುವ ಕೆಲಸ ಮಾಡುತ್ತಿದ್ದ ವ್ಯವಸ್ಥಿತ ಜಾಲದ ಬಗ್ಗೆ ಕ್ರಮ ತೆಗೆದುಕೊಳ್ಳದ ಫೇಸ್‌ಬುಕ್, ಇದೇ ರೀತಿಯ ಕೆಲಸ ಮಾಡುತ್ತಿದ್ದ ಇತರ ಮೂರು ಜಾಲಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಜಾಂಗ್ ಆರೋಪಿಸಿದ್ದಾರೆ.  

ಜಾಂಗ್ ಅವರು ಫೇಸ್‌ಬುಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ನಾಲ್ಕು ಜಾಲಗಳ ಬಗ್ಗೆ 2019ರಲ್ಲಿ ಗಮನ ಸೆಳೆದಿದ್ದರು. ಆದರೆ, ಅವರು ಕಳವಳ ವ್ಯಕ್ತಪಡಿಸಿದ್ದ ಒಂದು ಜಾಲದ ಬಗ್ಗೆ ಫೇಸ್‌ಬುಕ್‌ನ ಸಂಬಂಧಿತ ತಂಡಗಳು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆ ಜಾಲವು ಬಿಜೆಪಿ ಸಂಸದರಿಗೆ ಸಂಬಂಧಿಸಿದ್ದಾಗಿತ್ತು ಎಂದು ಕಡತಗಳು ಉಲ್ಲೇಖಿಸಿವೆ. 

ಬಿಜೆಪಿ ಸಂಸದರ ವೈಯಕ್ತಿಕ ಖಾತೆ ಜತೆ ನಂಟು ಹೊಂದಿರುವ ಹಲವು ನಕಲಿ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಮೋದನೆ ಸಿಕ್ಕಿದ್ದರೂ, ಸಂಸದರು ಸರ್ಕಾರದ ಭಾಗವಾಗಿದ್ದಾರೆ ಎಂಬ ಕಾರಣಕ್ಕೆ ಫೇಸ್‌ಬುಕ್ ಆ ಜಾಲದ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಿತು ಎಂದು ಸೋಫಿ ಅವರು ಮಾಧ್ಯಮಗಳಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.  

‘ಪಂಜಾಬ್ ಐಎನ್‌ಸಿ ಕ್ಲಸ್ಟರ್’, ‘ಕೌಶಾಂಬಿ ಕ್ಲಸ್ಟರ್’ ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದ ಇತರೆ ಎರಡು ಜಾಲಗಳು 2019ರ ಡಿಸೆಂಬರ್‌ನಲ್ಲಿ ಕೆಲಸ ಮಾಡುತ್ತಿದ್ದವು ಎಂದು ಜಾಂಗ್ ಹೇಳಿದ್ದಾರೆ. ಈ ಪೈಕಿ ‘ಕೌಶಾಂಬಿ ಕ್ಲಸ್ಟರ್ ಎಂಬ ಜಾಲವು ವಿನೋದ್ ಕುಮಾರ್ ಅವರ ವರ್ಚಸ್ಸನ್ನು ಹೆಚ್ಚಿಸುವ ಅನಧಿಕೃತ ಸಂಘಟಿತ ಚಟುವಟಿಕೆಗಳಲ್ಲಿ ತೊಡಗಿತ್ತು. ಇದನ್ನು ಸರ್ಕಾರದ ಜೊತೆ ಭಾಗೀದಾರ ಜಾಲ ಎಂಬುದಾಗಿ ಫೇಸ್‌ಬುಕ್‌ ಪರಿಗಣಿಸಿತ್ತು. ಪಂಜಾಬ್ ಐಎನ್‌ಸಿ ಕ್ಲಸ್ಟರ್ ಜಾಲವು ಕಾಂಗ್ರೆಸ್ ಮುಖಂಡರಾದ ಅರುಣ್ ಡೋಗ್ರಾ, ಸುಂದರ್ ಶ್ಯಾಮ್ ಅರೋರಾ ಹಾಗೂ ಬಲ್ವಿಂದರ್ ಸಿಂಹ ಅವರ ಜೊತೆ ನಂಟು ಹೊಂದಿತ್ತು’ ಎಂದು ಹೇಳಿದ್ದಾರೆ. 

ಪಂಜಾಬ್ ಚುನಾವಣೆ ವೇಳೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಪಂಜಾಬ್ ಕ್ಲಸ್ಟರ್ ಹೆಸರಿನ ಜಾಲವು ದೆಹಲಿಯಲ್ಲಿ ಸಿಎಎ ಪ್ರತಿಭಟನೆ ವೇಳೆ ಎಎಪಿ ಪರವಾಗಿ ಕಾರ್ಯ ನಿರ್ವಹಿಸಿತ್ತು ಎಂದಿರುವ ಜಾಂಗ್, ಇದು ಹಣಕ್ಕಾಗಿ ಕೆಲಸ ಮಾಡಿರಬಹುದು ಎಂದಿದ್ದಾರೆ.  

ಕಂಪನಿಯ ಆದ್ಯತೆಗಳ ಬಗ್ಗೆ ಜಾಂಗ್ ಮಾಡಿರುವ ಆರೋಪಗಳನ್ನು ಒಪ್ಪುವುದಿಲ್ಲ ಎಂದು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ವಕ್ತಾರರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಕೌಶಾಂಬಿ ಸಂಸದ, ಲೋಕಸಭೆ ಸ್ಪೀಕರ್ ಕಚೇರಿ ಹಾಗೂ ಸ್ಥಾಯಿ ಸಮಿತಿಯನ್ನು ಸಂಪರ್ಕಿಸಲಾಯಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.  

ಸ್ಥಾಯಿಸಮಿತಿ ವಿಚಾರಣೆ
ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿಸಮಿತಿಯ ಸದಸ್ಯರಿಗೆ ಸೋಫಿ ಜಾಂಗ್ ಅವರು ಈ ದಾಖಲೆಗಳನ್ನು ನೀಡಿದ್ದರು ಎನ್ನಲಾಗಿದೆ. ಹೀಗಾಗಿ, ಈ ವಿಚಾರವನ್ನು ಸ್ಥಾಯಿಸಮಿತಿಯು ಕೈಗೆತ್ತಿಕೊಂಡಿತು. ಫೇಸ್‌ಬುಕ್‌ನ ಅಧಿಕಾರಿಯೊಬ್ಬರು ನವೆಂಬರ್ 29ರಂದು ಸ್ಥಾಯಿಸಮಿತಿ ವಿಚಾರಣೆಗೆ ಹಾಜರಾಗಿ, ಜಾಂಗ್ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದ್ದರು. 

ಈ ಆರೋಪ ಮಾಡಿದ್ದ ಜಾಂಗ್ ಅವರನ್ನು ವಿಚಾರಣೆಗೆ ಕರೆಯುವಂತೆ ಸಮಿತಿಯ ಸದಸ್ಯರು ಪ್ರಸ್ತಾವ ಇಟ್ಟಿದ್ದರು. ಇದಕ್ಕೆ ಅನುಮತಿ ನೀಡುವಂತೆ ಲೋಕಸಭೆ ಸ್ಪೀಕರ್ ಅವರನ್ನು ಕೋರಲಾಗಿದೆ ಎನ್ನಲಾಗಿದೆ. ಈ ವಿಷಯದ ಕುರಿತು ಸಮಿತಿ ಮತ್ತೆ ಸಭೆ ನಡೆಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT