ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ತವರಿಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಗೆಬ್ರೆಯೆಸಸ್‌ ಭೇಟಿ

Last Updated 18 ಏಪ್ರಿಲ್ 2022, 2:53 IST
ಅಕ್ಷರ ಗಾತ್ರ

ಅಹಮದಾಬಾದ್‌: ವಿಶ್ವ ಆರೋಗ್ಯ ಸಂಸ್ಥೆ(ಡಬ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಗೆಬ್ರೆಯೆಸಸ್‌ ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದು, ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು ಮೂರು ದಿನ ಗುಜರಾತ್‌ ಭೇಟಿ ನಿಗದಿಯಾಗಿದೆ.

ಸೋಮವಾರ (ಏಪ್ರಿಲ್‌ 18) ಗೆಬ್ರೆಯೆಸಸ್‌ ರಾಜ್‌ಕೋಟ್‌ ತಲುಪಲಿದ್ದು, ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಮಂಗಳವಾರ ಜಾಮ್‌ನಗರ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪಾರಂಪರಿಕ ಔಷಧ ಪದ್ಧತಿ ಜಾಗತಿಕ ಕೇಂದ್ರಕ್ಕೆ (ಜಿಸಿಟಿಎಂ) ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಾಜ್‌ಕೋಟ್‌ನ ಜಿಲ್ಲಾಧಿಕಾರಿ ಅರುಣ್‌ ಮಹೇಶ್‌ ಬಾಬು ಹೇಳಿದ್ದಾರೆ.

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಪಾರಂಪರಿಕ ಔಷಧಗಳಿಗೆ ಜಾಗತಿಕ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.

ಬುಧವಾರ ಗೆಬ್ರೆಯೆಸಸ್ ಗಾಂಧಿನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಪ್ರಧಾನಿ ಮೋದಿ ಜಾಗತಿಕ ಆಯುಷ್‌ ಹೂಡಿಕೆ ಮತ್ತು ನಾವೀನ್ಯ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಶೃಂಗಸಭೆಯು ಮಹಾತ್ಮ ಮಂದಿರದಲ್ಲಿ ಆಯೋಜಿಸಲಾಗಿದ್ದು, 90 ಮಂದಿ ಶ್ರೇಷ್ಠ ಭಾಷಣಕಾರರು ಹಾಗೂ 100 ಪ್ರದರ್ಶಕರು ಭಾಗಿಯಾಗಲಿದ್ದಾರೆ.

ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜಗನ್ನಾಥ್‌ ಸಹ ಇಂದು ರಾಜ್‌ಕೋಟ್‌ ತಲುಪಲಿದ್ದಾರೆ. ಅವರನ್ನು ಸ್ವಾಗತಿಸಲು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿನ ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿ ಹಾಗೂ ಸ್ಟಾರ್ಟ್ಅಪ್‌ಗೆ ಸಂಬಂಧಿಸಿದಂತೆ ಪ್ರೇರೇಪಣೆ, ಹೂಡಿಕೆ ಸಾಧ್ಯತೆಯನ್ನು ಶೃಂಗಸಭೆಯು ತೆರೆದಿಡಲಿದೆ ಎಂದು ವರದಿಯಾಗಿದೆ.

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿರುವ ಇತರೆ ಕಾರ್ಯಕ್ರಮಗಳು:

* ಬನಾಸಕಾಂಠಾ ಜಿಲ್ಲೆಯಲ್ಲಿ ನೂತನ ಡೈರಿ ಕಾಂಪ್ಲೆಕ್ಸ್‌ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕ ಉದ್ಘಾಟನೆ; ₹600 ಕೋಟಿ ವೆಚ್ಚದಲ್ಲಿ ನಿರ್ಮಾಣ.

* ರೈತರಿಗೆ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಮಾಹಿತಿಗಳನ್ನು ನೀಡಲು ಅನುವಾಗುವ 'ಬನಾಸ್‌ ಸಮುದಾಯ ರೇಡಿಯೊ ಸ್ಟೇಷನ್‌' ಅರ್ಪಣೆ. ಆ ರೇಡಿಯೊ ಸ್ಟೇಷನ್‌ 1,700 ಗ್ರಾಮಗಳ 5 ಲಕ್ಷ ರೈತರನ್ನು ತಲುಪುತ್ತದೆ.

* ದಾಹೋದ್‌ನಲ್ಲಿ ₹22,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT