ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ವಿರುದ್ಧ ಸ್ಪರ್ಧೆಗಿಳಿದ ಪ್ರಿಯಾಂಕಾ ಯಾರು? ಅವರೇ ಏಕೆ ಬಿಜೆಪಿ ಅಭ್ಯರ್ಥಿ?

Last Updated 10 ಸೆಪ್ಟೆಂಬರ್ 2021, 13:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ನಡೆಸಿದ ಹಿಂಸಾಚಾರವೇ ಭವಾನಿಪುರ ಉಪ ಚುನಾವಣೆಯ ಚರ್ಚೆಯ ವಿಷಯ’ ಎಂದು ಬಿಜೆಪಿ ನಾಯಕಿ ಪ್ರಿಯಾಂಕಾ ಟಿಬ್ರೆವಾಲ್‌ ಶುಕ್ರವಾರ ಹೇಳಿದರು.

ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಇದೇ ಪ್ರಿಯಾಂಕ ಟಿಬ್ರೆವಾಲ್‌

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ವಿಚಾರವನ್ನು ಕಲ್ಕತ್ತ ಹೈಕೋರ್ಟ್‌ಗೆ ಕೊಂಡೊಯ್ಯಲಾಯಿತು. ಅದರ ಅರ್ಜಿದಾರರಲ್ಲಿ ಟಿಬ್ರೆವಾಲ್‌ ಕೂಡ ಒಬ್ಬರು.

ಇದರ ಜೊತೆಗೆ ಸಂಸೆರ್‌ಗಂಜ್ ಮತ್ತು ಜಂಗೀಪುರ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿಯು ಕ್ರಮವಾಗಿ ಮಿಲನ್ ಘೋಷ್ ಮತ್ತು ಸುಜಿತ್ ದಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.

ಸೆ. 30ರಂದು ಭವಾನಿಪುರವೂ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಅ.3ರಂದು ಫಲಿತಾಂಶ ಹೊರಬೀಳಲಿದೆ.

‘ಅವರು (ಮಮತಾ ಬ್ಯಾನರ್ಜಿ) ಈಗಾಗಲೇ ನಂದಿಗ್ರಾಮದಲ್ಲಿ ಸೋತಾಗಿದೆ. ಈಗ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ನಂತರ ಅವರ ಪಕ್ಷವು ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯ, ಚಿತ್ರಹಿಂಸೆ ಬಗ್ಗೆ ಕ್ಷೇತ್ರದ ಜನರಿಗೆ ತಿಳಿಸುವುದು ನನ್ನ ಕೆಲಸ. ಭವಾನಿಪುರದ ಜನರು ನನಗೆ ಮತ ನೀಡಲಿದ್ದಾರೆ. ಅವರನ್ನು ಸೋಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ,’ ಎಂದು ಟಿಬ್ರೆವಾಲ್‌ ಆತ್ಮವಿಶ್ವಾದಿಂದ ನುಡಿದಿದ್ದಾರೆ.

ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಟೆಬ್ರೆವಾಲ್‌, ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ಈ ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಬಬುಲ್‌ ಸುಪ್ರಿಯೊ ಅವರಿಗೆ ಟೆಬ್ರೆವಾಲ್‌ ಕಾನೂನು ಸಲಹೆಗಾರರಾಗಿದ್ದರು.

2020ರಿಂದ ಬಿಜೆಪಿಯ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿರುವ ಟಿಬ್ರೆವಾಲ್, 2014ರಲ್ಲಿ ಪಕ್ಷವನ್ನು ಸೇರಿದ್ದರು.

2015 ರಲ್ಲಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಸ್ಪರ್ಧಿಸುವ ಮೂಲಕ, ಟಿಬ್ರೆವಾಲ್‌ ಅವರು ಚುನಾವಣಾ ರಾಜಕೀಯದ ಅದೃಷ್ಟ ಪರೀಕ್ಷೆ ಮಾಡಿದ್ದರಾದರೂ, ಆ ಚುನಾವಣೆಯಲ್ಲಿ ಅವರು ಸೋತಿದ್ದರು.

2021ರ ವಿಧಾನಸಭಾ ಚುನಾವಣೆಯಲ್ಲಿ ಎಂಟಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿಯೂ ಟಿಎಂಸಿ ಅಭ್ಯರ್ಥಿ ವಿರುದ್ಧ 58,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಮಮತಾ ಬ್ಯಾನರ್ಜಿ ಅವರ ವಿರುದ್ಧದ ಟಿಬ್ರೆವಾಲ್‌ ಅವರ ಹೋರಾಟದ ಗುಣ ಮತ್ತು ಮಮತಾ ಬ್ಯಾನರ್ಜಿ ಅವರ ವಿರುದ್ಧ ಸ್ಪರ್ಧಿಸಲು ಬಿಜೆಪಿಯಲ್ಲಿ ಯಾರೂ ಒಲ್ಲದ ಕಾರಣಕ್ಕಾಗಿ ಟಿಬ್ರೆವಾಲ್‌ ಅವರನ್ನು ಭವಾನಿಪುರದ ಅಭ್ಯರ್ಥಿಯಾಗಿ ಬಿಜೆಪಿಯು ಆಯ್ಕೆ ಮಾಡಿದೆ ಎಂದು ಮೂಲಗಳು ಹೇಳಿವೆ. ಟಿಬ್ರೆವಾಲ್ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಚುನಾವಣೋತ್ತರ ಟಿಎಂಸಿ ಹಿಂಸಾಚಾರವನ್ನು ಕೋರ್ಟ್‌ಗೆ ಕೊಂಡೊಯ್ದ ನಂತರ ಟಬ್ರೆವಾಲ್‌ ಜನಪ್ರಿಯತೆ ಗಳಿಸಿಕೊಂಡಿದ್ದಾರೆ ಎಂದು ಬಿಜೆಪಿಯ ನಾಯಕರೇ ಹೇಳಿದ್ದಾರೆ.


ನಾವು ಪಕ್ಷದ ಕೆಲವು ನಾಯಕರನ್ನು ಅಭ್ಯರ್ಥಿಯಾಗುವಂತೆ ಸಂಪರ್ಕಿಸಿದ್ದೆವು. ಆದರೆ ಅವರೆಲ್ಲ ಸ್ಪರ್ಧಿಸಲು ನಿರಾಕರಿಸಿದರು. ಪ್ರಿಯಾಂಕಾ ಟಿಬ್ರೆವಾಲ್ ಒಬ್ಬ ನಿರ್ಭೀತ ನಾಯಕಿ. ಕಠಿಣ ಪರಿಶ್ರಮಿ, ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವವರು, ಉತ್ತಮ ವಾಗ್ಮಿ. ಮಮತಾ ಬ್ಯಾನರ್ಜಿಯನ್ನು ಸೋಲಿಸಿ, ಟೆಬ್ರೆವಾಲ್‌ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ ಮತ್ತು ಬ್ಯಾನರ್ಜಿ ದಾಖಲೆಯ ಅಂತರದಿಂದ ಗೆಲ್ಲುತ್ತಾರೆ ಎಂದು ಹಿರಿಯ ಟಿಎಂಸಿ ನಾಯಕ ಮತ್ತು ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಸೋತ ನಂತರ ಬ್ಯಾನರ್ಜಿ ರಾಜ್ಯ ವಿಧಾನಸಭೆಗೆ ಮರಳಲು ಅನುಕೂಲವಾಗುವಂತೆ ಕ್ಯಾಬಿನೆಟ್ ಮಂತ್ರಿಯಾಗಿದ್ದ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಭವಾನಿಪುರ ಕ್ಷೇತ್ರವನ್ನು ಮಮತಾ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಭವಾನಿಪುರದಲ್ಲಿ ಉಪಚುನಾವಣೆ ಬಂದಿದೆ. ಈ ಚುನಾವಣೆಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಮಮತಾ ಅವರಿಗೆ ಎದುರಾಗಿದೆ.

ಈ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಟ್ಟೋಪಾಧ್ಯಾಯ 28,000 ಮತಗಳ ಅಂತರದಿಂದ ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT