ಮಂಗಳವಾರ, ಮಾರ್ಚ್ 28, 2023
33 °C

‘ಪೆಗಾಸಸ್‌’ಗೆ ದೇಶದಲ್ಲಿ ಯಾರೆಲ್ಲ ಗುರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಪಕ್ಷ ನಾಯಕರು: ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಹೆಸರು ಈ ಪಟ್ಟಿಯಲ್ಲಿದೆ. ವಿರೋಧ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರ ನಿಪುಣನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಕಿಶೋರ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣೆಗೂ ಮೊದಲು ಮತ್ತು ನಂತರ ಇವರ ಮೇಲೆ ಕಣ್ಗಾವಲು ನಡೆಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪತ್ರಕರ್ತರು: ಒಟ್ಟು 40 ಪತ್ರಕರ್ತರ ಫೋನ್‌ ಸಂಖ್ಯೆಗಳು ಸೋರಿಕೆಯಾದ ದತ್ತಾಂಶಗಳಲ್ಲಿ ಇದೆ. ದಿ ವೈರ್, ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್, ಮಿಂಟ್, ಇಂಡಿಯನ್ ಎಕ್ಸ್‌ಪ್ರೆಸ್‌, ಟಿವಿ18 ಪತ್ರಕರ್ತರ ಮತ್ತು ಹಲವು ಪ್ರಾದೇಶಿಕ ಮಾಧ್ಯಮಗಳ ಪತ್ರಕರ್ತರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ.

ಚುನಾವಣಾ ಆಯುಕ್ತ: ನಿವೃತ್ತ ಚುನಾವಣಾ ಆಯುಕ್ತರಾದ ಅಶೋಕ್ ಲವಾಸಾ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರಿನ ಪರಿಶೀಲನೆ ನಡೆಸಿದ್ದ ಚುನಾವಣಾ ಆಯುಕ್ತರ ಸಮಿತಿಯಲ್ಲಿ ಅಶೋಕ್ ಇದ್ದರು. ಮೂರು ಸದಸ್ಯರ ಈ ಸಮಿತಿಯಲ್ಲಿ ಇಬ್ಬರು, ‘ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ತೀರ್ಪು ನೀಡಿದ್ದರು. ಅಶೋಕ್ ಅವರು, ‘ನೀತಿ ಸಂಹಿತೆ ಉಲ್ಲಂಘಿಸಲಾಗಿದೆ’ ಎಂದು ಭಿನ್ನಮತದ ತೀರ್ಪು ನೀಡಿದ್ದರು.

ಕೇಂದ್ರ ಸಚಿವರು: ಕೇಂದ್ರ ಸರ್ಕಾರದ ಈಗಿನ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿವೆ. 2018-2019ರ ಅವಧಿಯಲ್ಲಿ ಈ ಇಬ್ಬರ ಫೋನ್‌ಗಳ ಮೇಲೆ ಕಣ್ಗಾವಲು ನಡೆಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇವರಲ್ಲಿ ಅಶ್ವಿನಿ ವೈಷ್ಣವ್ ಅವರು ಈಗ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ.

ನ್ಯಾಯಮೂರ್ತಿ ಮತ್ತು ಸಿಬ್ಬಂದಿ: 2019ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯಿ ಮತ್ತು ಅವರ ಕಚೇರಿ ಸಿಬ್ಬಂದಿಯ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ. ರಂಜನ್ ಅವರು ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಬಂದ ನಂತರ, ಈ ಪಟ್ಟಿಗೆ ಅವರ ಫೋನ್‌ ಸಂಖ್ಯೆ ಸೇರ್ಪಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು