ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಇಡೀ ಯೋಜನೆ ರೂಪಿಸಿದ್ದು ಬಿಜೆಪಿ: ಎಎಪಿ

Last Updated 17 ಆಗಸ್ಟ್ 2020, 15:26 IST
ಅಕ್ಷರ ಗಾತ್ರ

ದೆಹಲಿ: ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್‌ ಬಾಗ್‌ನಲ್ಲಿ ಆಯೋಜನೆಗೊಂಡಿದ್ದ ಹೋರಾಟದ ಇಡೀ ರೂಪುರೇಷೆ ಸಿದ್ಧಪಡಿಸಿದ್ದು ಬಿಜೆಪಿ. ದೆಹಲಿ ಚುನಾವಣೆಯಲ್ಲಿ ಲಾಭ ಮಾಡಿಕೊಲ್ಳುವ ಸಲುವಾಗಿ, ಮತಗಳ ಧ್ರುವೀಕರಣಕ್ಕಾಗಿ ಬಿಜೆಪಿ ನಾಯಕರು ಈ ಹೋರಾಟವನ್ನು ರೂಪಿಸಿದ್ದರು. ಚಳವಳಿಗಾರರ ಪ್ರತಿಯೊಂದು ನಡೆಯನ್ನು ಬಿಜೆಪಿ ಹಿಂದೆ ನಿಂತು ನಿರ್ದೇಶಿಸಿತ್ತು,’ ಎಂದು ಆಮ್‌ ಆದ್ಮಿ ಪಕ್ಷ ಸೋಮವಾರ ಗಂಭೀರ ಆರೋಪ ಮಾಡಿದೆ. ಈ ಆರೋಪದ ಕಾರಣಕ್ಕೆ ಎಎಪಿ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟದ ಕಾರಣಕ್ಕೆ ಶಾಹೀನ್‌ ಬಾಗ್‌ ದೇಶದಾದ್ಯಂತ ಸುದ್ದಿ ಮಾಡಿತ್ತು. ಮುಸ್ಲಿಮ್‌ ಸಮುದಾಯದ ಸಾವಿರಾರು ಮಂದಿ ಶಾಹೀನ್‌ ಬಾಗ್‌ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಈ ಹೋರಾಟದ ಹಲವರು ಭಾನುವಾರ ದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ. ಇದೇ ಹಿನ್ನೆಲೆಯಲ್ಲಿ ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಈ ಆರೋಪ ಮಾಡಿದ್ದಾರೆ.

‘ದೆಹಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಇಡೀ ಪ್ರಚಾರ ಶಾಹೀನ್‌ ಬಾಗ್‌ ಹೋರಾಟದ ಸುತ್ತಲ ವಿಷಯಗಳತ್ತಲೇ ಕೇಂದ್ರಿಕೃತಗೊಂಡಿತ್ತು. ಈ ಹೋರಾಟದಿಂದ ಉಂಟಾಗಬಹುದಾದ ವಿವಾದದಿಂದ ಲಾಭ ಮಾಡಿಕೊಳ್ಳಬಹುದಾಗಿದ್ದ ಏಕೈಕ ಪಕ್ಷ ಬಿಜೆಪಿ ಮಾತ್ರವೇ ಆಗಿತ್ತು,’ ಎಂದು ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

‘ಶಿಕ್ಷಣ, ಆರೋಗ್ಯ, ಪರಿಸರ ಅಥವಾ ಇತರ ಅಭಿವೃದ್ಧಿ ವಿಷಯಗಳ ಚರ್ಚೆಗಳ ಆಧಾರದ ಮೇಲೆ ದೆಹಲಿ ವಿಧಾನಸಭಾ ಚುನಾವಣೆಯನ್ನು ನಡೆಸಬಹುದಿತ್ತು. ಆದರೆ ಬಿಜೆಪಿ ಶಾಹೀನ್‌ ಬಾಗ್‌ ವಿಚಾರವನ್ನಿಟ್ಟುಕೊಂಡು ಚುನಾವಣೆ ನಡೆಸಿತು‘ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಾರು ಏನು ಮಾತನಾಡಬೇಕು, ಯಾರು ಯಾರ ಮೇಲೆ ದಾಳಿ ಮಾಡಬೇಕು, ನಂತರ ಯಾರು ಪ್ರತಿದಾಳಿ ಮಾಡಬೇಕು ಎಂಬುದರ ಬಗ್ಗೆ ಬಿಜೆಪಿ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡಿತ್ತು. ಶಾಹೀನ್‌ ಬಾಗ್‌ ಹೋರಾಟ ಎಂಬುದು ಉತ್ತಮವಾಗಿ ಹೆಣೆಯಲಾಗಿದ್ದ ಒಂದು ಚಿತ್ರಕತೆಯಂತಿತ್ತು’ ಎಂದು ಭಾರದ್ವಾಜ್ ಹೇಳಿದ್ದಾರೆ.

‘ಶಾಹೀನ್‌ ಬಾಗ್ ಪ್ರತಿಭಟನೆಯ ಹಿಂದಿನ ಪ್ರಮುಖ ವ್ಯಕ್ತಿಗಳು ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಭಾನುವಾರ ಅ ಪಕ್ಷಕ್ಕೆ ಸೇರಿದ್ದಾರೆ. ಈಗ ಪ್ರಶ್ನೆ ಏನೆಂದರೆ, ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ ಜನರು ಇಂದು ಬಿಜೆಪಿಯ ಭಾಗವಾಗಿದ್ದಾರೆ ಎಂಬ ಸಂದೇಶವನ್ನು ನೀಡಲು ಆ ಪಕ್ಷ ಬಯಸುತ್ತದೆಯೇ?’ ಎಂದು ಅವರು ಕೇಳಿದರು.

‘ಶಾಹೀನ್‌ ಬಾಗ್ ಪ್ರತಿಭಟನೆ ಮತ್ತು ಅದರ ಸುತ್ತಲಿನ ವಿವಾದಗಳಿಂದಾಗಿ ದೆಹಲಿಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇಕಡಾ 18 ರಿಂದ 38 ಕ್ಕೆ ಏರಿದೆ,’ ಎಂದು ಭಾರದ್ವಾಜ್ ಅಂಕಿ ಅಂಶಗಳನ್ನು ಉಲ್ಲೇಖಿಸಿ ವಿವರಿಸಿದರು.

‘ಈ ಪ್ರತಿಭಟನೆಯಿಂದಾಗಿ, ಬಿಜೆಪಿ ಈಶಾನ್ಯ ದೆಹಲಿಯಲ್ಲಿ ಮತ ಧ್ರುವೀಕರಣ ಮಾಡಿತು. ಕೆಲವು ಸ್ಥಾನಗಳನ್ನು ಗೆದ್ದುಕೊಂಡಿತು. ನಂತರ ಗಲಭೆಗೆ ನಾಂದಿ ಹಾಡಿತು’ ಎಂದು ಭಾರದ್ವಾಜ್ ಆರೋಪಿಸಿದರು.

ಬಿಜೆಪಿ ತಿರುಗೇಟು

ಎಎಪಿ ಮಾಡಿರುವ ಈ ಗಂಭೀರ ಆರೋಪಕ್ಕೆ ಬಿಜೆಪಿಯೂ ತಿರುಗೇಟು ನೀಡಿದೆ. ‘ಈಗ ಗೊಂದಲಗಳು ನಿವಾರಣೆಯಾಗುತ್ತಿವೆ. ಮುಸ್ಲಿಂ ಸಹೋದರ ಸಹೋದರಿಯರು ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಬಯಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರೇ ಮುಸ್ಲಿಮರನ್ನು ವಿಭಜಿಸುವುದನ್ನು ನಿಲ್ಲಿಸಿ. ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿ ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುತ್ತದೆ. ಧರ್ಮ, ಜಾತಿ, ಮತ ಅಥವಾ ವಂಶಾವಳಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ,’ ಎಂದು ದೆಹಲಿ ಬಿಜೆಪಿಯ ಮುಖ್ಯಸ್ಥ ಮನೋಜ್‌ ತಿವಾರಿ ಹಿಂದಿಯಲ್ಲಿ ಟ್ವೀಟ್‌ನಲ್ಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT