ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಾರೋಪ ಹೊರಿಸಲು ವಿಳಂಬ: ವರದಿ ಸಲ್ಲಿಸಲು ಟಾಡಾ ಕೋರ್ಟ್‌ಗೆ ‘ಸುಪ್ರೀಂ’ ಸೂಚನೆ

1993ರಲ್ಲಿ ರೈಲುಗಳಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟ ಪ್ರಕರಣ
Last Updated 22 ಆಗಸ್ಟ್ 2021, 11:39 IST
ಅಕ್ಷರ ಗಾತ್ರ

ನವದೆಹಲಿ: 1993ರಲ್ಲಿ ರೈಲುಗಳಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ವಿರುದ್ಧ 10 ವರ್ಷಗಳು ಕಳೆದರೂ ದೋಷಾರೋಪ ಹೊರಿಸದಿರುವ ಕುರಿತು ಎರಡು ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ರಾಜಸ್ಥಾನದ ಅಜ್ಮೇರ್‌ನ ಟಾಡಾ ಕೋರ್ಟ್‌ಗೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಈ ಪ್ರಕರಣದ ಆರೋಪಿ, ಲಖನೌ ನಿವಾಸಿ ಹಮೀದುದ್ದೀನ್‌ ಪರ ವಕೀಲರಾದ ಶೋಯೆಬ್‌ ಆಲಮ್‌ ಹಾಗೂ ಫಾರೂಕ್‌ ರಶೀದ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

‘ಅರ್ಜಿದಾರನನ್ನು 2010ರ ಮಾರ್ಚ್‌ 18ರಿಂದ ಜೈಲಿನಲ್ಲಿರಿಸಲಾಗಿದೆ. ಅವರ ವಿರುದ್ಧ ವಿಚಾರಣೆಯನ್ನೂ ಆರಂಭಿಸಿಲ್ಲ.ಸಂವಿಧಾನದ 21ನೇ ವಿಧಿ ಹೇಳುವಂತೆ ತ್ವರಿತ ವಿಚಾರಣೆ ಮೂಲಭೂತ ಹಕ್ಕು. ಪ್ರತಿಯೊಬ್ಬ ಪ್ರಜೆಗೆ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಜೀವಿಸುವ ಹಕ್ಕನ್ನು ಸಹ ಈ ವಿಧಿ ಸೂಚ್ಯವಾಗಿ ಖಾತರಿಪಡಿಸುತ್ತದೆ’ ಎಂದು ಹಮೀದುದ್ದೀನ್‌ ಪರ ವಕೀಲರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಹಮೀದುದ್ದೀನ್‌ ಅವರನ್ನು ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಟಾಡಾ ವಿಶೇಷ ನ್ಯಾಯಾಲಯ ತಿರಸ್ಕರಿಸಿ 2019ರ ಮಾರ್ಚ್‌ 27ರಂದು ಆದೇಶಿಸಿತ್ತು. ಈ ಆದೇಶವನ್ನು ಸಹ ಅವರು ಪ್ರಶ್ನಿಸಿದ್ದಾರೆ.

‘ಪ್ರಾಥಮಿಕ ತನಿಖೆ ನಂತರ, ಪ್ರಕರಣವನ್ನು 1994ರ ಜನವರಿ 4ರಂದು ಸಿಬಿಐಗೆ ಹಸ್ತಾಂತರಿಸಲಾಯಿತು’ ಎಂದು ರಾಜಸ್ಥಾನ ಸರ್ಕಾರ ಪರ ವಕೀಲರು ವಿಚಾರಣೆ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

ಟಾಡಾ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಸಿಬಿಐ, ಆರೋಪಿ ವಿರುದ್ಧ 1994ರ ಆಗಸ್ಟ್‌ 25ರಂದು ಚಾರ್ಜ್‌ಶೀಟ್‌ ಸಲ್ಲಿಸಿತ್ತು.

ನಂತರ, ಆರೋಪಿಯು 15 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ. ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯ ಪಡೆ ಅಧಿಕಾರಿಗಳು ಆರೋಪಿಯನ್ನು2010ರಲ್ಲಿ ಲಖನೌನಲ್ಲಿ ಬಂಧಿಸಿದ್ದರು.

ಬಾಬರಿ ಮಸೀದಿ ಧ್ವಂಸಗೊಳಿಸಿದ ಘಟನೆಗೆ ಒಂದು ವರ್ಷ ಸಂದ ಸಂದರ್ಭದಲ್ಲಿ, 1993ರ ಡಿಸೆಂಬರ್‌ 5 ರ ತಡರಾತ್ರಿ ರಾಜಧಾನಿ ಎಕ್ಸ್‌ಪ್ರೆಸ್‌, ಫ್ಲೈಯಿಂಗ್ ಕ್ವೀನ್‌ ಎಕ್ಸ್‌ಪ್ರೆಸ್‌ ಹಾಗೂ ಎಪಿ ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಬಾಂಬ್‌ ಸ್ಫೋಟಗಳು ಸಂಭವಿಸಿದ್ದವು. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟು, 22 ಜನರು ಗಾಯಗೊಂಡಿದ್ದರು.

ಜಿಆರ್‌ಪಿ ಕೋಟಾ, ವಲ್ಸಾಡ್‌, ಕಾನ್ಪುರ, ಅಲಹಾಬಾದ್‌, ಮಲ್ಕಾಜ್‌ಗಿರಿ ಕೋರ್ಟ್‌ಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ, ಸಿಬಿಐಗೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT