ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೌರಿ–ಪೂಂಚ್‌: 21ನೇ ದಿನಕ್ಕೆ ಕಾಲಿಟ್ಟ ಉಗ್ರರ ಶೋಧ ಕಾರ್ಯಾಚರಣೆ

ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಹೆಚ್ಚು ಸಮಯವೇಕೆ?
Last Updated 31 ಅಕ್ಟೋಬರ್ 2021, 11:56 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಶಸ್ತ್ರಸಜ್ಜಿತ ಉಗ್ರರ ಗುಂಪನ್ನು ಪತ್ತೆ ಹಚ್ಚುವ ಶೋಧ ಕಾರ್ಯಾಚರಣೆಯು ಭಾನುವಾರ 21ನೇ ದಿನಕ್ಕೆ ಕಾಲಿಟ್ಟಿದೆ.

ಮೂರು ವಾರಗಳಿಂದ ನಡೆಯುತ್ತಿರುವ ಉಗ್ರರ ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ ಸೇನೆಯ ಒಟ್ಟು 11 ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯು ಅ.10ರ ಮಧ್ಯರಾತ್ರಿಯಿಂದ ಆರಂಭವಾಗಿದೆ.

ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವು ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಸಮೀಪದಲ್ಲಿದ್ದು, ಸೇನೆಯು ವಿಶೇಷ ತರಬೇತಿ ಪಡೆದ ಪ್ಯಾರಾ ಕಮಾಂಡೋಗಳ ತುಕಡಿಯನ್ನು ಕೂಂಬಿಂಗ್ ಕಾರ್ಯಾಚರಣೆಗೆ ನಿಯೋಜಿಸಿದ್ದು, ಡ್ರೋನ್‌ಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಉಗ್ರರ ಪತ್ತೆಗೆ ಬಳಸಲಾಗುತ್ತಿದೆ.

‘ಉಗ್ರರನ್ನು ಪತ್ತೆ ಹಚ್ಚಿ ತಟಸ್ಥಗೊಳಿಸುವಲ್ಲಿ ಅರಣ್ಯ ಪ್ರದೇಶದ ಭೌಗೋಳಿಕ ರಚನೆಯು ಭದ್ರತಾ ಪಡೆಗಳಿಗೆ ಕಠಿಣ ಸವಾಲು ಒಡ್ಡಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ದಟ್ಟವಾದ ಕಾಡುಗಳು, ಕಂದರಗಳಿಂದ ಆವೃತವಾದ ಕಡಿದಾದ ಇಳಿಜಾರುಗಳೊಂದಿಗೆ ಪರ್ವತ ಭೂಪ್ರದೇಶವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸಿದೆ. ಅರಣ್ಯ ಪ್ರದೇಶದಲ್ಲಿ ಉಗ್ರರನ್ನು ಗುರುತಿಸುವುದು ಸೇನೆಗೆ ಕಷ್ಟಕರವಾಗಿದೆ’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾರ್ ಖಾಸ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿಯಲ್ಲಿ ನಿರತರಾಗಿರುವ ಉಗ್ರಗಾಮಿಗಳು ಪಾಕಿಸ್ತಾನದಿಂದ ಪ್ರೇರಿತರಾದವರು. ಈ ಪ್ರದೇಶವು ಎಲ್ಒಸಿಗೆ ಸಮೀಪದಲ್ಲಿರುವುದರಿಂದ ಅವರು ಪಾಕಿಸ್ತಾನದ ಸೇನೆಯಿಂದ ಬೆಂಬಲವನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ’ ಎಂದೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಉಗ್ರಗಾಮಿಗಳು ಅಡಗಿರುವ ಕೆಲ ಪ್ರದೇಶಗಳಲ್ಲಿ ಅನನುಕೂಲದ ಕಾರಣದಿಂದ ಭದ್ರತಾ ಪಡೆಗಳು ಪ್ರವೇಶಿಸಲು ಸಾಧ್ಯವಾಗಿಲ್ಲ. ಅರಣ್ಯ ಪ್ರದೇಶದಲ್ಲಿನ ನೈಸರ್ಗಿಕ ಗುಹೆಗಳನ್ನು ಉಗ್ರರು ತಮ್ಮ ಅನುಕೂಲಕ್ಕಾಗಿ ಬಳಸುತ್ತಿದ್ದು, ಅವರು ಸಾಕಷ್ಟು ಪಡಿತರ ಮತ್ತು ಮದ್ದುಗುಂಡುಗಳ ಸಂಗ್ರಹ ಹೊಂದಿರುವ ಸಾಧ್ಯತೆಯೂ ಇದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT