ನವದೆಹಲಿ: ಕೇಂದ್ರ ಸರ್ಕಾರವು 2022–23ನೇ ಶೈಕ್ಷಣಿಕ ವರ್ಷದಿಂದ ನೀಟ್ –‘ಸೂಪರ್ ಸ್ಪೆಷಾಲಿಟಿ’ ಪರೀಕ್ಷೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು, ಈ ಸಂಬಂಧ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಹೇಳಿಕೆಯನ್ನು ದಾಖಲಿಸಿತು. ಅಲ್ಲದೆ ಈ ವರ್ಷದಿಂದಲೇ ನೀಟ್-ಸೂಪರ್ ಸ್ಪೆಷಾಲಿಟಿಯ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಕೇಂದ್ರದ ಹಿಂದಿನ ನಿರ್ಧಾರವನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಆದಾಗ್ಯೂ, ಪರೀಕ್ಷಾ ಮಾದರಿಯಲ್ಲಿ ಮಾಡಿದ ಬದಲಾವಣೆಗಳ ಸಿಂಧುತ್ವದ ಕುರಿತ ಪ್ರಶ್ನೆಯನ್ನು ಮುಕ್ತವಾಗಿ ಬಿಡಲಾಗುವುದು ಎಂದು ಪೀಠ ಹೇಳಿತು.
‘ವೈದ್ಯಕೀಯ ವೃತ್ತಿ ಮತ್ತು ಶಿಕ್ಷಣವು ಒಂದು ವ್ಯಾಪಾರವಾಗಿ ಮಾರ್ಪಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದ ಪೀಠವು, ‘ಈಗ ವೈದ್ಯಕೀಯ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯೂ ಅದೇ ಹಾದಿಯಲ್ಲಿ ಸಾಗಿದೆ. ಇದು ದೇಶದ ದುರಂತವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಜುಲೈನಲ್ಲಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ ನಂತರ ಕೊನೆಯ ಕ್ಷಣದಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನೀಡಿದ ಸಮರ್ಥನೆಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತು.
ಕಳೆದ ವಿಚಾರಣೆ ವೇಳೆ, ಕೊನೆಗಳಿಗೆಯಲ್ಲಿ ಪರೀಕ್ಷಾ ಮಾದರಿ ಬದಲಿಸಿದ್ದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ‘ಆಡಳಿತ ನಡೆಸುವವರು ಯುವ ವೈದ್ಯರನ್ನು ಫುಟ್‌ಬಾಲ್‌ನಂತೆ ಪರಿಗಣಿಸಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ 2021ರ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ಅವಕಾಶವನ್ನು ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.