ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಮಹಿಳೆಯರಿಗೆ ಪ್ರತಿ ತಿಂಗಳು ₹1000 ಕೊಡುವ ಯೋಜನೆಗೆ ಚಾಲನೆ

ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ
Last Updated 5 ಮಾರ್ಚ್ 2023, 14:03 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ 65ನೇ ಜನ್ಮದಿನದಂದು, ಮಹಿಳೆಯರಿಗೆ ಪ್ರತಿ ತಿಂಗಳು ₹ 1 ಸಾವಿರ ಪಡೆಯುವ ‘ಮುಖ್ಯಮಂತ್ರಿ ಲಾಡ್ಲಿ ಬೆಹನಾ’ ಯೋಜನೆಗೆ ಭಾನುವಾರ ಚಾಲನೆ ನೀಡಿದರು.

ಇಲ್ಲಿನ ಜಾಂಬೂರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿ ಮಹಿಳೆಯೊಬ್ಬರ ಫಾರಂ ಅನ್ನು ತುಂಬುವ ಮೂಲಕ ಚೌಹಾಣ್‌ ಯೋಜನೆಗೆ ಚಾಲನೆ ನೀಡಿದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಹಿಳಾ ಮತದಾರರನ್ನು ಓಲೈಸುವ ಸಲುವಾಗಿ ಈ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರವು ಘೋಷಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, ಆದಾಯ ತೆರಿಗೆ ಪಾವತಿ ವ್ಯಾಪ್ತಿಗೆ ಬಾರದ ಹಾಗೂ ಕುಟುಂಬದ ವಾರ್ಷಿಕ ಆದಾಯ ₹ 2.50 ಲಕ್ಷಕ್ಕಿಂತ ಕಡಿಮೆ ಇರುವ ಅರ್ಹ ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು ₹ 1 ಸಾವಿರ ಸಹಾಯ ನೀಡಲಾಗುತ್ತದೆ.

‘ಅರ್ಹ ಫಲಾನುಭವಿಗಳು ಮಾರ್ಚ್ 15ರಿಂದ ಏಪ್ರಿಲ್ 30ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಪರಿಶೀಲನೆಯ ಬಳಿಕ ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೇ 1ರಂದು ಹಾಗೂ ಅಂತಿಮ ಆಯ್ಕೆ ಪಟ್ಟಿಯನ್ನು ಮೇ 31ರಂದು ಬಿಡುಗಡೆ ಮಾಡಲಾಗುವುದು. ಆಯ್ಕೆಯಾದ ಮಹಿಳೆಯರ ಖಾತೆಗೆ ಈ ವರ್ಷದ ಜೂನ್ 10ರಿಂದ ಪ್ರತಿ ತಿಂಗಳು ಹಣಕಾಸಿನ ನೆರವು ಪಡೆಯಲಿದ್ದಾರೆ’ ಎಂದು ಶಿವರಾಜ್ ಸಿಂಗ್ ಹೇಳಿದರು.

‘ಮುಖ್ಯಮಂತ್ರಿ ಲಾಡ್ಲಿ ಬೆಹನಾ ಯೋಜನೆ’ಯ ಮೂಲಕ ರಾಜ್ಯದಲ್ಲಿ ಒಂದು ಕೋಟಿ ಮಹಿಳೆಯರನ್ನು ತಲುಪುವ ಗುರಿಯನ್ನು ಬಿಜೆಪಿ ಸರ್ಕಾರವು ಹೊಂದಿದೆ. ಇತ್ತೀಚೆಗಷ್ಟೇ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಗಾಗಿಯೇ ₹ 8 ಸಾವಿರ ಕೋಟಿ ಮೊತ್ತವನ್ನು ಮೀಸಲಾಗಿರಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಒಟ್ಟು ಮಹಿಳಾ ಮತದಾರರ ಸಂಖ್ಯೆ 2,60,23,733 ಇದೆ. ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 18 ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.

ಬಾಕ್ಸ್

‘ಕಾಂಗ್ರೆಸ್‌ನಿಂದ ಮಹಿಳೆಯರಿಗೆ ವರ್ಷಕ್ಕೆ ₹ 18 ಸಾವಿರ’
ಭೋಪಾಲ್: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ‘ಲಾಡ್ಲಿ ಬೆಹನಾ’ ಯೋಜನೆಯನ್ನು ಘೋಷಿಸುವುದಕ್ಕೂ ಮುನ್ನವೇ ಕಾಂಗ್ರೆಸ್‌ನ ಹಿರಿಯ ಮುಖಂಡ ಕಮಲ್ ನಾಥ್ ಅವರು ಮಹಿಳೆಯರಿಗೆ ವರ್ಷಕ್ಕೆ ₹ 18 ಸಾವಿರ ನೀಡುವುದಾಗಿ ಟ್ವಿಟರ್‌ನಲ್ಲಿ ಭರವಸೆ ನೀಡಿದ್ದಾರೆ.

‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ. ಚುನಾವಣೆಯ ಬಳಿಕ ಕಾಂಗ್ರೆಸ್, ವಿಶ್ವದ ಅತಿದೊಡ್ಡ ಮಹಿಳಾ ಸಬಲೀಕರಣ ಯೋಜನೆಯ ಭಾಗವಾಗಿ ಮಹಿಳೆಯರಿಗೆ ವರ್ಷಕ್ಕೆ ₹ 18 ಸಾವಿರ ಧನಸಹಾಯ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

ಚೌಹಾಣ್ ಅವರನ್ನು ‘ಘೋಷಣೆಯ ಯಂತ್ರ’ ಎಂದೂ ಟೀಕಿಸಿರುವ ಕಮಲ್ ನಾಥ್, ನಮ್ಮ ಪಕ್ಷವು ಈ ಭರವಸೆಯಿಂದ ಹಿಂದೆ ಸರಿಯುವುದಿಲ್ಲ. ಏಕೆಂದರೆ ಮಧ್ಯಪ್ರದೇಶದ ಮಹಿಳೆಯರನ್ನು ದೇಶದಲ್ಲಿಯೇ ಅತ್ಯಂತ ಸ್ವಾವಲಂಬಿ ಮಾಡುವ ಪ್ರತಿಜ್ಞೆಯನ್ನು ಕಾಂಗ್ರೆಸ್ ಮಾಡಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT