ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಪ್ರತಿಭಟನಕಾರರಿಂದ ನಷ್ಟ ವಸೂಲಿ ವಾಪಸ್‌ಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

Last Updated 18 ಫೆಬ್ರುವರಿ 2022, 11:19 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಕಾರರಿಂದ ಸಾರ್ವಜನಿಕ ಆಸ್ತಿ ನಷ್ಟಕ್ಕೆ ಪರಿಹಾರವಾಗಿ ವಸೂಲು ಮಾಡಿದ್ದ ಕೋಟ್ಯಂತರ ರೂಪಾಯಿಯನ್ನು ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರವು, ‘ಸಿಎಎ ವಿರೋಧಿ ಹೋರಾಟಗಾರರಿಗೆ ಆಸ್ತಿ ನಷ್ಟದ ವಸೂಲಿ ಕುರಿತಂತೆ ನೀಡಲಾಗಿದ್ದ ಒಟ್ಟು 274 ನೋಟಿಸ್‌ಗಳನ್ನು ಹಿಂಪಡೆಯಲಾಗಿದೆ’ ಎಂದೂ ನ್ಯಾಯಪೀಠಕ್ಕೆ ಮಾಹಿತಿ ನೀಡಿತು.

ವಸೂಲಾಗಿರುವ ಹಣದ ವಾಪಸಾತಿ ಬದಲಿಗೆ, ಕ್ಲೇಮು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲುಪ್ರತಿಭಟನಕಾರರಿಗೆ ತಿಳಿಸಬಹುದು ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಗರಿಮಾ ಪ್ರಸಾದ್ ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಆದರೆ, ಇದನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠವು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿತು.

2019ರ ಪ್ರತಿಭಟನೆಗೆ ಸಂಬಂಧಿಸಿ ಆಸ್ತಿ ನಷ್ಟ ಭರಿಸಲು ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಕ್ರಮವು ಕಾನೂನಿಗೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಫೆ.11ರಂದು ಅಭಿಪ್ರಾಯಪಟ್ಟಿದ್ದು, ತನಿಖೆಯನ್ನು ಕೈಬಿಡಬೇಕು ಎಂದು ತಾಕೀತು ಮಾಡಿತ್ತು. ‘ಈ ತನಿಖೆಯು ಸುಪ್ರೀಂ ಕೋರ್ಟ್‌ ಜಾರಿಗೊಳಿಸಿದ್ದ ನಿಯಮಗಳಿಗೆ ವಿರುದ್ಧವಾದುದಾಗಿದೆ. ಇದು, ಸಿಂಧುವಾಗುವುದಿಲ್ಲ’ ಎಂದೂ ಪೀಠ ಹೇಳಿತ್ತು.

ಇದೇ ಸಂದರ್ಭದಲ್ಲಿ ಪೀಠವು, 2020ರ ಆಗಸ್ಟ್‌ 31ರಲ್ಲಿ ಗೆಜೆಟ್‌ ಪ್ರಕಟಣೆ ಹೊರಡಿಸಿರುವ ‘ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟ ವಸೂಲಾತಿ ಕಾಯ್ದೆ’ ಅನ್ವಯ ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧ ತನಿಖೆ ನಡೆಸುವ ಸ್ವಾತಂತ್ರವನ್ನೂ ಸರ್ಕಾರಕ್ಕೆ ನೀಡಿತು.

ಸಿಎಎ ವಿರೋಧಿ ಪ್ರತಿಭಟನಕಾರರಿಂದ ಆಸ್ತಿ ನಷ್ಟ ವಸೂಲಾತಿಗೆ ಮುಂದಾಗಿದ್ದ ಉತ್ತರ ಪ್ರದೇಶದ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಫೆ.11ರಂದು ತರಾಟೆಗೆ ತೆಗೆದುಕೊಂಡಿತ್ತು. ‘ಈ ಕ್ರಮವನ್ನು ಕೈಬಿಡಬೇಕು. ಇಲ್ಲದಿದ್ದರೆ, ತನಿಖೆಯನ್ನು ರದ್ದುಪಡಿಸುತ್ತೇವೆ’ ಎಂದು ಎಚ್ಚರಿಸಿತ್ತು.

ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ವಸೂಲಿ ಕುರಿತು ಜಿಲ್ಲಾಡಳಿತವು ನೀಡಿದ್ದ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿ ಪರ್ವೇಜ್‌ ಆರೀಫ್ ಟಿಟು ಅವರು ಅರ್ಜಿ ಸಲ್ಲಿಸಿದ್ದರು. ಆರು ವರ್ಷದ ಹಿಂದೆ, 94ನೇ ವಯಸ್ಸಿನಲ್ಲಿ ಮೃತಪಟ್ಟಿರುವ ಹಾಗೂ 90 ವರ್ಷ ಮೀರಿದ ಇಬ್ಬರು ಸೇರಿದಂತೆ ಹಲವರಿಗೆ ಹೀಗೇ ನೋಟಿಸ್‌ ಕಳುಹಿಸಲಾಗಿದೆ ಎಂದು ಅರ್ಜಿದಾರರು ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT