ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮಗಳ ಹತ್ಯೆಗೆ ಸುಪಾರಿ ಕೊಟ್ಟ ತಂದೆ!

ಉತ್ತರ ಪ್ರದೇಶ: ಮರ್ಯಾದೆಗೇಡು ಹತ್ಯೆ ಶಂಕೆ
Last Updated 15 ಫೆಬ್ರುವರಿ 2021, 13:58 IST
ಅಕ್ಷರ ಗಾತ್ರ

ಗೋರಖ್‌ಪುರ (ಪಿಟಿಐ): ‘ಮುಸ್ಲಿಂ ಯುವಕನನ್ನು ಪ್ರೀತಿಸಿದ ಕಾರಣಕ್ಕಾಗಿ ಹೆತ್ತ ಮಗಳನ್ನೇ ಜೀವಂತವಾಗಿ ಸುಟ್ಟು ಹಾಕಲು ತಂದೆಯೇ ಸುಪಾರಿ ಕೊಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ ಸಮೀಪದ ಬೆಲ್ಘಾಟ್ ಗ್ರಾಮದಲ್ಲಿ ಈಚೆಗೆ ನಡೆದಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಹತ್ಯೆಗೀಡಾದ ಯುವತಿಯನ್ನು ರಂಜನಾ ಯಾದವ್ ಎಂದು ಗುರುತಿಸಲಾಗಿದ್ದು, ಇದು ಮರ್ಯಾದೆಗೇಡು ಹತ್ಯೆಯಾಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಕೈಲಾಶ್ ಯಾದವ್, ಸಹೋದರ ಅಜಿತ್ ಯಾದವ್, ಸೋದರಮಾವ ಸತ್ಯಪ್ರಕಾಶ್ ಯಾದವ್ ಹಾಗೂ ಇನ್ನೊಬ್ಬ ಆರೋಪಿ ಸೀತಾರಾಂ ಯಾದವ್ ಎಂಬುವರನ್ನು ಭಾನುವಾರ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಪೆಟ್ರೋಲ್ ಕಂಟೇನರ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಹತ್ಯೆ ಮಾಡಿದ ಸುಪಾರಿ ಕಿಲ್ಲರ್‌ನ ಬಂಧನಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.

‘ಫೆ. 4ರಂದು ಧಂಘಾಟ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಿನ ಗ್ರಾಮದಲ್ಲಿ ಅರ್ಧ ಸುಟ್ಟಿದ್ದ ಯುವತಿಯ ದೇಹ ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ, ಸಿ.ಸಿ ಟಿವಿ ದೃಶ್ಯಗಳ ಪರಿಶೀಲನೆ ಹಾಗೂ ಶ್ವಾನದಳದ ನೆರವಿನಿಂದ ತನಿಖೆ ಕೈಗೊಂಡಾಗ ಯುವತಿಯು ಗೋರಖ್‌ಪುರ ಸಮೀಪದ ಬೆಲ್ಘಾಟ್ ಗ್ರಾಮದ ನಿವಾಸಿ ರಂಜನಾ ಯಾದವ್ ಎಂದು ತಿಳಿಯಿತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಸ್ತುಭ್ ಮಾಹಿತಿ ನೀಡಿದ್ದಾರೆ.

‘ಮುಸ್ಲಿಂ ಯುವಕನನ್ನು ಪ್ರೀತಿಸಿದ್ದ ಯುವತಿಯ ಹತ್ಯೆಗಾಗಿ ಆಕೆಯ ಕುಟುಂಬದ ಸದಸ್ಯರೇ ಸುಪಾರಿ ಕಿಲ್ಲರ್ ವರುಣ್ ತಿವಾರಿ ಎಂಬಾತನಿಗೆ ಒಂದೂವರೆ ಲಕ್ಷ ರೂಪಾಯಿ ಹಣ ನೀಡಿದ್ದರು’ ಎಂದೂ ಅವರು ತಿಳಿಸಿದ್ದಾರೆ.

‘ಮಗಳು ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಳು. ಅವನನ್ನು ಬಿಡಲು ಆಕೆ ಒಪ್ಪಲಿಲ್ಲ. ಹಾಗಾಗಿ, ನನ್ನ ಮಗ ಮತ್ತು ಅಳಿಯನೊಂದಿಗೆ ಸೇರಿ ಮಹುಲಿಯಲ್ಲಿರುವ ಸುಪಾರಿ ಕಿಲ್ಲರ್‌ನನ್ನು ಸಂಪರ್ಕಿಸಿ ಆಕೆಯನ್ನು ಜೀವಂತವಾಗಿ ಸುಡಲು ಸುಪಾರಿ ಕೊಟ್ಟೆ’ ಎಂದು ಹತ್ಯೆಗೀಡಾದ ಯುವತಿಯ ತಂದೆ ಪೊಲೀಸರಿಗೆ ತಿಳಿಸಿದ್ದಾನೆ.

‘ಆರೋಪಿಗಳ ಪೈಕಿ ಒಬ್ಬಾತ ಫೆ. 3ರಂದು ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಜೋಗಿನಾ ಹಳ್ಳಿಗೆ ಕರೆದೊಯ್ದಿದ್ದಾನೆ. ನಂತರ ಇತರ ಆರೋಪಿಗಳು ಸ್ಥಳಕ್ಕೆ ಧಾವಿಸಿ ಯುವತಿಯ ಕೈಕಾಲು, ಬಾಯಿ ಕಟ್ಟಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT