ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 8 ಆರೋಪಿಗಳ ಬಂಧನ

Last Updated 11 ಅಕ್ಟೋಬರ್ 2021, 10:59 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಇಗತ್‌ಪುರಿ ಮತ್ತು ಕಾಸರ ರೈಲು ನಿಲ್ದಾಣಗಳ ನಡುವೆ ಲಖನೌ -ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ವರ್ಷದ ನವ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪ್ರಯಾಣಿಕರನ್ನು ದರೋಡೆ ಮಾಡಿದ್ದ ಎಲ್ಲ ಎಂಟು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿತ್ತು. ಆರೋಪಿಗಳು ಇಗತ್‌ಪುರಿಯಲ್ಲಿ ಮುಂಬೈಗೆ ಹೋಗುವ ರೈಲು ಹತ್ತಿದ್ದರು. ರೈಲು ಘಾಟ್ ಸೆಕ್ಷನ್ ಮೂಲಕ ಹಾದು ಹೋಗುತ್ತಿದ್ದಾಗ ನವ ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದರು. ಮೊದಲು ನಾಲ್ವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇತ್ತೀಚೆಗೆ ಮದುವೆಯಾಗಿ ಮುಂಬೈನಲ್ಲಿ ನೆಲೆಸಲು ಪತಿ ಜತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಮಹಿಳೆ ಮೇಲೆ ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಮಹಿಳೆಯ ಪತಿ ಆಕೆಯನ್ನು ರಕ್ಷಿಸಲು ಯತ್ನಿಸಿದಾಗ, ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕಾಶ್ ಅಲಿಯಾಸ್ ಪಾಕ್ಯ ದಾಮು ಪಾರ್ಧಿ (20), ಅರ್ಷದ್ ಶೇಖ್ (19), ಅರ್ಜುನ್ ಅಲಿಯಾಸ್ ಪವ್ಯಾ ಸುಭಾಷ್ ಸಿಂಗ್ ಪರದೇಶಿ (20), ಕಿಶೋರ್ ನಂದು ಸೋನವಾನೆ ಅಲಿಯಾಸ್ ಕಾಲಿಯಾ (25), ಕಾಶಿನಾಥ ರಾಮಚಂದ್ರ ತೇಲಂ ಕಶ್ಯ (23), ಆಕಾಶ್ ಶೆಣೋರ್ ಅಲಿಯಾಸ್ ಅಕ್ಯ (20), ಧನಂಜಯ್ ಭಗತ್ ಅಲಿಯಾಸ್ ಗುದ್ದು (19) ಮತ್ತು ರಾಹುಲ್ ಆಡೋಲೆ ಅಲಿಯಾಸ್ ರಾಹುಲ್ಯಾ (22) ಬಂಧಿತ ಆರೋಪಿಗಳು.

‘ಆರೋಪಿಗಳು ರೈಲು ಹತ್ತುವ ಮೊದಲು ಗಾಂಜಾ ಸೇವಿಸಿದ್ದರು. ರೈಲು ಪ್ರವೇಶಿಸಿದ ನಂತರ, ಒಬ್ಬ ಆರೋಪಿ ಪ್ರಯಾಣಿಕನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಹೆದರಿದ ಪ್ರಯಾಣಿಕರು ಹಣ ನೀಡಿದ್ದಾರೆ. ದರೋಡೆ ಯಶಸ್ವಿಯಾಗಿದ್ದನ್ನು ನೋಡಿ ಉಳಿದ ಆರೋಪಿಗಳೂ ಪ್ರಯಾಣಿಕರಿಗೆ ಚಾಕು ತೋರಿಸಿ, 16 ಪ್ರಯಾಣಿಕರಿಂದ ನಗದು ಮತ್ತು ಒಂಬತ್ತು ಮಂದಿಯಿಂದ ಮೊಬೈಲ್ ಫೋನ್‌ಗಳನ್ನು ದೋಚಿದ್ದರು. ಈ ಪ್ರಕರಣದ ಎಲ್ಲ ಎಂಟು ಆರೋಪಿಗಳನ್ನು ಇಗತ್‌ಪುರಿಯ ಘೋಟಿ ಪ್ರದೇಶದಿಂದ ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮನೋಜ್ ಪಾಟೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT