ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆ ನಂತರ ಮಹಿಳೆಯರು ಲಸಿಕೆ ಪಡೆಯಬಹುದು: ತಜ್ಞರು

Last Updated 23 ಮೇ 2021, 11:59 IST
ಅಕ್ಷರ ಗಾತ್ರ

ನವದೆಹಲಿ: ‘ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ (ಹೆರಿಗೆ) ಬಳಿಕ ಯಾವುದೇ ಸಮಯದಲ್ಲಿ ಕೋವಿಡ್‌–19 ಲಸಿಕೆಯನ್ನು ಪಡೆಯಬಹುದು’ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

‘ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಗರ್ಭಿಣಿಯರಿಗೂ ಲಸಿಕೆ ಹಾಕಲು ಅನುಮತಿ ನೀಡಬೇಕು’ ಎಂದೂ ತಜ್ಞರು ಪ್ರತಿಪಾದಿಸಿದ್ದಾರೆ. ಸರ್ಕಾರ ಇತ್ತೀಚೆಗಷ್ಟೇ ಹಾಲೂಡಿಸುವ ತಾಯಂದಿರಿಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದೆ.

‘ಹೆರಿಗೆಯ ಬಳಿಕ ಲಸಿಕೆ ಪಡೆದವರು ನಂತರ ತಮ್ಮ ಮಕ್ಕಳಿಗೆ ಎದೆ ಹಾಲುಣಿಸಲು ಯಾವುದೇ ಸಮಸ್ಯೆ ಇಲ್ಲ. ಲಸಿಕೆಯ ಬಳಿಕ ಒಂದು ಗಂಟೆಯೊಳಗೆ ಹಾಲೂಡಿಸುವುದನ್ನೂ ತಡೆಯಬೇಕಿಲ್ಲ’ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಹೆರಿಗೆಯ ಬಳಿಕ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ತಾಯಿಗಾಗಲೀ, ಶಿಶುವಿಗಾಗಲೀ ಯಾವುದೇ ತೊಂದರೆಯಿಲ್ಲ’ ಎಂದು ದೆಹಲಿಯ ಜಿಟಿಬಿ ಆಸ್ಪತ್ರೆ ಹಾಗೂ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್‌ನ ಸಮುದಾಯ ಔಷಧ ವಿಭಾಗದ ಪ್ರೊಫೆಸರ್ ಡಾ.ಖಾನ್ ಅಮೀರ್ ಮರೂಫ್ ಹೇಳಿದ್ದಾರೆ.

‘ಹೆರಿಗೆಯ ನಂತರವೂ ಲಸಿಕೆಯನ್ನು ವಿಳಂಬವಾಗಿ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಲಸಿಕೆ ಪಡೆದ ಬಳಿಕ ಹಾಲೂಡಿಸುವ ತಾಯಂದಿರು ನಿರ್ದಿಷ್ಟವಾಗಿ ಯಾವುದೇ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿಲ್ಲ. ಜನಸಾಮಾನ್ಯರು ಲಸಿಕೆ ತೆಗೆದುಕೊಂಡಾಗ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸುತ್ತಿದ್ದರೋ ತಾಯಂದಿರು ಕೂಡಾ ಅದೇ ರೀತಿ ಮುನ್ನೆಚ್ಚರಿಕೆ ವಹಿಸಿದರೆ ಸಾಕು’ ಎಂದೂ ಅವರು ಹೇಳಿದ್ದಾರೆ.

‘ಮಾಸಿಕ ಋತುಸ್ರಾವದ (ಮುಟ್ಟು) ಯಾವುದೇ ಸಮಯದಲ್ಲೂ ಮಹಿಳೆಯರು ಕೋವಿಡ್ ಲಸಿಕೆ ಪಡೆಯಬಹುದು’ ಎಂದು ರೋಸ್‌ವಾಕ್ ಆಸ್ಪತ್ರೆ, ಅಪೊಲೋ ಕ್ರೆಡಲ್ ರಾಯಲ್, ಪೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಲವ್ಲೀನಾ ನಾದಿರ್ ಅವರು ತಿಳಿಸಿದ್ದಾರೆ.

‘ಕೋವಿಡ್‌–19 ಇರುವ ಕಾರಣಕ್ಕಾಗಿಯೇ ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಹೆರಿಗೆ ಮಾಡಿಸುವ ಅಗತ್ಯವಿಲ್ಲ. ಆದರೆ, ಕೋವಿಡ್ ಸೋಂಕಿನಿಂದಾಗಿ ತಾಯಂದಿರಲ್ಲಿ ಉಂಟಾದ ಕಾಯಿಲೆಗಳ ಕಾರಣಕ್ಕಾಗಿ ಅವಧಿಪೂರ್ಣ ಶಿಶು ಜನನ ಇಲ್ಲವೇ ಸಿಸೇರಿಯನ್ ಹೆರಿಗೆಯ ಸಂಖ್ಯೆಗಳು ಹೆಚ್ಚಾಗುತ್ತಿವೆ. ಕೋವಿಡ್‌ನಿಂದ ಚೇತರಿಸಿಕೊಂಡ ಗರ್ಭಿಣಿಯರು ಮೂರು ತಿಂಗಳ ಬಳಿಕ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಒಂದು ವೇಳೆ ಮಹಿಳೆಯರು ಮೊದಲ ಡೋಸ್ ಪಡೆದ ನಂತರ ಗರ್ಭಿಣಿಯರಾಗಿದ್ದರೆ ಅಂಥವರು ಗರ್ಭಾವಸ್ಥೆಯನ್ನು ಮುಂದುವರಿಸಬಹುದು’ ಎಂದು ಸಲಹೆ ನೀಡಿದ್ದಾರೆ.

‘ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಾರ್ಗಸೂಚಿಗಳು ತಿಳಿಸಿವೆ. ಆದರೆ, ಭಾರತದಲ್ಲಿ ಗರ್ಭಿಣಿಯರಿಗೆ ಲಸಿಕೆ ನೀಡುವ ಹಾಗೂ ರೋಗನಿರೋಧಕ ಶಕ್ತಿಯ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಚರ್ಚೆ ನಡೆಸುತ್ತಿದೆ’ ಎಂದು ನವದೆಹಲಿಯ ಆಹಾರ ಮತ್ತು ಪೋಷಣೆ ಭದ್ರತಾ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುಜೀತ್ ರಂಜನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT