ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಿಳಾ ಸುರಕ್ಷತೆ, ಮಕ್ಕಳ ಸಮಸ್ಯೆಗಳ ಪರಿಹಾರವೇ ಎಲ್ಲ ಸರ್ಕಾರಗಳ ಆದ್ಯತೆಯಾಗಿರಲಿ'

ಒಂದು ದಿನದ ಮುಖ್ಯಮಂತ್ರಿಯಾಗಿದ್ದ ಸೃಷ್ಟಿ ಗೋಸ್ವಾಮಿ
Last Updated 25 ಜನವರಿ 2021, 14:35 IST
ಅಕ್ಷರ ಗಾತ್ರ

ಡೆಹರಾಡೂನ್‌:ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆಯಂದು ಉತ್ತರಾಖಂಡದ ಒಂದು ದಿನದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸೃಷ್ಟಿ ಗೋಸ್ವಾಮಿ ಅವರು, ಮಹಿಳಾ ಸುರಕ್ಷತೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಎಲ್ಲ ಸರ್ಕಾರಗಳ ಆದ್ಯತೆಯಾಗಿರಬೇಕು ಎಂದು ತಿಳಿಸಿದರು.

ಹಲವು ವರ್ಷಗಳಿಂದೀಚೆಗೆ ಮಹಿಳಾ ಸುರಕ್ಷತೆಯ ಪರಿಸ್ಥಿತಿ ಖಂಡಿತವಾಗಿಯೂ ಸುಧಾರಿಸಿದೆ. ಆದರೂಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎನ್ನುತ್ತಾರೆ 20 ವರ್ಷದ ಸೃಷ್ಟಿ.

‘ಇದೆಲ್ಲದರ ನಂತರವೂ ನಾವಿನ್ನೂ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇದರರ್ಥ ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ನಾವು ಸಮಸ್ಯೆಯನ್ನು ಮತ್ತಷ್ಟು ಪರಿಹರಿಸಬೇಕು’ ಎಂದು ಮಕ್ಕಳ ಅಸೆಂಬ್ಲಿ ಸದಸ್ಯರೊಂದಿಗೆ ಒಂದು ದಿನದ ಮುಖ್ಯಮಂತ್ರಿಯಾಗಿ ಅಧಿವೇಶನದ ಅಧ್ಯಕ್ಷತೆ ವಹಿಸಿದ ನಂತರ ಸೃಷ್ಟಿ ತಿಳಿಸಿದರು.

'ಮಹಿಳಾ ಸುರಕ್ಷತೆ, ಮಕ್ಕಳ ಸಮಸ್ಯೆಗಳು ಮತ್ತು ಬೆಟ್ಟ ಪ್ರದೇಶಗಳಿಂದ ವಲಸೆ ಹೋಗುವ ಸಮಸ್ಯೆಯೂ ಸೇರಿದಂತೆ ಇನ್ನೂ ಕೆಲವು ಪ್ರಮುಖ ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದೇನೆ. ಇವನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಉತ್ತರಾಖಂಡ ಆಯೋಗದ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಶಾಲೆ ಅಥವಾ ಕಾಲೇಜಿಗೆ ಹೋಗುವ ಹುಡುಗಿಯರನ್ನು ಲೈಂಗಿಕ ಕಿರುಕುಳ ಸಮಸ್ಯೆಯಿಂದ ರಕ್ಷಿಸಲು ಮಾರ್ಗಗಳನ್ನು ರೂಪಿಸುವಂತೆ ಡಿಜಿಪಿಗೆ ವಿನಂತಿಸಿದ್ದೇನೆ. ಇದರಿಂದಾಗಿ ಪ್ರಯಾಣ ಮಾಡುವಾಗ ಅವರು ಹೆಚ್ಚು ಸುರಕ್ಷಿತರಾಗಿರುತ್ತಾರೆ. ಶೈಕ್ಷಣಿಕ ಸಂಸ್ಥೆಗಳ ಸುತ್ತ 500 ಮೀಟರ್ ವ್ಯಾಪ್ತಿಯೊಳಗೆ ಎಲ್ಲಾ ರೀತಿಯ ಮಾದಕವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಕ್ಕಳು ನಮ್ಮ ರಾಷ್ಟ್ರದ ಭವಿಷ್ಯ ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಅವು ಅರ್ಹವಾಗಿವೆ’ ಎಂದು ಅವರು ಕೋರಿದ್ದಾರೆ.

ಒಂದು ದಿನದ ಸಿಎಂ ಆಗಿ ಆಡಳಿತ ನಡೆಸಿದ ಅನುಭವ ಹಂಚಿಕೊಂಡ ಅವರು, ‘ಇದು 'ನಾಯಕ್' ಅನ್ನು ನೆನಪಿಸಿತು. ಇದರಲ್ಲಿನ ನಾಯಕನು ಒಂದು ದಿನ ಮುಖ್ಯಮಂತ್ರಿಯಾಗುತ್ತಾನೆ. ಆದರೆ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ನೈಜ ಜೀವನದ ಅನುಭವವು ವಿಭಿನ್ನ ಮತ್ತು ಅತ್ಯಂತ ರೋಮಾಂಚನಕಾರಿಯಾಗಿತ್ತು. ನಾಯಕ್ ತೆರೆಯ ಮೇಲಿನ ಜೀವನ. ಆದರೆ ನನ್ನ ಅನುಭವ ನಿಜವಾಗಿತ್ತು. ಇದು ನನಗೆ ರೋಮಾಂಚನವಾಗಿತ್ತು’ ಎಂದರು. ಮುಂದುವರಿದು, ತಮಗೆ ಅವಕಾಶ ನೀಡಿದ ಉತ್ತರಾಖಂಡ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಮತ್ತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಧನ್ಯವಾದ ಅರ್ಪಿಸಿದರು.

ರಾಜಕೀಯಕ್ಕೆ ಪ್ರವೇಶಿಸುವ ಯೋಜನೆ ಇದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅವಕಾಶ ನೀಡಿದರೆ ಪ್ರಯತ್ನಿಸಬಹುದು ಎಂದು ಹೇಳಿದರು.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಈ ಕಾರ್ಯಕ್ರಮವು ರಾಜ್ಯದ ಹೆಣ್ಣು ಮಕ್ಕಳನ್ನು ಗೌರವಿಸುವ ಒಂದು ಮಾರ್ಗವಾಗಿದ್ದು, ಇದು ಅವರ ಗುರುತನ್ನು ಕಂಡುಹಿಡಿಯಲು ನೆರವಾಗುತ್ತದೆ. ಇಂದಿನ ಮಕ್ಕಳೇ ನಮ್ಮ ಭವಿಷ್ಯದ ನಾಯಕರು. ಇಂತಹ ಕಾರ್ಯಕ್ರಮಗಳಿಂದ ಸಮಕಾಲೀನ ಸಮಸ್ಯೆಗಳು ಮತ್ತು ಶಾಸಕಾಂಗದ ಕಾರ್ಯವಿಧಾನಗಳ ಬಗ್ಗೆ ಅವರಿಗೆ ಸ್ವಲ್ಪ ಮಟ್ಟಿಗೆ ಅರಿವು ಮೂಡಿಸಿ ರಾಷ್ಟ್ರವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಅನುವು ಮಾಡಿಕೊಡುತ್ತದೆ ಎಂದರು.

ಮಕ್ಕಳ ಅಸೆಂಬ್ಲಿಗೆ ಸರ್ಕಾರದ ಕಾರ್ಯಚಟುವಟಿಕೆಗಳಿಗೆ ಸಾಕ್ಷಿಯಾಗಲು ಅವಕಾಶ ನೀಡಿದ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT