ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಎಂಜಿನ್‌ ಬೋಗಿಗಳಲ್ಲಿ ಶೌಚಾಲಯ ಇಲ್ಲ: ತಡೆದುಕೊಳ್ಳುವುದೇ ದಾರಿ!

ಮಹಿಳಾ ರೈಲು ಚಾಲಕಿಯರ ಅಳಲು; ಸ್ಯಾನಿಟರಿ ಪ್ಯಾಡ್‌ ಬಳಕೆ
Last Updated 17 ಜುಲೈ 2022, 12:57 IST
ಅಕ್ಷರ ಗಾತ್ರ

ನವದೆಹಲಿ: ರೈಲು ಎಂಜಿನ್‌ ಬೋಗಿಗಳಲ್ಲಿ ಶೌಚಾಲಯ ಇಲ್ಲದೆ ಮಹಿಳಾ ರೈಲು ಚಾಲಕರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದರೆ, ಕೆಲವರು ಕಡಿಮೆ ನೀರು ಕುಡಿಯುತ್ತಾರೆ. ಮತ್ತೆ ಕೆಲವರು 5–6 ತಾಸಿನ ವರೆಗೂ ಮೂತ್ರವನ್ನು ತಡೆದುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ!

ತಿಂಗಳ ಮುಟ್ಟಿನ ಸಮಯದಲ್ಲಂತೂ ಮಹಿಳಾ ಚಾಲಕರ ಸ್ಥಿತಿ ದಯನೀಯವಾಗುತ್ತದೆ. ‘ನನ್ನ ಮುಟ್ಟಿನ ಸಮಯದಲ್ಲಿ ನಾನು ಪ್ರತಿ ಬಾರಿಯೂ ರಜೆ ತೆಗೆದುಕೊಳ್ಳುತ್ತೇನೆ ಎನ್ನುವುದು ವೃತ್ತಪರ ಮಹಿಳಾ ಸಿಬ್ಬಂದಿಯಾಗಿ ನನಗೆ ನಾಚಿಕೆಗೇಡು’ ಎನ್ನುತ್ತಾರೆ ಸಹಾಯಕ ಮಹಿಳಾ ಚಾಲಕಿ.

‘ನಾನು ಕೆಲಸಕ್ಕೆ ಸೇರಿ ಐದು ವರ್ಷವಾಗಿದೆ. ನಾನು ಕಚೇರಿ ಕೆಲಸ ಮಾಡಲು ಇಚ್ಛಿಸುತ್ತೇನೆ. ದೂರದ ಪ್ರಯಾಣದಲ್ಲಿ ಶೌಚಾಲಯ ಇಲ್ಲದೆ ಇರುವುದನ್ನು ಎದುರಿಸುವುದು ಯುದ್ಧವೇ ಸರಿ’ ಎನ್ನುತ್ತಾರೆ ಮತ್ತೊಬ್ಬ ಚಾಲಕಿ.

‘ಇದು ಕೇವಲ ಮಹಿಳೆಯರ ಸಮಸ್ಯೆ ಮಾತ್ರವಲ್ಲ. ಪುರುಷರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ, ಅವರು ಎಲ್ಲಿ ಬೇಕಾದರಲ್ಲಿ ಮೂತ್ರ ವಿಸರ್ಜಿಸಿ ಬರುತ್ತಾರೆ. ಮಹಿಳೆಯರಿಗೆ ಇದು ಸಾಧ್ಯವಿಲ್ಲ’ ಎಂದು ಅವರು ವಿವರಿಸುತ್ತಾರೆ.

97 ಶೌಚಾಲಯ ನಿರ್ಮಾಣ: ರೈಲು ಎಂಜಿನ್‌ನಲ್ಲಿ ಶೌಚಾಲಯವನ್ನು ನಿರ್ಮಿಸುವ ಯೋಜನೆ ರೂಪಿಸಿ, ಇಂಥ ಮೊದಲ ಶೌಚಾಲಯವನ್ನುಅಂದಿನ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಲೋಕಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಕೇವಲ 97 ಶೌಚಾಲಯಗಳಷ್ಟೇ ನಿರ್ಮಾಣವಾಗಿವೆ.

ಮಹಿಳಾ ರೈಲು ಚಾಲಕರಿಗೆ ಅನುಕೂಲವಾಗುವಂತೆಯೇ ಕೆಲಸಗಳನ್ನು ನಿಯೋಜಿಸಲಾಗುತ್ತದೆ ಎಂದು ರೈಲು ಅಧಿಕಾರಿಗಳು ಹೇಳುತ್ತಾರೆ.

ದೇಶದಲ್ಲಿ ಒಟ್ಟು 14 ಸಾವಿರ ಡೀಸೆಲ್‌ ರೈಲು ಎಂಜಿನ್‌ಗಳಿವೆ. 60 ಸಾವಿರ ರೈಲು ಚಾಲಕರಿದ್ದಾರೆ. ಇವರಲ್ಲಿ ಸಾವಿರ ಮಂದಿ ಮಹಿಳಾ ಚಾಲಕರಿದ್ದಾರೆ. ಶೌಚಾಲಯ ಇಲ್ಲದೆ ಇರುವುದರಿಂದ ಈ ಮಹಿಳಾ ಚಾಲಕರು ಹೆಚ್ಚಾಗಿ ಕಡಿಮೆ ದೂರದ ಗೂಡ್ಸ್‌ ರೈಲು ಚಾಲನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

‘ಹಕ್ಕಿನ ನಿರಾಕರಣೆ’
ಭಾರತೀಯ ರೈಲ್ವೆಯ ಪುರುಷ ರೈಲು ಚಾಲಕರ ಸಂಘದ ಮಾಜಿ ಅಧ್ಯಕ್ಷ ಅಲೋಕ್‌ ವರ್ಮಾ ಅವರು ಈ ವಿಷಯನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎದುರು ಇರಿಸಿದ್ದರು. ‘ರೈಲು ಸಚಿವಾಲಯವು ಮಹಿಳೆಯರ ಮತ್ತು ಪುರುಷರ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದೆ’ ಎನ್ನುತ್ತಾರೆ ಅಲೋಕ್‌.

‘ಎಲ್ಲಾ ರೈಲು ಎಂಜಿನ್‌ ಬೋಗಿಗಳಲ್ಲೂ ಶೌಚಾಲಯವನ್ನು ನಿರ್ಮಿಸಲಾಗುವುದು ಎಂದುರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಸಚಿವಾಲಯ ತಿಳಿಸಿತ್ತು. ಆದರೆ, ಅದು ಈ ವರೆಗೂ ಜಾರಿಯಾಗಿಲ್ಲ’ ಎನ್ನುತ್ತಾರೆ ಅವರು.

‘ಒಬ್ಬ ಚಾಲಕನು ಕನಿಷ್ಠ 10ರಿಂದ 12 ತಾಸು ಚಾಲನೆ ಮಾಡುತ್ತಾನೆ. ಈ ವೇಳೆ ಆತ ಊಟ ಮಾಡಲು ಆಗುವುದಿಲ್ಲ ಅಥವಾ ಶೌಚಾಲಯಕ್ಕೂ ಹೋಗಲು ಆಗುವುದಿಲ್ಲ. ವಿರಾಮವನ್ನೂ ತೆಗೆದುಕೊಳ್ಳಬಾರದು ಕೂಡ ಎಂದು ಸಚಿವಾಲಯವು ಆಯೋಗಕ್ಕೆ ಉತ್ತರ ನೀಡಿತ್ತು. ಇದು ಅಮಾನವೀಯ’ ಎಂದು ಅಲೋಕ್‌ ವಾದಿಸುತ್ತಾರೆ.

*

ಓಡುತ್ತಿರುವ ರೈಲಿನಲ್ಲಿ ಚಾಲಕರಿಗೆ ಶೌಚಾಲಯಕ್ಕಾಗಿ ವಿರಾಮ ನೀಡುವುದು ಕಾರ್ಯಸಾಧುವಲ್ಲ ಎನ್ನುತ್ತದೆ ಸಚಿವಾಲಯ.
–ಎಂ.ಎನ್‌ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ, ಭಾರತೀಯ ರೈಲು ಚಾಲಕ ಸಿಬ್ಬಂದಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT