ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯವೊಂದೇ ಸಾಧನ: ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷ ಲೇಖನಗಳು

Last Updated 8 ಮಾರ್ಚ್ 2022, 6:28 IST
ಅಕ್ಷರ ಗಾತ್ರ

ಹೆಸರು: ರಾಧಾ ರವಿ, ಬೆಂಗಳೂರು, ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಕ್ಷೇತ್ರ: ಟ್ರಕ್‌ ಡ್ರೈವಿಂಗ್‌, ವ್ಯಾಪಾರ.

ನಂಬಿದ ಕೆಲಸಗಾರರು ಕೈಕೊಟ್ಟಾಗ, ಕೊರೊನಾ ಸಂದರ್ಭದಲ್ಲಿ ನಮ್ಮ ಕೈಹಿಡಿದದ್ದು ತೆಂಗಿನಕಾಯಿ ವ್ಯಾಪಾರ. ಮಂಡ್ಯ ಜಿಲ್ಲೆಯ ಎಡೆಯೂರಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆಬೇರೆ ಊರುಗಳಿಗೆ ದೊಡ್ಡ ಲಗೇಜ್ ಗಾಡಿಗಳಲ್ಲಿ ಕಾಯಿ ಹಾಕಿಕೊಂಡು ಹೋಗಿ ಮಾರಾಟ ಮಾಡುವೆ. 2,805 ಕೆ.ಜಿ. ತೂಗುವ ಅಶೋಕ ಲೇಲ್ಯಾಂಡ್ ದೋಸ್ತ್ ಗಾಡಿ, ಟ್ರಕ್‌ ಸೇರಿದಂತೆ ದೊಡ್ಡ ಗಾಡಿಗಳು ನನ್ನ ಸಂಗಾತಿ. ಕಾರು ಚಾಲಕರಾಗಿರುವ ಪತಿ ರವಿ ಅವರು ನನ್ನ ಡ್ರೈವಿಂಗ್ ಗುರು. ಕಾರುಗಳ ಮಾರಾಟ ಅವರ ವೃತ್ತಿ. ಅಗತ್ಯವಿದ್ದಾಗ ಇತರ ಊರುಗಳಿಗೆ ಕಾರುಗಳನ್ನು ಬಿಟ್ಟುಬರುವೆ. ಇಬ್ಬರು ಪುಟ್ಟ ಮಕ್ಕಳನ್ನು ಅಮ್ಮ ನೋಡಿಕೊಳ್ತಾರೆ.

ಕೆಲಸ ಇದ್ದಾಗ ಹೊತ್ತುಗೊತ್ತು ಇಲ್ಲದೇ ನಿಗದಿತ ಗಮ್ಯ ತಲುಪುವುದಷ್ಟೇ ತಲೆಯಲ್ಲಿರುತ್ತೆ. ಹಾಸನ, ಮಂಡ್ಯ, ಮೈಸೂರು, ಕುಣಿಗಲ್, ತಮಿಳುನಾಡಿನ ಗಡಿ ಮೊದಲಾದ ಕಡೆಗಳಲ್ಲಿ ಆರ್ಡರ್ ಇದ್ದಾಗ ಸಾವಿರಾರು ತೆಂಗಿನಕಾಯಿ ತಗೊಂಡು ಲಗೇಜ್ ಗಾಡಿ ಡ್ರೈವ್ ಮಾಡಿಕೊಂಡು ಒಬ್ಬಳೇ ಕೊಟ್ಟು ಬಂದಿದ್ದೇನೆ. ಸಂಸಾರದ ಬಂಡಿ ಸಾಗಲು ಗಂಡ–ಹೆಂಡತಿ ಇಬ್ಬರೂ ದುಡಿಯಬೇಕು. ಡ್ರೈವಿಂಗ್ ಕಲಿತದ್ದು ನನ್ನ ಬದುಕಿಗೆ ದಾರಿಯಾಗಿದೆ. ಆರಂಭದಲ್ಲಿ ರಾತ್ರಿ ವೇಳೆ ಭಯವಾಗುತ್ತಿತ್ತು. ಈಗ ಆಗಲ್ಲ. ಒಮ್ಮೆ ಹೆದ್ದಾರಿಯಲ್ಲೇ ಗಾಡಿ ಕೆಟ್ಟಾಗ ಅಲ್ಲಿದ್ದ ಗಂಡಸರು ಸಹಾಯ ಮಾಡಿದ್ದು ಮರೆಯಲಾರೆ. ಹೆಣ್ಣುಮಕ್ಕಳಿಗೆ ಯಾವುದಾದರೂ ಒಂದು ವಿದ್ಯೆಯೋ, ಕೌಶಲವೋ ತಿಳಿದಿರಬೇಕು. ಬದುಕು ಯಾವಾಗ ಹೇಗಿರುತ್ತೋ ಗೊತ್ತಿಲ್ಲ. ಗಾಡಿ ಓಡಿಸುವುದಷ್ಟೇ ಅಲ್ಲ, ಟೈರ್ ಬದಲಾಯಿಸುವುದು ಸೇರಿದಂತೆ ಇತರ ಸಣ್ಣಪುಟ್ಟ ರಿಪೇರಿ ಕೆಲಸಗಳೂ ಗೊತ್ತು. ಟ್ರಕ್‌ಗಳಲ್ಲಿ ಲಗೇಜ್ ತಗೊಂಡು ಹೋಗುವಾಗ ದಾರಿಯಲ್ಲಿ ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಯಾವ ಕೆಲಸದಲ್ಲೂ ಹೆಣ್ಣು–ಗಂಡು ಅನ್ನುವ ತಾರತಮ್ಯ ಸಲ್ಲದು. ಮನದಲ್ಲಿ ಧೈರ್ಯ ಮತ್ತು ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು.

ನಿರೂಪಣೆ: ಮಂಜುಶ್ರೀ ಎಂ. ಕಡಕೋಳ

*****

ಮಗ, ಮಗಳು ಅಲ್ಲ, ಮಗುಮಕ್ಕಳು ಎಂಬುದೇ ಸತ್ಯ!

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿಯೇ ಮಗ–ಮಗಳ ನಡುವೆ ಲಿಂಗ ತಾರತಮ್ಯವಿದೆ. ಕೌಟುಂಬಿಕ ಮೌಲ್ಯಗಳಲ್ಲಿ ತರತಮವಿಲ್ಲದೆ, ಮಕ್ಕಳನ್ನು ನೋಡದೆ ಹೇಗೆ ಬೆಳೆಸಬೇಕು ಎಂದು ವಿಜಯಪುರದ ಮನೋಶಾಸ್ತ್ರಜ್ಞೆ ಪಲ್ಲವಿ ಅಡಿಗ ‘ಪ್ರಜಾವಾಣಿ’ಗೆ ನೀಡಿರುವ ಸಲಹೆಗಳು ಇಲ್ಲಿವೆ.

*ಮಗ ಮತ್ತು ಮಗಳ ನಡುವೆ ಜಗಳ ಬಂದಾಗ, ಇಬ್ಬರಿಗೂ ಸಮನಾಗಿಯೇ ತಿಳಿಹೇಳಬೇಕು. ಮಗಳಿಗೆ ಗದರಿ, ಮಗನಿಗೆ ರಿಯಾಯಿತಿ ನೀಡಬಾರದು.

*ಸಣ್ಣ ಸಣ್ಣ ಕೆಲಸಗಳನ್ನೂ ಕೂಡ ಸಮಾನವಾಗಿ ಹಂಚಬೇಕು. ಹೆಣ್ಣುಕೆಲಸ, ಗಂಡು ಕೆಲಸಗಳೆಂದು ವಿಂಗಡಿಸಬಾರದು

*ಅಡುಗೆ, ಮನೆಗೆಲಸ ಮುಂತಾದವನ್ನೂ ಗಂಡುಮಕ್ಕಳಿಗೂ ಹೇಳಿಕೊಡಬೇಕು.

*ಒಂದೇ ಮಗು ಇದ್ದರೂ ಲಿಂಗ ಸಂವೇದನೆ ಇರುವಂತೆ ನೋಡಬೇಕು. ಮೇಲರಿಮೆಯಾಗಲೀ, ಕೀಳರಿಮೆಯಾಗಲೀ ಬೆಳೆಯಕೂಡದಂತೆ
ಎಚ್ಚರ ವಹಿಸಬೇಕು.

*ಮನೆಯಲ್ಲಿ ಮಕ್ಕಳೊಂದಿಗೆ ಆಗಾಗ ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಕು. ಮಗನ ಬಗ್ಗೆ ಒಲವು, ಮಗಳ ಬಗ್ಗೆ ತಾತ್ಸಾರ ತೋರದೆ, ಇಬ್ಬರಿಗೂ ಸಮನಾಗಿ ಮಾತನಾಡುವ ಅವಕಾಶ ನೀಡಬೇಕು. ಕೇಳುವ ವ್ಯವಧಾನ ತೋರಬೇಕು.

*ಪರಸ್ಪರ ಗೌರವಿಸುವುದನ್ನು ಎಲ್ಲ ಮಕ್ಕಳಿಗೂ ಹೇಳಿಕೊಡಬೇಕು. ಊಟಕ್ಕೆ ತಟ್ಟೆಹಾಕುವ, ನೀರು ತಂದು ಕೊಡುವಂಥ ಸಾಮಾನ್ಯ ಕೆಲಸಗಳನ್ನೂ ಮಗನ ಬಳಿ ಮಾಡಿಸಬೇಕು

*ತಮ್ಮದೇ ತಪ್ಪು ಇದ್ದರೂ ಗಂಡು ಮಕ್ಕಳು ಒಪ್ಪುವುದಿಲ್ಲ. ವಾದಿಸುತ್ತಾರೆ. ಈ ಅಹಂಕಾರದ ಮನೋಭಾವವನ್ನು ಮಗುವಾಗಿದ್ದಾಗಲೇ ಸರಿಪಡಿಸಬೇಕು. ಇಲ್ಲದಿದ್ದರೆ ಈ ಪ್ರವೃತ್ತಿ ವರ್ತನಾ ದೋಷವನ್ನು ಹುಟ್ಟುಹಾಕುತ್ತದೆ.

*ಕೌಟುಂಬಿಕ ಮೌಲ್ಯಗಳನ್ನು ಮಗು ಅನುಸರಿಸುತ್ತ ಇರುತ್ತದೆ ಎಂಬುದು ನೆನಪಿರಲಿ. 1ರಿಂದ 5 ವರ್ಷಗಳವರೆಗೂ ಮೌಲ್ಯಗಳನ್ನು ಕಲಿಯುವ ಪ್ರಯತ್ನ ಮಾಡುತ್ತಿರುತ್ತದೆ. 5 ವರ್ಷಗಳ ನಂತರ ನೀತಿ ಕಥೆಗಳ ಮೂಲಕ ಕೌಟುಂಬಿಕ, ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.

*ಇಂದಿನ ಮಕ್ಕಳಲ್ಲಿ ತಾಳ್ಮೆ ಕಡಿಮೆ, ಸಿಟ್ಟು ಹೆಚ್ಚು. ಅತಿಯಾದ ಮುದ್ದು ಮತ್ತು ಅತಿಯಾದ ಶಿಸ್ತು ಎರಡೂ ಒಳಿತಲ್ಲ. ಮಕ್ಕಳೊಂದಿಗೆ ಸ್ನೇಹ ಮತ್ತು ಸಂಯಮದಿಂದ ಇದ್ದರೆ ಹಂಚಿಕೊಳ್ಳುವ ಗುಣ ಬೆಳೆಯುತ್ತದೆ. ಸಿಟ್ಟಿನ ಮೇಲೆ ಕಡಿವಾಣ ಹಾಕಬಹುದು.

*ಬಾಲ್ಯದಲ್ಲಿ ಕೇಳಿದ್ದನ್ನೆಲ್ಲಾ ಕೊಡಿಸಿ ದೊಡ್ಡವರಾದ ಮೇಲೆ ಗೆರೆ ಕೊರೆಯುತ್ತಾ ಹಟಮಾರಿಗಳಾಗುತ್ತಾರೆ. ಮಕ್ಕಳು ಬೆಳೆಯು ಸ್ನೇಹಿತರಂತೆ ಪರಿಗಣಿಸಿ, ಆರ್ಥಿಕ ಸ್ಥಿತಿಯ ಕುರಿತು ಮನಗಾಣಿಸಬೇಕು.

*ಮಕ್ಕಳಿಗೆ ಸಮಾನ ಅವಕಾಶಗಳನ್ನು ನೀಡುತ್ತ ಅವರಲ್ಲಿರುವ ವಿಶಿಷ್ಟ ಗುಣಗಳಿಗೆ ಉತ್ತೇಜನ ನೀಡುತ್ತ ಬರಬೇಕು. ಅವರಲ್ಲಿ ತಮ್ಮ ಬಗ್ಗೆ ಆತ್ಮವಿಶ್ವಾಸ ಮೂಡಿದರೆ ಒಳ್ಳೆಯ ಮಗುವಾಗಿ ಬೆಳೆಯುವುದು ಸಾಧ್ಯವಾಗುತ್ತದೆ.

*ಮನೆಯ ಮರ್ಯಾದೆ ಮಗಳ ಸ್ವತ್ತಲ್ಲ, ಮಗನ ಜವಾಬ್ದಾರಿಯೂ ಹೌದು. ಇವೆರಡನ್ನೂ ಮನಗಾಣಿಸುವಲ್ಲಿ ಜವಾಬ್ದಾರಿಯುತ ನಡವಳಿಕೆ ಇದ್ದರೆ ಲಿಂಗ ಸಮಾನತೆ ಕೌಟುಂಬಿಕ ಮೌಲ್ಯಗಳಲ್ಲಿ ಮೂಡುತ್ತ ಬರುತ್ತದೆ.


ನಿರೂಪಣೆ: ಸಂಧ್ಯಾರಾಣಿ ಎಚ್‌.ಎಂ

*****

ಹೆಸರು: ಸನಾ ಮಳಗಿ (28), ಹುಬ್ಬಳ್ಳಿ ವಿದ್ಯಾರ್ಹತೆ: ದ್ವಿತೀಯ ಪಿಯುಸಿ. ಸಾಧನೆಯ ಕ್ಷೇತ್ರ: ಪವರ್ ಲಿಫ್ಟಿಂಗ್ (ಸ್ಟ್ರಾಂಗ್ ವುಮೆನ್ ಆಫ್ ಕರ್ನಾಟಕ ಅವಾರ್ಡ್ ವಿನ್ನರ್)

ನಾವು ಹಾಕುವ ಬಟ್ಟೆಗಿಂತ ನಮ್ಮಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಜನ ಜೊತೆಗಿದ್ದಾಗ ಕಷ್ಟದ ಕೆಲಸವೂ ಸುಲಭವಾಗುತ್ತೆ.

ಸಾಧಿಸಬೇಕೆಂಬ ಹಂಬಲ ಬಲವಾಗಿದ್ದರೆ, ಎಂಥಾ ಟೀಕೆಗಳನ್ನಾದರೂ ಎದುರಿಸಬಹುದು. ಆದರೆ ಕುಟುಂಬದವರ ಬೆಂಬಲ ತುಂಬಾ ಮುಖ್ಯ. ನನ್ನ ಸಾಧನೆಗೆ ಬೆಂಬಲವಾಗಿ ನಿಂತವರು ನನ್ನ ಅಪ್ಪ ಮತ್ತುಅಣ್ಣಂದಿರು. ಪವರ್ ಲಿಫ್ಟ್ ಮಾಡುವಾಗ ಧರಿಸುವ ಬಟ್ಟೆ ಬಗ್ಗೆ ನನ್ನ ಅಮ್ಮನಿಗೆ ಆರಂಭದಲ್ಲಿ ತುಸು ಅಸಮಾಧಾನವಿತ್ತು. ಹೆಣ್ಣು ಮಕ್ಕಳು ಆ ರೀತಿ ಬಟ್ಟೆ ಧರಿಸುವುದರಿಂದ ಸಮಾಜ ಅವರನ್ನು ನೋಡುವ ದೃಷ್ಟಿಯೇ ಬೇರೆ ಎಂದು.ಆದರೆ ಅಪ್ಪ ನೈತಿಕ ಬೆಂಬಲ ನೀಡುವುದರ ಜೊತೆಗೆನಾನು ಭಾಗವಹಿಸಿದ ಮೊದಲ ಸ್ಪರ್ಧೆಗೆ ಜೊತೆಗೆ ಬಂದಿದ್ದರು.

ನನ್ನ ಮಗಳು ಪಡುವ ಕಷ್ಟ ನನಗೆ ಗೊತ್ತಿದೆ. ಆಕೆಖಂಡಿತ ಸಾಧನೆ ಮಾಡೇ ಮಾಡುತ್ತಾಳೆ ಎಂದು ಹೀಯಾಳಿ
ಸಿದ ಜನರಿಗೆ ಅಪ್ಪ ನೀಡುತ್ತಿದ್ದ ಉತ್ತರವೇ ಈ ಕ್ಷೇತ್ರದಲ್ಲೇ ಸಾಧಿಸಲು ನನಗೆ ಪ್ರೇರಣೆಯಾಯಿತು.

ಶಾಲಾ-ಕಾಲೇಜು ದಿನಗಳಲ್ಲೇ ಕ್ರೀಡೆಯಲ್ಲಿ ಆಸಕ್ತಿ ಇತ್ತು. ನೌಕರಿ ಪಡೆಯಬೇಕೆಂಬ ಉದ್ದೇಶದಿಂದ ಐದಾರು ವರ್ಷದ ಹಿಂದೆ ರನ್ನಿಂಗ್ ಹಾಗೂ ಗುಂಡು ಎಸೆತ ಪ್ರ್ಯಾಕ್ಟೀಸ್‌ ಮಾಡಲು ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಹೋಗುತ್ತಿದ್ದೆ. ಪಕ್ಕದಲ್ಲೇ ಜಿಮ್ ನಡೆಸುತ್ತಿದ್ದ ತರಬೇತುದಾರ ಅಬ್ದುಲ್ ಮುನಾಫ್ ಅವರು ನನ್ನಲ್ಲಿರುವ ಪ್ರತಿಭೆ ಗುರುತಿಸಿ, ಉಚಿತವಾಗಿ ಪವರ್ ಲಿಫ್ಟಿಂಗ್ ತರಬೇತಿ ನೀಡಿದರು. ಅವರ ಪ್ರೋತ್ಸಾಹ, ತರಬೇತಿ ಪರಿಣಾಮ 2017 ರಿಂದ ಸತತವಾಗಿ ನಾಲ್ಕು ವರ್ಷ ‘ಸ್ಟ್ರಾಂಗ್ ವುಮೆನ್ ಆಫ್ ಕರ್ನಾಟಕ ಅವಾರ್ಡ್’ ನನಗೆ ದೊರೆತಿದೆ.

ನಿತ್ಯ ಕನಿಷ್ಠ ನಾಲ್ಕು ಗಂಟೆ ಪ್ರ್ಯಾಕ್ಟೀಸ್‌ ಮಾಡುತ್ತಿದ್ದೆ. ಮನೆಗೆ ಹೋಗುವಾಗ ರಾತ್ರಿ ತಡವಾಗುತ್ತಿತ್ತು. ಆಗ ಕೂಡ ಜನ ಟೀಕೆ ಮಾಡುತ್ತಿದ್ದರು. ಗುರಿ ತಲುಪುವುದಷ್ಟೆ ನನ್ನ ಉದ್ದೇಶವಾಗಿದ್ದರಿಂದ ನಾನು ಅವರ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಕೆಲ ಕಡೆ ತರಬೇತಿ ಪಡೆಯುವ ಸಂದರ್ಭದಲ್ಲಿ ಮಹಿಳೆಯರು ದೈಹಿಕ, ಮಾನಸಿಕ ದೌರ್ಜನ್ಯವನ್ನು ಎದುರಿಸಬೇಕಾ
ಗುತ್ತದೆ. ಆಗ ಅದನ್ನು ಸಹಿಸಿಕೊಳ್ಳದೇ,ಮೆಟ್ಟಿ ನಿಲ್ಲುವ ಸಾಹಸತೋರಬೇಕು. ಗುರಿಎಷ್ಟುಮುಖ್ಯವೋ,ಸ್ವಾಭಿಮಾನವೂ ಅಷ್ಟೆ ಮುಖ್ಯ.

–ನಿರೂಪಣೆ: ಗೌರಮ್ಮ ಕಟ್ಟಿಮನಿ

*******

ಜಯಲಕ್ಷ್ಮಿ ಪಾಟೀಲ್‌ನಟಿ, ಕವಯತ್ರಿ, ಸಂಘಟಕಿ

ಸೃಜನಶೀಲ ಕ್ಷೇತ್ರ, ಮನರಂಜನಾ ಕ್ಷೇತ್ರ ಅಂತ ತಗೊಂಡಾಗ ನಾವು ಭಾಳ ನಿರಾಶಾವಾದಿಗಳಾಗೊ ಅಗತ್ಯ ಬೀಳೂದಿಲ್ಲ ಅಂತ ಅನಸ್ತದ. ಅಭಿನಯ, ನಟನೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ಜಾಹೀರಾತು... ಅಂತೆಲ್ಲಾ ನಾವೇನು ಕರೀತಿವಿ, ಈ ಕ್ಷೇತ್ರದೊಳಗ ಮಹಿಳೆಯರ ಅಗತ್ಯ ಭಾಳ ಐತಿ. ಇದರಿಂದಾಗಿಅಲ್ಲಿ ಸಿಗೊ ಅವಕಾಶಗಳ ಬಗ್ಗೆ ಆಗಲಿ, ಸಮಾನ ವೇತನದ ಬಗ್ಗೇನೇ ಆಗಲಿ ನಾವು ಹೆಚ್ಚೇನೂ ಹತಾಶರಾಗಬೇಕಿಲ್ಲ.

ಧಾರಾವಾಹಿಯಲ್ಲಿ ಹೆಣ್ಮಕ್ಕಳಿಗೆ ಛಲೊ ಸಂಭಾವನೆ ಐತಿ. ಕೆಲವೊಮ್ಮೆ ತಡ ಆಗ್ತದ, ಆದ್ರ ಅದು ಹೆಣ್ಮಕ್ಕಳಿಗೆ ಮಾತ್ರ ಅಲ್ಲ, ಎಲ್ಲಾರಿಗೂ ಆಗ್ತದ. ಸಿನಿಮಾ ಕ್ಷೇತ್ರ ತಗೊಳ್ಳೋದಾದ್ರ, ಅದ್ರಾಗ ದೊಡ್ಡ ದೊಡ್ಡ ಸ್ಟಾರ್‌ ನಟರಿಗೆ ಸಿಗೊ ಸಂಭಾವನೆನೇ ಬ್ಯಾರೆ, ನಟಿಯರಿಗೆ,ಅದರಲ್ಲೂ ಪೋಷಕ ನಟಿಯರಿಗೆ ಸಿಗೊ ಸಂಭಾವನೆನೇ ಬ್ಯಾರೆ. ಅಲ್ಲಿ ಸಮಾನತೆ ತರಬೇಕಾದ್ರ ಭಾಳ ದೊಡ್ಡ ಮಟ್ಟದ
ಪರಿವರ್ತನೆ ಆಗಬೇಕು.

ಆದ್ರ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಒಂದು ಐತಿ. ಏನಂದ್ರ, ಇಲ್ಲಿ ಮಹಿಳೆಯರನ್ನ ಅದೇ ಸಾಂಪ್ರದಾಯಿಕ ಚೌಕಟ್ಟಿನ್ಯಾಗ ತುರುಕೊ ಛಾಳಿ ಭಾಳ ದಟ್ಟವಾಗೇಐತಿ. ತಿರಗಾಮುರಗಾ ಅವೇ ಜವಾಬ್ದಾರಿಗಳು, ಅವವೇ ಪಾತ್ರಗಳು, ಅವೇ ಅವಕಾಶಗಳು... ಭಾಳಷ್ಟು ಜನ ಹೆಣ್ಮಕ್ಕಳೂ ಅವನ್ನೇ ಒಪ್ಪಿಕೊಂಡು ಸಿದ್ಧಸೂತ್ರಗಳೊಳಗ ಸುತ್ತುಹೊಡಿತಾರ. ಹೆಣ್ಮಕ್ಕಳನ್ನ ನೋಡುವ ಹಾಗೂಬಿಂಬಿಸುವ ಈ ಪ್ರವೃತ್ತಿ ಭಾಳ ಬದಲಾಗಬೇಕು. ಸ್ವತಃ ಹೆಣ್ಮಕ್ಕಳು ಇದನ್ನ ಮೀರಲಾಕ ಪ್ರಯತ್ನ ಪಡಬೇಕು. ಹೊಸತನದ ಕಡೆ ನಾವು ತುಡಿಬೇಕು. ಈ ಕಾಲದ ಹೆಣ್ಮಕ್ಕಳಾಗಿ, ಹೊಸತನವನ್ನ ಆವಾಹನೆ ಮಾಡಿಕೊಳ್ಳಾಕ ಹೆದರಬಾರದು. ನಾವು ಹೆಚ್ಚು ಮುಕ್ತವಾಗಬೇಕು, ಹೊಸ ದಾರಿಗಳೆಡೆಗೆ ದೃಷ್ಟಿ ಹರಿಸಬೇಕು. ಆದ್ರ, ಯಾರೂ ನಡೆಯದ ದಾರಿಗಳು ಯಾವತ್ತೂ ಸುಲಭವಾಗಿರೂದಿಲ್ಲ. ಅಲ್ಲಿ ಕಲ್ಲು–ಮುಳ್ಳು ತುಸು ಜಾಸ್ತಿನೇ ಇರ್ತಾವ. ಗಟ್ಟಿತನ ಬೇಕಾಕ್ಕೇತಿ.

ನನ್ನದೇ ಅನುಭವದಿಂದ ಹೇಳಬೇಕಂದ್ರ ನನ್ನ ದಾರಿ,ನಾ ಆರಿಸಿಕೊಂಡ ದಾರಿ, ನಾ ನಡೆದ ದಾರಿ... ಅದು ಸುಲಭದ್ದೇನೂ ಆಗಿರಲಿಲ್ಲ. ಎದುರಿಸಿ, ಮುಂದೆ ನಡೆದು, ಹಿಂತಿರುಗಿ ನೋಡಿದಾಗ ಎಂಥ ಧನ್ಯಭಾವ ಅಂದ್ರ, ಆ ದಾರಿಯುದ್ದಕ್ಕೂ ಅನುಭವಿಸಿದ ಸಂಕಷ್ಟಗಳು ಹಿಂದೆ ಸರಿದು, ನೆಮ್ಮದಿಯ ಉಸಿರೊಂದು ಎದೆಯಿಂದ ಛಿಲ್ಲನೆ ಚಿಮ್ತದ.

–ನಿರೂಪಣೆ: ಸುಶೀಲಾ ಡೋಣೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT