ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಶುದ್ಧ ನೀರಿನಲ್ಲಿ ಭಾರತದ ಪಾಲು ಶೇ 4! ಗಂಡಾಂತರ ಎಂದ ಪರಿಸರ ತಜ್ಞರು

ಶುದ್ಧ ನೀರಿನ ಬಿಕ್ಕಟ್ಟಿಗೆ ಭಾರತ ಪರಿಹಾರ ಕಂಡುಕೊಳ್ಳಬೇಕು: ತಜ್ಞರು
Last Updated 23 ಮಾರ್ಚ್ 2022, 2:18 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಒಟ್ಟಾರೆ ಶುದ್ಧ ನೀರಿನ ಪೈಕಿ ಶೇ 4ರಷ್ಟು ನೀರು ಹೊಂದಿರುವ ಭಾರತವು ಜಾಗತಿಕ ಜನಸಂಖ್ಯೆಯ ಶೇ 16ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಭಾರತವು ಶುದ್ಧ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.ನೀರಿನ ಬಳಕೆಗೆ ಸುಸ್ಥಿರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಹ ಅವರು ಸಲಹೆ ನೀಡಿದ್ದಾರೆ.

ವಿಶ್ವ ಜಲ ದಿನದ ಪ್ರಯುಕ್ತ ಮಾತನಾಡಿದ ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್‌ಬೀಯಿಂಗ್ ಕೌನ್ಸಿಲ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಲ್ ನಾರಾಯಣ್ ಒಮರ್ ಅವರು, 'ನಲ್ಲಿ ನೀರು ಪೂರ್ತಿ ಒಣಗುವ ಶೂನ್ಯದ ದಿನ ಆರಂಭವಾಗುವ ಹಾಗೂ ಜನರು ತಮ್ಮ ಪಾಲಿನ ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭೀತಿಯಲ್ಲಿ ನಾವು ಬದುಕುತ್ತಿದ್ದೇವೆ' ಎಂದು ಎಚ್ಚರಿಸಿದರು.

ಹವಾಮಾನ ಬದಲಾವಣೆಯಿಂದಾಗಿ ಪರಿಸರ ಮತ್ತು ಪರಿಸರ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಎದುರಾಗಿದ್ದು, ಇದರಿಂದ ನೀರಿನ ಬಿಕ್ಕಟ್ಟು ಎದುರಾಗಿದೆ. ಜತೆಗೆ ಈ ಭೂಮಿ ಮೇಲೆ 220 ಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನ ಪೂರೈಕೆಯಿಂದ ವಂಚಿತರಾಗಿದ್ದಾರೆ ಎಂದು
ಹೇಳಿದರು.

ನೀರಿನ ಪೂರೈಕೆಯೆಂದರೆ ಆರೋಗ್ಯ, ಶಿಕ್ಷಣ, ಆದಾಯ ಮತ್ತು ಗೌರವದ ಸಂಕೇತವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಇದು ಬಹುಮುಖ್ಯ. ಆದರೆ ವಿಶ್ವದ ಒಟ್ಟಾರೆ ಜನಸಂಖ್ಯೆ ಪೈಕಿ ಶೇ 16ರಷ್ಟು ಜನರನ್ನು ಹೊಂದಿರುವ ಭಾರತವು ವಿಶ್ವದ ಶುದ್ಧ ನೀರಿನ ಪೈಕಿ ಶೇ 4ರಷ್ಟು ಮಾತ್ರ ಹೊಂದಿದೆ. ಹೀಗಾಗಿ ಭಾರತವು ಶುದ್ಧ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ನೀರಿನ ಸಂರಕ್ಷಣೆಗೆ ಪ್ರತಿಜ್ಞೆ ಮಾಡಿ: ಪ್ರಧಾನಿ ಮೋದಿ
ನವದೆಹಲಿ(ಪಿಟಿಐ)
: 'ವಿಶ್ವ ಜಲ ದಿನ'ದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನೀರಿನ ಪ್ರತಿಯೊಂದು ಹನಿಯನ್ನು ಉಳಿಸಬೇಕೆಂಬ ತಮ್ಮ ಕರೆಯನ್ನು ಪುನರುಚ್ಚರಿಸಿದ್ದಾರೆ.

ಮಂಗಳವಾರ ಮಾತನಾಡಿದ ಅವರು, 'ಕಳೆದ ಕೆಲವು ವರ್ಷಗಳಿಂದ ನೀರಿನ ಸಂರಕ್ಷಣೆಯು ಸಾಮೂಹಿಕ ಆಂದೋಲನವಾಗುತ್ತಿದೆ. ವಿಶ್ವ ಜಲ ದಿನವಾದ ಇಂದು ನಾವೆಲ್ಲರೂ ನೀರಿನ ಪ್ರತಿಯೊಂದು ಹನಿಯನ್ನು ರಕ್ಷಿಸುವ ಶಪಥ ಮಾಡೋಣ. ದೇಶದ ಪ್ರತಿಯೊಬ್ಬ ನಾಗರಿಕರಿಗೆ ಶುದ್ಧ ನೀರಿನ ಪೂರೈಕೆ ಹಾಗೂ ನೀರಿನ ಸಂರಕ್ಷಣೆ ಸಲುವಾಗಿ 'ಜಲ ಜೀವನ ಮಿಷನ್' ಸೇರಿದಂತೆ ಹಲವು ಯೋಜನೆಗಳನ್ನು ಭಾರತ ಸರ್ಕಾರ ಕೈಗೊಂಡಿದೆ' ಎಂದು ಹೇಳಿದ್ದಾರೆ.

ಅಲ್ಲದೆ ನೀರಿನ ಸಂರಕ್ಷಣೆಯಲ್ಲಿ ತೊಡಗಿದ ದೇಶದ ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

**

‘2023ರ ಒಳಗೆ ‘ಯಮುನೆ’ ಶುದ್ಧ: ಸಚಿವ ಸತ್ಯೇಂದರ್ ಜೈನ್
ನವದೆಹಲಿ(ಪಿಟಿಐ):
ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಹರಿಯುವ ಯಮುನಾ ನದಿಯನ್ನು ಪೂರ್ತಿಯಾಗಿ ಶುದ್ಧೀಕರಿಸಲಾಗುತ್ತದೆ. ಶೀಘ್ರವೇ ಈ ನದಿ ನೀರು ಸ್ನಾನ ಮಾಡಲು ಯೋಗ್ಯವಾಗುವಂತೆ ಮಾಡಲಾಗುತ್ತದೆ. ಜೊತೆಗೆ 2023ರ ಡಿಸೆಂಬರ್ ಅಂತ್ಯದೊಳಗೆ ಮೀನಿನ ಸಂತಾನೋತ್ಪತ್ತಿಯನ್ನು ಆರಂಭಿಸಲಾಗುತ್ತದೆ ಎಂದು ದೆಹಲಿ ಜಲ ಸಂಪನ್ಮೂಲ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ಮಂಗಳವಾರ ಅಸೋಚಾಮ್ ಏರ್ಪಡಿಸಿದ್ದ ಆನ್‌ಲೈನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 'ದೆಹಲಿಯಲ್ಲಿ 15 ತಿಂಗಳಲ್ಲಿ ಎಲ್ಲಾ ಪ್ರದೇಶಗಳನ್ನು ಚರಂಡಿಗೆ ಸಂಪರ್ಕ ವ್ಯವಸ್ಥೆಯಡಿ ತರಲಾಗುತ್ತದೆ. 2025ರ ಬದಲಿಗೆ 2023ರ ಡಿಸೆಂಬರ್ ಅಂತ್ಯದೊಳಗೆ ಯಮುನೆಯನ್ನು ಶುದ್ಧೀಕರಿಸುತ್ತೇವೆ. ಎಲ್ಲಾ ಚರಂಡಿಗಳನ್ನು ಪೂರ್ತಿಯಾಗಿ ಶುದ್ಧ ಮಾಡುತ್ತೇವೆ' ಎಂದು ಹೇಳಿದರು.

ಜೊತೆಗೆ ಮುಂದಿನ 5-10 ವರ್ಷಗಳಲ್ಲಿ ದೆಹಲಿಯ ಅಂತರ್ಜಲವನ್ನು 50 ವರ್ಷಗಳ ಹಿಂದಿನ ಮಟ್ಟಕ್ಕೆ ಎತ್ತರಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ 6 ಕೋಟಿ ಮನೆಗಳಿಗೆ ನಲ್ಲಿ ನೀರು
ನವದೆಹಲಿ(ಪಿಟಿಐ):
ಕೇಂದ್ರ ಸರ್ಕಾರದ 'ಜಲ ಜೀವನ ಮಿಷನ್' ಆರಂಭವಾದ ಬಳಿಕ ಹೆಚ್ಚುವರಿಯಾಗಿ ಗ್ರಾಮೀಣ ಪ್ರದೇಶದ 6 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.

ವಿಶ್ವ ಜಲ ದಿನದ ಪ್ರಯುಕ್ತ ಮಂಗಳವಾರ ಮಾತನಾಡಿದ ಅವರು, 'ಭವಿಷ್ಯದ ಜನ ಸಮುದಾಯಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರಕ್ಕೆ ನೀರಿನ ಸಂರಕ್ಷಣೆ ಆದ್ಯತೆಯಾಗಿದೆ. ನಮ್ಮ ಮಕ್ಕಳಿಗಾಗಿ ನೀರಿನ ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಅಲ್ಲದೆ ಎಲ್ಲರಿಗೂ ನಲ್ಲಿ ನೀರಿನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಆಗಸ್ಟ್‌ನಲ್ಲಿ 'ಜಲ ಜೀವನ ಮಿಷನ್' ಯೋಜನೆ ಆರಂಭಿಸಿದ್ದರು. ಈವರೆಗೆ ಈ ಯೋಜನೆಯಡಿ 9.24 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸೌಕರ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT