ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಸ್‌ ಚಂಡಮಾರುತದ ಪರಿಣಾಮ: ನಿಲ್ಲದ ಮಳೆ; ಉಕ್ಕೇರಿದ ನದಿಗಳು

ವಿದ್ಯುತ್‌ ಕಂಬಗಳು, ಮರಗಳು ಧರೆಗೆ l ಪರಿಹಾರ ಕಾರ್ಯಾಚರಣೆ ಚುರುಕು
Last Updated 26 ಮೇ 2021, 22:09 IST
ಅಕ್ಷರ ಗಾತ್ರ

ಕೋಲ್ಕತ್ತ: ಯಸ್‌ ಚಂಡಮಾರುತದ ಪರಿಣಾಮ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದೆ. ಭದ್ರಕ ಜಿಲ್ಲೆಯ ಚಾಂದ್‌ಬಾಲಿಯಲ್ಲಿ 288.3 ಮಿ.ಮೀ. ಮಳೆಯಾಗಿದೆ ಎಂದು ಭುವನೇಶ್ವರದಲ್ಲಿರುವ ಹವಾಮಾನ ಕೇಂದ್ರ ತಿಳಿಸಿದೆ.

ರಾಜ್ಯದ ಒಟ್ಟು 314ರಲ್ಲಿ 36 ತಾಲ್ಲೂಕುಗಳಲ್ಲಿ ಕನಿಷ್ಠ 110 ಮಿ.ಮೀ.ನಿಂದ ಗರಿಷ್ಠ 304 ಮಿ.ಮೀ.ನಷ್ಟು ಮಳೆಯಾಗಿದೆ. 37 ತಾಲ್ಲೂಕುಗಳಲ್ಲಿ 50ರಿಂದ 100 ಮಿ.ಮೀ. ನಷ್ಟು ಮಳೆಯಾಗಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೇನ ತಿಳಿಸಿದ್ದಾರೆ. ಮುಂದಿನ 48 ಗಂಟೆಗಳ ಅವಧಿಗೆ ಒಂಬತ್ತು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ತೆರವು ಕೆಲಸ ಆರಂಭ: ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಸಮಗೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ರಸ್ತೆ ಸಂಚಾರ ಸೇರಿದಂತೆ ಸಂಪರ್ಕ ವ್ಯವಸ್ಥೆಯನ್ನು ಸಮಸ್ಥಿತಿಗೆ ತರಲು ಶ್ರಮಿಸಲಾಗುತ್ತಿದೆ. ಚಂಡಮಾರುತ ಪೀಡಿತ ಪ್ರದೇಶಗಳನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಅವಿರತವಾಗಿ ಕೆಲಸ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಳಿಯ ರಭಸಕ್ಕೆ ಸಿಲುಕಿ ಲಕ್ಷಾಂತರ ಮನೆಗಳು ಕುಸಿದಿವೆ. ಮನೆಗಳಲ್ಲಿ ಸಿಲುಕಿದದ ನೂರಾರು ಜನರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು: ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಭಾರಿ ಅಲೆಗಳೆದ್ದು, ನೀರು ಉಕ್ಕಿ ಹರಿದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಸಮುದ್ರ ತೀರದ ಅನೇಕ ರಸ್ತೆಗಳಲ್ಲಿ ಹಲವು ಅಡಿಗಳಷ್ಟು ನೀರು ನಿಂತಿದೆ. ಪೂರ್ವ ಮೇದಿನಿಪುರದ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.

ಕೆಲವೆಡೆ ಎದೆಯ ಮಟ್ಟದಲ್ಲಿ ನೀರಿನಿಂದ ತುಂಬಿದ್ದ ರಸ್ತೆಗಳಲ್ಲೇ ಜನರು ನಡೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತಲುಪಿದ್ದಾರೆ. ಪೂರ್ವ ಮೇದಿನಿಪುರದ ಕೆಲವು ಭಾಗಗಳಲ್ಲಿ ಸೇನೆಯ ಯೋಧರು ಧಾವಿಸಿ, ಸ್ಥಳೀಯರನ್ನು ರಕ್ಷಿಸಿದ್ದಾರೆ. ಶಂಕರಪುರ ಕರಾವಳಿಯಲ್ಲಿದ್ದ ಒಂದು ಶಾಲೆಯೇ ಕೊಚ್ಚಿಹೋಗಿದೆ. ಬೀದಿ ನಾಯಿಗಳು, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗುವುದು, ವಾಹನಗಳು ಉರುಳಿರುವುದೇ ಮುಂತಾದ ದೃಶ್ಯಗಳು ಬುಧವಾರ ಕಾಣಿಸಿವೆ.

ಒಡಿಶಾದ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಆದ್ದರಿಂದ ಜನರನ್ನು ಸ್ಥಳಾಂತರಿಸುವ ಕೆಲಸ ಬುಧವಾರವೂ ನಡೆದಿತ್ತು. ಗುರುವಾರವೂ ಸಮುದ್ರದಲ್ಲಿ ಭಾರಿ ಅಲೆಗಳು ಕಾಣಿಸಲಿವೆ ಮತ್ತು ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಕಟ್ಟೆಚ್ಚರ
ರಾಂಚಿ: ಪಕ್ಕದ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಸುತ್ತಿರುವ ಯಸ್ ಚಂಡಮಾರುತವು ಬುಧವಾರ ಮಧ್ಯರಾತ್ರಿ ಹೊತ್ತಿಗೆ ಜಾರ್ಖಂಡ್ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ತಗ್ಗು ಪ್ರದೇಶದ ಜನರನ್ನು ತೆರವುಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪೂರ್ವ ಮತ್ತು ಪಶ್ಚಿಮ ಸಿಂಹಭೂಮ ಪ್ರದೇಶ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಅಮಿತಾಭ್ ಕೌಶಾಲ್ ತಿಳಿಸಿದ್ದಾರೆ.

‘ವೇಗದ ಗಾಳಿ ಬೀಸುತ್ತಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಶಿಥಿಲ ಮನೆಗಳಲ್ಲಿ ವಾಸಿಸುತ್ತಿದ್ದ 6 ಸಾವಿರಕ್ಕೂ ಹೆಚ್ಚು ಜನರನ್ನು ತೆರವು ಮಾಡಿದ್ದೇವೆ. ಅವರಿಗೆ ಸುರಕ್ಷಿತ ಜಾಗದಲ್ಲಿ ನೆಲೆ ಒದಗಿಸಲಾಗಿದೆ’ ಎಂದು ಪೂರ್ವ ಸಿಂಹಭೂಮದ ಜಿಲ್ಲಾಧಿಕಾರಿ ಸೂರಜ್ ಕುಮಾರ್ ತಿಳಿಸಿದ್ದಾರೆ.

ವಿದ್ಯುತ್ ಸೌಲಭ್ಯ ಕಡಿತವಾಗುವ ಸಾಧ್ಯತೆಯಿದ್ದು, ನಕ್ಸಲ್‌ಪೀಡಿತ ಪ್ರದೇಶ ಪೊಲೀಸ್ ಠಾಣೆಗಳಿಗೆ ಸ್ಯಾಟಲೈಟ್ ಫೋನ್‌ಗಳನ್ನು ಒದಗಿಸಲಾಗಿದೆ ಎಂದು ಡಿಜಿಪಿ ನೀರಜ್ ಸಿನ್ಹಾ ತಿಳಿಸಿದ್ದಾರೆ. ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಪರಿಹಾರ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT