ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೂಬ್‌ ಮೆಮನ್‌ ಸಮಾಧಿ ಸುಂದರೀಕರಣ: ತನಿಖೆಗೆ ಆದೇಶ

ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಕಾರ್ಯ: ಬಿಜೆಪಿ ಆರೋಪ
Last Updated 8 ಸೆಪ್ಟೆಂಬರ್ 2022, 11:40 IST
ಅಕ್ಷರ ಗಾತ್ರ

ಮುಂಬೈ: ಉಗ್ರಯಾಕೂಬ್‌ ಮೆಮನ್‌ನ ಸಮಾಧಿ ಸ್ಥಳವನ್ನು ಸುಂದರಗೊಳಿಸಲಾಗಿದ್ದು, ಅದನ್ನು ಸ್ಮಾರಕವನ್ನಾಗಿಪರಿವರ್ತಿಸುವ ಪ್ರಯತ್ನವೂ ನಡೆದಿದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.

ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕಾರ್ಯ ನಡೆದಿದೆ ಎಂದು ಬಿಜೆಪಿ ಮುಖಂಡರು ಹೇಳಿರುವುದು ರಾಜಕೀಯ ನಾಯಕರ ನಡುವಣ ವಾಕ್ಸಮರಕ್ಕೆ ಕಾರಣವಾಗಿದೆ.

ಗೃಹಸಚಿವರೂ ಆಗಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಈ ಕುರಿತು ತನಿಖೆ ನಡೆಸುವಂತೆ ಗುರುವಾರ ಆದೇಶಿಸಿದ್ದಾರೆ.ಬಿಜೆಪಿ ಆರೋಪದ ಬೆನ್ನಲ್ಲೇ ಮುಂಬೈ ಪೊಲೀಸರು ಯಾಕೂಬ್‌ ಸಮಾಧಿ ಸ್ಥಳದ ಸುತ್ತ ಅಳವಡಿಸಲಾಗಿದ್ದ ಎಲ್‌ಇಡಿ ದೀಪಗಳನ್ನು ತೆರವುಗೊಳಿಸಿದ್ದಾರೆ.

‘ಮಹಾ ವಿಕಾಸ ಅಘಾಡಿ ಸರ್ಕಾರದ ಅವಧಿಯಲ್ಲಿ ಉಗ್ರನ ಸಮಾಧಿಯನ್ನು ಸ್ಮಾರಕವನ್ನಾಗಿಪರಿವರ್ತಿಸುವ ಪ್ರಯತ್ನ ನಡೆದಿದೆ. ಈ ವಿಚಾರ ಆಡಳಿತದಲ್ಲಿದ್ದ ಸರ್ಕಾರದ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸ. ಈ ಕುರಿತು ಹಿಂದಿನ ಸರ್ಕಾರ ವಿವರಣೆ ನೀಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

‘ರಾಜ್ಯ ಗು‍ಪ್ತಚರ ಇಲಾಖೆ, ಮುಂಬೈ ಪೊಲೀಸ್‌ ಅಥವಾ ಇತರೆ ಯಾರಿಂದಲಾದರೂ ಲೋಪ ಆಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಗೃಹ ಸಚಿವರು ಆದೇಶಿಸಿದ್ದಾರೆ. ಈ ವಿಚಾರ ಹಿಂದಿನ ಮುಖ್ಯಮಂತ್ರಿ ಹಾಗೂ ಆಗಿನ ಗೃಹ ಸಚಿವರ ಗಮನಕ್ಕೆ ಏಕೆ ಬಂದಿಲ್ಲ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತದೆ’ ಎಂದು ಸಂಸ್ಕೃತಿ ಸಚಿವ ಸುಧೀರ್‌ ಮುಂಗಟಿವಾರ್‌ ಹೇಳಿದ್ದಾರೆ.

‘ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉಗ್ರರಾದ ಅಫ್ಜಲ್‌ ಗುರು ಹಾಗೂ ಅಜ್ಮಲ್‌ ಕಸಬ್‌ರನ್ನು ಗಲ್ಲಿಗೇರಿಸಲಾಗಿತ್ತು. ಇಬ್ಬರ ಮೃತದೇಹಗಳನ್ನೂ ರಹಸ್ಯ ಸ್ಥಳಗಳಲ್ಲಿ ಹೂಳಲಾಗಿತ್ತು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ನ ವಕ್ತಾರ ಅತುಲ್‌ ಲೋಂಢೆ ತಿಳಿಸಿದ್ದಾರೆ.

1993ರ ಮಾರ್ಚ್‌ 12ರಂದು ಮುಂಬೈನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲಾಗಿತ್ತು. ಇದರ ಸಂಚುಕೋರ ಯಾಕೂಬ್‌ನನ್ನು 2015ರಲ್ಲಿ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು. ಬಳಿಕ ಆತನ ಮೃತ ದೇಹವನ್ನು ದಕ್ಷಿಣ ಮುಂಬೈನಲ್ಲಿರುವ ಬಡಾ ಖಬರಸ್ತಾನ್‌ನಲ್ಲಿ ಹೂಳಲಾಗಿತ್ತು. ಅಲ್ಲಿ ಈಗ ಮಾರ್ಬಲ್‌ಗಳನ್ನು ಅಳವಡಿಸುತ್ತಿರುವುದಾಗಿಯೂ ಬಿಜೆಪಿ ದೂರಿದೆ.

ಕೋಟ್ಸ್‌...

ಉದ್ಧವ್‌ ಅವರ ಅವಧಿಯಲ್ಲೇ ಸಮಾಧಿಯನ್ನು ಸ್ಮಾರಕವನ್ನಾಗಿಪರಿವರ್ತಿಸುವ ಪ್ರಯತ್ನ ನಡೆದಿದೆ. ಇದು ಅವರ ದೇಶಭಕ್ತಿಯೇ? ಮುಂಬೈ ಬಗೆಗೆ ಅವರು ಹೊಂದಿರುವ ಒಲವು ಇದೇನಾ? –ರಾಮ್‌ ಕದಂ,ಬಿಜೆಪಿ ವಕ್ತಾರ.

ಯಾಕೂಬ್‌ನನ್ನು ಗಲ್ಲಿಗೇರಿಸಿದ್ದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಫಡಣವೀಸ್‌ ಮುಖ್ಯಮಂತ್ರಿಯಾಗಿದ್ದರು. ಗೃಹ ಖಾತೆಯೂ ಅವರ ಬಳಿಯೇ ಇತ್ತು. ಮನೀಷ್‌ ಖಯಂದೆ,ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT