ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿ, ಮಿನಿ ಧರಿಸಿ ತರಗತಿಗೆ ಬರಬಹುದೇ: ಹಿಜಾಬ್‌ ವಿಚಾರಣೆ ವೇಳೆ ಸುಪ್ರೀಂ ಪ್ರಶ್ನೆ

ಹಿಜಾಬ್‌ ಪ್ರಕರಣದ ವಿಚಾರಣೆ: ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 5 ಸೆಪ್ಟೆಂಬರ್ 2022, 22:01 IST
ಅಕ್ಷರ ಗಾತ್ರ

ನವದೆಹಲಿ: ಹಿಜಾಬ್ ಧರಿಸುವುದು ಒಂದು ಅಗತ್ಯ ಧಾರ್ಮಿಕ ಆಚರಣೆ ಎಂಬ ವಾದ ಕುರಿತು ಆಕ್ಷೇಪ ಎತ್ತಿರುವ ಸುಪ್ರೀಂಕೋರ್ಟ್, ‘ಒಂದು ವೇಳೆ ಅದನ್ನು ಸರಿಯೆಂದು ಪರಿಗಣಿಸಿದರೂ, ನಿರ್ದಿಷ್ಟ ಉಡುಪು ಅಥವಾ ಸಮವಸ್ತ್ರದ ನಿಯಮವಿರುವ ಒಂದು ಜಾತ್ಯತೀತ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಅದಕ್ಕೆ ಅನುವು ಮಾಡಿಕೊಡಬಹುದೇ’ ಎಂದು ಪ್ರಶ್ನಿಸಿತು.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಸೋಮವಾರ ಆರಂಭಿಸಿತು.

‘ನೀವು ಧಾರ್ಮಿಕ ಹಕ್ಕನ್ನು ಹೊಂದಿರಬಹುದು ಮತ್ತು ಸಮವಸ್ತ್ರದ ನಿಯಮ ಹೊಂದಿರುವ ಶಿಕ್ಷಣ ಸಂಸ್ಥೆಯಲ್ಲಿ ಈ ಹಕ್ಕನ್ನು ಚಲಾಯಿಸಬಹುದು. ನೀವು ಹಿಜಾಬ್ ಅಥವಾ ಸ್ಕಾರ್ಫ್ ಧರಿಸಲು ಅರ್ಹರಾಗಿರಬಹುದು. ಆದರೆ, ಶಿಕ್ಷಣ ಸಂಸ್ಥೆಯೊಳಗೆ ನೀವು ಹಕ್ಕನ್ನು ಹೊಂದಬಹುದೇ? ಸರ್ಕಾರ ನಿಮಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿಲ್ಲ. ಶಾಲೆಗಳಿಗೆ ಸಮವಸ್ತ್ರದಲ್ಲಿ ಬರಬೇಕು ಎಂದು ಹೇಳುತ್ತಿದೆ’ ಎಂದು ಪೀಠ ಹೇಳಿತು.

‘ಗಾಲ್ಫ್ ಕೋರ್ಸ್ ಅಥವಾ ರೆಸ್ಟೋರೆಂಟ್‌ಗಳಿಗೆ ಕೂಡ ವಸ್ತ್ರ ಸಂಹಿತೆಯ ನಿಯಮವಿದ್ದಾಗ,ವಿದ್ಯಾರ್ಥಿಯು ತರಗತಿಯಲ್ಲಿ ಚಿಕ್ಕ ವಸ್ತ್ರಗಳನ್ನು (ಮಿಡಿ' ಅಥವಾ 'ಮಿನಿ') ಧರಿಸುತ್ತೇವೆ ಎನ್ನಬಹುದೇ’ ಎಂದು ಪ್ರಶ್ನಿಸಿತು. ಜೊತೆಗೆ, 'ಹಿಜಾಬ್' ಅನ್ನು 'ಪಗ್ಡಿ' ಅಥವಾ 'ತಿಲಕ’ ಧರಿಸುವುದಕ್ಕೆ ಹೋಲಿಕೆ ಮಾಡಿರುವವಾದಗಳಿಂದ ನ್ಯಾಯಾಲಯ ತೃಪ್ತಿ ಹೊಂದಿದಂತೆ ಕಾಣಲಿಲ್ಲ.

ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ವಾದ ಮಂಡಿಸಿ, ‘ರಾಜ್ಯ ಸರ್ಕಾರವು ಯಾರಿಗೂ ತೊಂದರೆ ಆಗದ ಆದೇಶ ಹೊರಡಿಸಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ವಸ್ತ್ರಸಂಹಿತೆಯನ್ನು ರೂಪಿಸಲುಅವಕಾಶ ಮಾಡಿಕೊಟ್ಟಿದೆ. ಸರ್ಕಾರ ಇದನ್ನು ಸಂಬಂಧಪಟ್ಟ ಸಂಸ್ಥೆಗೆ ಬಿಟ್ಟುಕೊಟ್ಟಿದೆ. ಕೆಲವು ಕಾಲೇಜುಗಳು ಉಡುಪಿಯಲ್ಲಿಯೇ ಹಿಜಾಬ್ ಧರಿಸುವುದನ್ನು ನಿಷೇಧಿಸದಿರಲು ನಿರ್ಧರಿಸಿದ್ದವು’ ಎಂದರು.

‘ಕಾಲೇಜುಗಳು ಹಿಜಾಬ್ ಧರಿಸಲು ಅನುಮತಿಸಿದರೆ, ಕ್ರೈಸ್ತಕಾಲೇಜುಗಳು ಸೇರಿದಂತೆ ಅಲ್ಪಸಂಖ್ಯಾತ ಸಂಸ್ಥೆಗಳು ತಮ್ಮದೇ ಆದ ಸಮವಸ್ತ್ರವನ್ನು ಶಿಫಾರಸು ಮಾಡಲು ಅನುಮತಿಸಲಾಗಿದೆಯೇ’ ಎಂದು ಪೀಠವು ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ನಾವದಗಿ, ‘ಆ ಕುರಿತು ಮಾಹಿತಿ ಕಲೆ ಹಾಕಬಹುದು. ಆದರೆ, ತಮಗೆ ತಿಳಿದಂತೆ, ಉಡುಪಿಯ ಎರಡು ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿದೆ’ ಎಂದರು.

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ‘ಶಿಸ್ತು ಕಾಪಾಡಿಕೊಳ್ಳುವುದಕ್ಕಾಗಿ ವಸ್ತ್ರಸಂಹಿತೆಯ ನಿಯಮವನ್ನುಜಾರಿಗೆ ತರಲಾಗಿದೆ. ಆದರೆ, ಕೆಲವರು ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಇದನ್ನು ಉಲ್ಲಂಘಿಸಲು ಯತ್ನಿಸುತ್ತಿದ್ದಾರೆ’ ಎಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್‌ ಹೆಗ್ಡೆ, ‘ಹಿಬಾಬ್‌ ಧರಿಸುವ ವಿಚಾರವು ಉಡುಪಿಗೆ ಸೀಮಿತ ಘಟನೆಯಾಗಿತ್ತು. ರಾಜಕೀಯ ಕಾರಣಗಳಿಂದ ಅದನ್ನು ರಾಜ್ಯ ಮಟ್ಟದ ವಿಷಯವನ್ನಾಗಿ ಪರಿವರ್ತಿಸಲಾಯಿತು’ ಎಂದರು.

‘ಪ್ರತಿ ಸಾರ್ವಜನಿಕ ಸ್ಥಳಗಳಲ್ಲಿ ವಸ್ತ್ರಸಂಹಿತೆಯಿದೆ. ಉದಾಹರಣೆಗೆ ಗಾಲ್ಫ್‌ ಕೋರ್ಸ್‌.ಇಲ್ಲಿ ವಸ್ತ್ರಸಂಹಿತೆ ಪಾಲಿಸುವುದಿಲ್ಲ ಎಂದು ಹೇಳಿ ಒಳಹೋಗಲು ಸಾಧ್ಯವೇ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್‌ ಧವನ್‌, ‘ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದು ಉತ್ತಮ’ ಎಂದು ಸಲಹೆ ನೀಡಿದರು.ವಾದ ಪ್ರತಿವಾದ ಬುಧವಾರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT