ಬುಧವಾರ, ಮೇ 18, 2022
25 °C

ರಾಜಸ್ಥಾನ | ಮನೆಗೆ ನುಗ್ಗಿ ಯುವಕನ ಕೊಲೆ; ರಕ್ಷಣೆಗೆ ಬಂದ ಕುಟುಂಬದವರ ಮೇಲೂ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಟಾ (ರಾಜಸ್ಥಾನ): ಕಬ್ಬಿಣದ ರಾಡ್ ಹಾಗೂ ಇತರ ಮಾರಕಾಸ್ತ್ರಗಳೊಂದಿಗೆ ಇಲ್ಲಿನ ಗುಮಾನ್‌ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿದ 10 ಮಂದಿ ಕಿಡಿಗೇಡಿಗಳು, 24 ವರ್ಷದ ಯುವಕನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಯುವಕನ ರಕ್ಷಣೆಗೆ ಧಾವಿಸಿದ ಕುಟುಂಬದ ಇನ್ನೂ ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತ ಯುವಕನನ್ನು ಭೋಯ್‌ ಮೊಹಲ್ಲಾದ ನಿವಾಸಿ ಹಾಗೂ ದಿನಗೂಲಿ ಕಾರ್ಮಿಕ ರಾಕೇಶ್‌ ಬಂಜಾರ (24) ಎಂದು ಗುರುತಿಸಲಾಗಿದೆ.

ಬಂಜಾರ ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ, ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಗೋಲು ಮತ್ತು ಅಮನ್‌ ಅವರೊಂದಿಗೆ ಜಗಳವಾಡಿದ್ದರು. ಆ ವೇಳೆ ಇಬ್ಬರಿಗೂ (ಗೋಲು ಮತ್ತು ಅಮನ್‌ಗೆ) ಹೊಡೆದಿದ್ದರು ಎಂದು ಗುಮಾನ್‌ಪುರದ ಸರ್ಕಲ್‌ ಇನ್‌ಸ್ಪೆಕ್ಟರ್‌ ಲಖನ್‌ ಲಾಲ್ ಹೇಳಿದ್ದಾರೆ.

ಅದಾದ ನಂತರ, ಇತರ ಎಂಟು ಮಂದಿಯೊಂದಿಗೆ ಮಧ್ಯರಾತ್ರಿ 1ರ ವೇಳೆಗೆ ಬಂಜಾರ ಮನೆಗೆ ನುಗ್ಗಿದ ಮುಖ್ಯ ಆರೋಪಿಗಳು (ಗೋಲು ಮತ್ತು ಅಮನ್‌), ಬಂಜಾರ ಹಾಗೂ ಆತನ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಂಜಾರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮೃತಪಟ್ಟಿದ್ದಾರೆ. ಬಂಜಾರ ಅವರ ರಕ್ಷಣೆಗೆ ಧಾವಿಸಿದ ಕುಟುಂಬದ ಮೂವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ, ಅಮನ್‌, ಗೋಲು, ಲಕ್ಕಿ ಫೆಫ್ಡಾ, ಬಚ್ಚಾ, ಬಿಜ್ಲಿ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರೋಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದೂ ಲಾಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು