ಶನಿವಾರ, ಡಿಸೆಂಬರ್ 5, 2020
19 °C

ಮೋದಿ, ನಿತೀಶ್ ಬಿಹಾರವನ್ನು ಲೂಟಿ ಮಾಡಿರುವುದು ಯುವಕರಿಗೆ ಗೊತ್ತು: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Rahul Gandhi

ಕಟಿಹಾರ್ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರವನ್ನು 'ಲೂಟಿ ಮಾಡಿದ್ದಾರೆ' ಎಂದು ಮಂಗಳವಾರ ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಅವರನ್ನು ಅಧಿಕಾರದಿಂದ ದೂರ ಉಳಿಸಲು ಜನರು ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ, ವಲಸೆ ಬಿಕ್ಕಟ್ಟು, ಜಿಎಸ್‌ಟಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ಮೂರು ಹೊಸ ಕೃಷಿ ಕಾನೂನುಗಳ ವಿಚಾರವಾಗಿ ಎನ್‌ಡಿಎ ಸರ್ಕಾರವನ್ನು ಟೀಕಿಸಿದರು.

ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮನೆಗಳಿಗೆ ಹಿಂದಿರುಗಲು ಸಾವಿರಾರು ಕಿ.ಮೀ ನಡೆದು ಹೋಗುವಾಗ ಮೋದಿ ಅಥವಾ ನಿತೀಶ್ ಕುಮಾರ್ ಅವರು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಏನನ್ನೂ ಮಾಡಲಿಲ್ಲ. ವಲಸೆ ಕಾರ್ಮಿಕರ ಸಂಚಾರಕ್ಕೆ ಕಾಂಗ್ರೆಸ್ ಬಸ್ಸುಗಳನ್ನು ನೀಡಿತ್ತು. ನಾವು ಅಧಿಕಾರದಲ್ಲಿಲ್ಲ, ಹಾಗಾಗಿ ಲಕ್ಷಾಂತರ ಜನರಿಗೆ ಸಹಾಯ ಮಾಡಲಾಗಲಿಲ್ಲ. ಆದರೆ ನಮಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿದ್ದೇವೆ ಎಂದರು.

ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಕುರಿತಾದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ಮತ್ತು ಬಿಹಾರ ಸಿಎಂ ವಿಫಲರಾಗಿದ್ದಾರೆ. ಇಲ್ಲಿರುವ ಎಲ್ಲ ಯುವಕರನ್ನು ಕೇಳಲು ನಾನು ಬಯಸುತ್ತೇನೆ, ಮೋದಿ ಜಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಹೇಳಿದ್ದರು, ನಿತೀಶ್ ಜಿ ಕೂಡ ಅದನ್ನೇ ಹೇಳಿದ್ದರು, ಆದರೆ ಉದ್ಯೋಗಗಳು ಎಲ್ಲಿವೆ? ಇಂದು ಯುವಕರು ಏಕೆ ನಿರುದ್ಯೋಗಿಗಳಾಗಿದ್ದಾರೆ? ಎಂದು ತಿಳಿಸಿದರು.

ಇತ್ತೀಚೆಗೆ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ಬಗ್ಗೆ ರೈತರು ಮೋದಿಯ ಮೇಲೆ ಕೋಪಗೊಂಡಿದ್ದಾರೆ. ಅದಕ್ಕಾಗಿಯೇ ಪಂಜಾಬ್‌ನ ರೈತರು ನರೇಂದ್ರ ಮೋದಿ, ಅಂಬಾನಿ ಮತ್ತು ಅದಾನಿಯವರ ಪ್ರತಿಮೆಗಳನ್ನು ದಸರಾ ಆಚರಣೆ ವೇಳೆ ಸುಟ್ಟುಹಾಕಿದರು. ಸತ್ಯವು (ಈ ಕಾನೂನುಗಳ) ಪಂಜಾಬ್‌ನಲ್ಲಿ ಹೊರಬಂದಿದೆ. ಬಿಹಾರದಲ್ಲಿಯೂ ಹೊರಬಂದಿದೆ. ನೋಟು ನಿಷೇಧವು ಬಡವರಿಗೆ ನೋವುಂಟು ಮಾಡಿದೆ ಆದರೆ ದೊಡ್ಡ 'ಆಯ್ಕೆಮಾಡಿದ' ಕಾರ್ಪೊರೇಟ್‌ಗೆ ಲಾಭವಾಯಿತು ಮತ್ತು ಜಿಎಸ್‌ಟಿಯು ಸಣ್ಣ ವ್ಯಾಪಾರಿಗಳಿಗೆ ಹಾನಿ ಮಾಡಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಉತ್ಪಾದಿಸುವ ಒಟ್ಟು ಮೆಕ್ಕೆಜೋಳದ ಪೈಕಿ ಕನಿಷ್ಠ ಶೇ 20 ರಷ್ಟು ಬಿಹಾರದಿಂದಲೇ ಬಂದಿದೆ. ಆದರೆ 'ನಿಮಗೆ ಸರಿಯಾದ ಬೆಲೆ ಸಿಗುತ್ತದೆಯೇ? ನಿಮಗೆ ಸರಿಯಾದ ಬೆಲೆಯನ್ನು ನೀಡಲು ಮೋದಿ ಜಿ ಮತ್ತು ನಿತೀಶ್ ಜಿ ಏನು ಮಾಡಿದ್ದಾರೆ?. ನರೇಂದ್ರ ಮೋದಿ ಮತ್ತು ನಿತೀಶ್ ಜಿ ಅವರು ಒಟ್ಟಿಗೆ ಬಿಹಾರವನ್ನು ಲೂಟಿ ಮಾಡಿದ್ದಾರೆ ಎಂಬುದು ಬಿಹಾರದ ಪ್ರತಿಯೊಬ್ಬ ಯುವಕರಿಗೆ ತಿಳಿದಿದೆ. ಅವರು ಬಿಹಾರದ ಸಣ್ಣ ವ್ಯಾಪಾರಿಗಳನ್ನು ನಾಶಪಡಿಸಿದ್ದಾರೆ. ಈಗ ಬಿಹಾರದ ಯುವಕರು ಮತ್ತು ರೈತರು ಮಹಾಘಟಬಂಧನಕ್ಕೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ' ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು