ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರ ಸಮಿತಿ ನೇಮಕವು ಪ್ರಕರಣ ಮುಚ್ಚಿಹಾಕುವ ಹುನ್ನಾರದ ಭಾಗ: ಕಾಂಗ್ರೆಸ್‌

ಅದಾನಿ ಸಮೂಹದ ವಿರುದ್ಧದ ಪ‍್ರಕರಣ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆರೋಪ
Last Updated 16 ಫೆಬ್ರುವರಿ 2023, 14:32 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸುವಂತೆ ಮತ್ತೊಮ್ಮೆ ಆಗ್ರಹಿಸಿರುವ ಕಾಂಗ್ರೆಸ್‌, ಪ್ರಕರಣದ ತನಿಖೆಗಾಗಿ ತಜ್ಞರ ಸಮಿತಿ ನೇಮಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿದೆ.

ಕೇಂದ್ರದ ನಡೆಯು ಪ್ರಕರಣ ಮುಚ್ಚಿಹಾಕುವ ಹುನ್ನಾರದ ಭಾಗ. ಜೆಪಿಸಿ ಬಿಟ್ಟು ಬೇರೆ ಯಾವುದೇ ಸಮಿತಿಯಿಂದ ಪ್ರಕರಣದ ತನಿಖೆ ನಡೆದರೂ ಅದಾನಿ ಸಮೂಹ ಹಾಗೂ ಕೇಂದ್ರ ಸರ್ಕಾರದ ನಡುವಣ ಸಂಬಂಧ ಎಂತಹುದು ಎಂಬುದು ಬಹಿರಂಗವಾಗುವುದಿಲ್ಲ ಎಂದು ಹೇಳಿದೆ.

‘ಆರೋಪಗಳು ಆಡಳಿತಾರೂಢ ಬಿಜೆಪಿ ಹಾಗೂ ಅದಾನಿ ಸಮೂಹದ ನಡುವಣ ಆತ್ಮೀಯತೆಗೆ ಸಂಬಂಧಿಸಿದ್ದಾಗಿವೆ. ಹೀಗಿರುವಾಗ ಕೇಂದ್ರದಿಂದ ರಚನೆಯಾಗುವ ಸಮಿತಿಯ ತನಿಖೆಯಲ್ಲಿ ಪಾರದರ್ಶಕತೆ ಕಾಣಲು ಸಾಧ್ಯವೇ. ಇದು ಪ್ರಕರಣವನ್ನು ಬಹಳ ವ್ಯವಸ್ಥಿತವಾಗಿ ಮುಚ್ಚಿಹಾಕುವ ಹುನ್ನಾರದ ಭಾಗ. ಸಾಕ್ಷ್ಯಗಳನ್ನು ಸುಲಭವಾಗಿ ನಾಶಪಡಿಸಲು ಕೇಂದ್ರ ಆಯ್ದುಕೊಂಡಿರುವ ಮಾರ್ಗ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್‌ ಗುರುವಾರ ದೂರಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆಗೆ ಈಗ ಜಾರಿಯಲ್ಲಿರುವ ನಿಯಂತ್ರಣ ವ್ಯವಸ್ಥೆ ಮತ್ತು ನಿಯಂತ್ರಣ ಸಂಸ್ಥೆಗಳ ಪಾತ್ರದ ಮೌಲ್ಯಮಾಪನಕ್ಕೆ ತಜ್ಞರ ಸಮಿತಿ ರಚಿಸಲು ನಮ್ಮ ಅಭ್ಯಂತರವೇನೂ ಇಲ್ಲ ಎಂದು ಕೇಂದ್ರ ಸರ್ಕಾರವು ಇದೇ 13ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸಮಿತಿಯ ಸದಸ್ಯರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕೆಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

‘ಸರ್ಕಾರ ಮತ್ತು ಅದಾನಿ ಸಮೂಹ ಸೇರಿಕೊಂಡು ತಜ್ಞರ ಸಮಿತಿ ರಚನೆಯ ನಾಟಕವಾಡುತ್ತಿವೆ. ಸಮಿತಿಯ ಸದಸ್ಯರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಮೆಹ್ತಾ ಅವರು ಹೇಳಿರುವುದು ಇದನ್ನು ಪುಷ್ಟೀಕರಿಸುವಂತಿದೆ’ ಎಂದು ಜೈರಾಮ್ ರಮೇಶ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT