ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಲಿಸ್ತಾನ್‌ ಭಯೋತ್ಪಾದಕ ಜಾಲದ ಮೇಲೆ ಎನ್‌ಐಎ ದಾಳಿ: 6 ಜನರ ಬಂಧನ

Last Updated 23 ಫೆಬ್ರುವರಿ 2023, 6:08 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಇತ್ತೀಚಿನ ತನ್ನ ರಾಷ್ಟ್ರವ್ಯಾಪಿ ಕಾರ್ಯಾಚರಣೆಯಲ್ಲಿ 8 ರಾಜ್ಯಗಳ 76 ಸ್ಥಳಗಳಲ್ಲಿ ದಾಳಿ ನಡೆಸಿದ್ದು 6 ಜನರನ್ನು ಬಂಧಿಸಿದೆ. ಬಂಧಿತರದಲ್ಲಿ ಖಲಿಸ್ತಾನ್‌ ಭಯೋತ್ಪಾದನಾ ಜಾಲದೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಇದ್ದಾರೆ ಎಂದು ಸಂಸ್ಥೆ ಹೇಳಿದೆ.

ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಎನ್‌ಸಿಆರ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ದಾಳಿ ನಡೆದಿದ್ದು, ಗ್ಯಾಂಗ್‌ಸ್ಟರ್‌ಗಳಾದ ​​ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್‌ಪುರಿಯಾ ಮತ್ತು ಗೋಲ್ಡಿ ಬ್ರಾರ್ ಅವರ ನಿಕಟ ಸಹಚರರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

ಕೆನಡಾ ಮೂಲದ ಭಯೋತ್ಪಾದಕ ಅರ್ಶ್ ದಲ್ಲಾನ ನಿಕಟ ಸಹಚರ ಲಕ್ಕಿ ಖೋಕರ್ ಅಲಿಯಾಸ್ ಡೆನಿಸ್‌ನನ್ನು ದಾಳಿ ವೇಳೆ ಬಂಧಿಸಲಾಗಿದೆ. ಭಟಿಂಡಾ ನಿವಾಸಿಯಾದ ಈತನನ್ನು ರಾಜಸ್ಥಾನದ ಶ್ರೀ ಗಂಗಾನಗರದಿಂದ ಮಂಗಳವಾರ ಬಂಧಿಸಲಾಗಿದೆ. ಕೆನಡಾದಲ್ಲಿ ಅರ್ಶ್ ದಲ್ಲಾ ಜತೆಗೆ ನೇರ ಸಂಪರ್ಕದಲ್ಲಿದ್ದ ಎಂದು ಸಂಸ್ಥೆ ತಿಳಿಸಿದೆ.

ಖೋಕರ್, ಭಯೋತ್ಪಾದನಾ ಸಂಘಟನೆಗೆ ನೇಮಕಾತಿ ಹೊಣೆಗಾರಿಕೆ ಹೊಂದಿದ್ದ ಮತ್ತು ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ದಲ್ಲಾನಿಂದ ಹಣವನ್ನು ಪಡೆದಿದ್ದ. ಪಂಜಾಬ್‌ನಲ್ಲಿ ಅರ್ಶ್ ದಲ್ಲಾ ಸಹಚರರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಭಾರತದಲ್ಲಿ ಪ್ರಮುಖ ದರೋಡೆಕೋರಾಗಿದ್ದ ಹಲವು ಅಪರಾಧಿಗಳು, ಪಾಕಿಸ್ತಾನ, ಕೆನಡಾ, ಮಲೇಷ್ಯಾ, ಫಿಲಿ‍ಪೀನ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಪಲಾಯನಗೈದಿದ್ದಾರೆ ಮತ್ತು ಜೈಲಿನಲ್ಲಿರುವ ಅಪರಾಧಿಗಳೊಂದಿಗೆ ಸೇರಿಕೊಂಡು ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳನ್ನು ಯೋಜಿಸುತ್ತಿದ್ದಾರೆ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.

ಈ ಭಯೋತ್ಪಾದಕ ಗುಂಪುಗಳು ಉದ್ದೇಶಿತ ಹತ್ಯೆಗಳು ಮತ್ತು ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಹವಾಲಾ ಮತ್ತು ಸುಲಿಗೆಗಳ ಮೂಲಕ ತಮ್ಮ ದುಷ್ಕೃತ್ಯಗಳಿಗೆ ಹಣವನ್ನು ಸಂಗ್ರಹಿಸುತ್ತಿವೆ. ಖೋಕರ್‌, ಖಲಿಸ್ತಾನ್ ಲಿಬರೇಶನ್ ಫೋರ್ಸ್, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌, ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡರೇಶನ್‌ ಸೇರಿ ಹಲವಾರು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿದ್ದ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT