ಸೋಮವಾರ, ಅಕ್ಟೋಬರ್ 14, 2019
29 °C
ಸಂಘಟಿತ ಅಪರಾಧದ ವಿರುದ್ಧ ಹೋರಾಟಕ್ಕೆ ಭಾರತ ಕರೆ

ಉಗ್ರ ಸಂಘಟನೆ ವಿರುದ್ಧ ಹೋರಾಟಕ್ಕೆ ವಿಶ್ವಸಂಸ್ಥೆ–ಎಫ್‌ಎಟಿಎಫ್‌ ಸಹಕಾರ ಅಗತ್ಯ:ಭಾರತ

Published:
Updated:
Prajavani

ವಿಶ್ವಸಂಸ್ಥೆ: ಉಗ್ರ ಸಂಘಟನೆಗಳು ಹಾಗೂ ಈ ಸಂಘಟನೆಗಳ ಜತೆ ನಂಟುಹೊಂದಿರುವ ಸಂಘಟಿತ ಅಪರಾಧ ಗುಂಪುಗಳ ಕಡಿವಾಣಕ್ಕೆ ವಿಶ್ವಸಂಸ್ಥೆ ಹಾಗೂ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಸೇರಿದಂತೆ ಇತರೆ ಸಂಘಟನೆಗಳ ನಡುವೆ ಸಮನ್ವಯತೆ ಹಾಗೂ ಸಹಕಾರ ಅಗತ್ಯ ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.  

ಉಗ್ರ ಸಂಘಟನೆಗಳಿಗೆ ಹಣಕಾಸು ಹಾಗೂ ತರಬೇತಿಗೆ ಅಪರಾಧ ಗುಂಪುಗಳು ನೆರವು ನೀಡುತ್ತಿದ್ದು, ಇವುಗಳನ್ನು ಮಟ್ಟ ಹಾಕುವುದು ಅಗತ್ಯ ಎಂದು ಭಾರತ ಉಲ್ಲೇಖಿಸಿದೆ. 

‘ಅಪರಾಧ ತಡೆ ಮತ್ತು ಕ್ರಿಮಿನಲ್‌ ಜಸ್ಟೀಸ್‌’ ವಿಷಯದ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಪೌಲಮಿ ತ್ರಿಪಾಠಿ, ‘ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಗೆ ರಾಷ್ಟ್ರದ ಗಡಿಗಳಾಚೆಯೂ ಸಕ್ರಿಯವಾಗಿರುವ ಅಪರಾಧಿ ಜಾಲಗಳು ಧಕ್ಕೆ ತರುತ್ತಿವೆ. ಉಗ್ರ ಸಂಘಟನೆಗಳಿಗೆ ಈ ಜಾಲವು ಮಾದಕ ವಸ್ತು ಸರಬರಾಜು, ಹಣ ಅಕ್ರಮ ವರ್ಗಾವಣೆ, ಶಸ್ತ್ರಾಸ್ತ್ರಗಳ ಆಮದು, ಗಡಿಗಳಲ್ಲಿ ಉಗ್ರರ ನುಸುಳುವಿಕೆಗೆ ಸಹಾಯ ಮಾಡುತ್ತಿವೆ’ ಎಂದು ಹೇಳಿದರು. 

ಮಾದಕವಸ್ತು ಮಾರಾಟ: ‘ಐಎಸ್‌ಐಎಲ್‌, ಅಲ್‌ ಶಬಾಬ್‌ ಮತ್ತು ಬೋಕೊ ಹರಂನಂತಹ ಉಗ್ರ ಸಂಘಟನೆಗಳು, ಮಾನವ ಕಳ್ಳಸಾಗಣೆ, ಅಪಹರಣ, ನೈಸರ್ಗಿಕ ಸಂಪನ್ಮೂಲಗಳ ಅಕ್ರಮ ಮಾರಾಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಪ್ರಸ್ತುತ ಉಗ್ರರಿಗೂ ಅಪರಾಧಿ ಸಂಘಟನೆಗಳ ಚಟುವಟಿ
ಕೆಗಳಿಗೂ ವ್ಯತ್ಯಾಸವೇ ಇಲ್ಲ ಎಂಬಂತಿದೆ. ಮಾದಕವಸ್ತುಗಳ ಮಾರಾಟದ ಮೂಲಕ ಉಗ್ರ ಸಂಘಟನೆಗಳಿಗೆ ಹಣ ಸರಬರಾಜು ಮಾಡಲಾಗುತ್ತಿದೆ’ ಎಂದರು.

ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ

‘ಸಂಘಟಿತ ಅಪರಾಧ ಗುಂಪುಗಳು ಡ್ರೋನ್‌, ವರ್ಚ್ಯುವಲ್‌ ಕರೆನ್ಸಿ, ಕೃತಕ ಬುದ್ಧಿಮತ್ತೆ ಮುಂತಾದ ನೂತನ ತಂತ್ರಜ್ಞಾನಗಳನ್ನು ಬಳಸುತ್ತಿವೆ. ಇದನ್ನು ತಡೆಯಲು ಆಯಾ ರಾಷ್ಟ್ರಗಳ ತನಿಖಾ ಸಂಸ್ಥೆಗಳು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು. ಮಾದಕವಸ್ತುಗಳ ಸರಬರಾಜಿಗೂ ಕಡಿವಾಣ ಹಾಕಬೇಕಾಗಿದ್ದು, 1.1 ಕೋಟಿ ಜನರು ಮಾದಕವಸ್ತು ಬಳಸುತ್ತಿದ್ದು, ಇವರಲ್ಲಿ 14 ಲಕ್ಷ ಜನರಿಗೆ ಎಚ್‌ಐವಿ ಬಾಧಿಸಿದೆ’ ಎಂದು ತ್ರಿಪಾಠಿ ಮಾಹಿತಿ ನೀಡಿದ್ದಾರೆ. 

Post Comments (+)