ಗಣಿತ ಶಾಸ್ತ್ರದ ನೊಬೆಲ್‌ ‘ಫೀಲ್ಡ್ಸ್‌ ಮೆಡಲ್‌’ ಪಡೆದ ಅಕ್ಷಯ್‌ ವೆಂಕಟೇಶ್‌

7
ಮತ್ತೊಬ್ಬ ಗಣಿತ್ಞನ ಪದಕ ನಾಪತ್ತೆ

ಗಣಿತ ಶಾಸ್ತ್ರದ ನೊಬೆಲ್‌ ‘ಫೀಲ್ಡ್ಸ್‌ ಮೆಡಲ್‌’ ಪಡೆದ ಅಕ್ಷಯ್‌ ವೆಂಕಟೇಶ್‌

Published:
Updated:
Deccan Herald

ನ್ಯೂಯಾರ್ಕ್‌: ಭಾರತೀಯ ಮೂಲದ ಗಣಿತಜ್ಞ ಅಕ್ಷಯ್‌ ವೆಂಕಟೇಶ್‌ಗೆ ಗಣಿತ ವಿಭಾಗದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ’ಫೀಲ್ಡ್ಸ್‌ ಮೆಡಲ್‌’ ಸಂದಿದೆ. 

ದೆಹಲಿಯಲ್ಲಿ ಹುಟ್ಟಿದ ಅಕ್ಷಯ್‌ ವೆಂಕಟೇಶ್‌(36), ಪ್ರಸ್ತುತ ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರು ಗಣಿತದ ಹಲವು ವಿಷಯಗಳಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗಣಿತದ ನೊಬೆಲ್‌ ಎಂದೇ ಕರೆಯಲಾಗುವ ಫೀಲ್ಡ್ಸ್‌ ಮೆಡಲ್‌ ನೀಡಲಾಗಿದೆ. ರಿಯೊ ಡಿ ಜನೈರೊದ ಅಂತರರಾಷ್ಟ್ರೀಯ ಗಣಿತಜ್ಞರ ಸಮ್ಮೇಳನದಲ್ಲಿ ಗುರುವಾರ ಒಟ್ಟು ನಾಲ್ವರು ಗಣಿತಜ್ಞರಿಗೆ ಈ ಪ್ರಶಸ್ತಿ ಸಂದಿದೆ. 

ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಕೌಚರ್‌ ಬಿರ್ಕರ್‌, ಜರ್ಮನಿಯ ಪೀಟರ್‌ ಸ್ಕಾಲ್ಜ್‌ ಹಾಗೂ ಇಟಲಿಯ ಇಟಿಎಚ್‌ ಜೂರಿಕ್‌ ಪ್ರಶಸ್ತಿ ಪಡೆದ ಇತರ ಮೂವರು ಗಣಿತಜ್ಞರು. 

ಪದಕ ನಾಪತ್ತೆ!

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಕೌಚರ್‌ ಬಿರ್ಕರ್‌ ಅವರಿಗೆ ನೀಡಲಾದ ಪದಕ ನಾಪತ್ತೆಯಾಯಿತು. ಇರಾನ್‌ ಮೂಲದ ಕುರ್ದ್‌ ಸಮುದಾಯದ ಬಿರ್ಕರ್‌ ತನಗೆ ನೀಡಲಾದ ಬಂಗಾರದ ಪದಕವನ್ನು ಸಮಾರಂಭದ ಬಳಿಕ ಬ್ರೀಫ್‌ಕೇಸ್‌ನಲ್ಲಿ ಇಟ್ಟಿದ್ದರು. 4 ಸಾವಿರ ಡಾಲರ್‌(ಸುಮಾರು ₹2.7 ಲಕ್ಷ) ಮೌಲ್ಯದ ಪದಕವಿದ್ದ ಬ್ರೀಪ್‌ಕೇಸ್‌ ಕಳ್ಳತನ ಆಗಿರುವುದು ಆನಂತರ ಗೊತ್ತಾಗಿದೆ. ಸಮಾರಂಭದ ಸ್ಥಳದಿಂದ ಸಮೀಪದಲ್ಲಿಯೇ ಖಾಲಿ ಬ್ರೀಪ್‌ಕೇಸ್‌ ಬಿಸಾಡಿರುವುದನ್ನು ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದು, ಇಬ್ಬರು ಶಂಕಿತ ಆರೋಪಿಗಳನ್ನು ಗುರುತಿಸಿದ್ದಾರೆ. 

16ನೇ ವಯಸ್ಸಿನಲ್ಲೇ ಪದವಿ ಪಡೆದ ವೆಂಕಟೇಶ್‌

ಬಾಲ್ಯದಿಂದಲೂ ಚುರುಕು ಸ್ವಭಾವ ಮತ್ತು ಅದ್ಭುತ ಸಾಮರ್ಥ್ಯ ಹೊಂದಿರುವ ವೆಂಕಟೇಶ್‌, ಸಂಶೋಧನೆಯವರೆಗೂ ಅನೇಕ ಸಾಧನೆಗಳನ್ನು ತನ್ನದಾಗಿಸಿಕೊಂಡು ಬಂದವರು. ವೆಂಕಟೇಶ್ ಎರಡು ವರ್ಷದವರಾಗಿದ್ದಾಗ ಅವರ ತಂದೆ–ತಾಯಿ ದೆಹಲಿಯಿಂದ ಆಸ್ಟ್ರೇಲಿಯಾದ ಪರ್ತ್ಗೆ ಸ್ಥಳಾಂತರಗೊಂಡರು. ಆಸ್ಟ್ರೇಲಿಯಾದಲ್ಲಿಯೇ ಬೆಳೆದ ವೆಂಕಟೆಶ್‌, ತನ್ನ 11 ಮತ್ತು 12ನೇ ವಯಸ್ಸಿನಲ್ಲೇ ಭೌತಶಾಸ್ತ್ರ ಹಾಗೂ ಗಣಿತ ಒಲಿಂಪಿಯಾಡ್ಸ್‌ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿ ಗಳಿಸಿದ್ದರು. 

13 ವರ್ಷಕ್ಕಾಗಲೇ ಹೈಸ್ಕೂಲ್‌ ಶಿಕ್ಷಣ ಪೂರ್ಣಗೊಳಿಸಿ ಯೂನಿವರ್ಸಿಟಿ ಆಫ್‌ ವೆಸ್ಟರ್ನ್‌ ಆಸ್ಟ್ರೇಲಿಯಾಗೆ ಪ್ರವೇಶ ಪಡೆದರು. 1997ರಲ್ಲಿ ಗಣಿತದಲ್ಲಿ ಪ್ರಥಮ ದರ್ಜೆಯೊಂದಿಗೆ ಪದವಿ ಪಡೆದರು. ಆಗ ವೆಂಕಟೇಶ್‌ ವಯಸ್ಸು 16 ವರ್ಷ. ನಂತರ 20ನೇ ವಯಸ್ಸಿಗೆ ಪ್ರಿನ್‌ಸ್ಟೆನ್‌ ವಿಶ್ವವಿದ್ಯಾಲದಿಂದ ಪಿಎಚ್‌ಡಿ ಪಡೆದರು. ಆಗಿನಿಂದಲೂ ಪ್ರತಿಷ್ಠಿತ ಎಂಐಟಿಯಲ್ಲಿ ಪೋಸ್ಟ್‌ ಡಾಕ್‌ ಮತ್ತು ಕ್ಲೇ ರಿಸರ್ಚ್‌ ಫೆಲೋ ಆಗಿದ್ದಾರೆ.  ಅಮೆರಿಕದ ಸ್ಟ್ಯಾನ್‌ಪೋರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿ ಸಂಶೋಧನೆ–ಬೋಧನೆ ಮುಂದುವರಿಸಿದ್ದಾರೆ. 

ನಂಬರ್‌ ಥಿಯರಿ, ಅರಿಥ್ಮೆಟಿಕ್‌ ಜಾಮಿಟ್ರಿ, ಟೋಪೋಲಜಿ, ಆಟೋಮಾರ್ಫಿಕ್‌ ಫಾರ್ಮ್ಸ್‌ ಹಾಗೂ ಎರ್ಗೋಡಿಕ್‌ ಥಿಯರಿ ಕುರಿತಾಗಿ ಉನ್ನತ ಕೊಡುಗೆ ನೀಡಿದ್ದಾರೆ. ಈಗಾಲೇ ಷಸ್ತ್ರ(Sastra) ರಾಮಾನುಜನ್‌ ಪ್ರಶಸ್ತಿ, ಓಸ್ಟ್ರೋಸ್ಕಿ ಪ್ರಶಸ್ತಿ, ಇನ್ಫೊಸಿಸ್ ಪ್ರಶಸ್ತಿ ಹಾಗೂ ಸೇಲಂ ಪ್ರಶಸ್ತಿ ಪಡೆದಿದ್ದಾರೆ. 

ಚಾರ್ಲ್ಸ್‌ ಫೀಲ್ಡ್‌ ನೆನಪು

1924ರಲ್ಲಿ ಟೊರಂಟೊದಲ್ಲಿ ಮ್ಯಾಥೆಮೆಟಿಕ್ಸ್‌ ಕಾಂಗ್ರೆಸ್‌ ಆಯೋಜಿಸಿದ್ದ ಕೆನಡಾದ ಗಣಿತಜ್ಞ ಜಾನ್‌ ಚಾರ್ಲ್ಸ್‌ ಫೀಲ್ಡ್ಸ್‌, 1932ರಲ್ಲಿ ಈ ಪ್ರಶಸ್ತಿಯನ್ನು ಪ್ರಾರಂಭಿಸಿದರು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 40 ವರ್ಷ ವಯೋಮಾನಕ್ಕಿಂತ ಕಿರಿಯ ಭರವಸೆಯ ಗಣಿತಜ್ಞರಿಗೆ ಫೀಲ್ಡ್ಸ್‌ ಮೆಡಲ್‌ ಪ್ರದಾನಿಸಲಾಗುತ್ತಿದೆ. ಪ್ರತಿ ಬಾರಿ ಕನಿಷ್ಠ ಇಬ್ಬರು ಅಥವಾ ನಾಲ್ವರು ಗಣಿತಜ್ಞರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಫೀಲ್ಡ್ಸ್‌ ಮೆಡಲ್‌ ಗೌರವದೊಂದಿಗೆ 15 ಸಾವಿರ ಕೆನಡಿಯನ್‌ ಡಾಲರ್‌(ಸುಮಾರು ₹7.90 ಲಕ್ಷ) ನಗದು ಬಹುಮಾನವನ್ನು ನೀಡಲಾಗುತ್ತಿದೆ. 

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !