ಗುರುವಾರ , ನವೆಂಬರ್ 14, 2019
18 °C

ಬ್ರಿಟನ್: 2ವರ್ಷ ಉದ್ಯೋಗ ವೀಸಾ:ಭಾರತೀಯರು ಸೇರಿ ವಿದೇಶಿ ವಿದ್ಯಾರ್ಥಿಗಳಿಗೆ ಅನುಕೂಲ

Published:
Updated:
Prajavani

ಲಂಡನ್: ವಿದೇಶಿ ವಿದ್ಯಾರ್ಥಿಗಳಿಗೆ ಎರಡು ವರ್ಷದ ಉದ್ಯೋಗ ವೀಸಾ ನೀಡುವ ಸೌಲಭ್ಯವನ್ನು ಪುನಃ ಆರಂಭಿಸುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಬುಧವಾರ ಘೋಷಿಸಿದ್ದಾರೆ. ಇದರಿಂದಾಗಿ ಬ್ರಿಟನ್‌ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲಿದೆ.

‘ಭಾರತೀಯ ವಿದ್ಯಾರ್ಥಿಗಳು ಪದವಿ ಪೂರೈಸಿದ ಬಳಿಕ ಉದ್ಯೋಗ ಅನುಭವ ಪಡೆಯಲು ಬಯಸುತ್ತಾರೆ. ಇದರ ಆಧಾರದ ಮೇಲೆ ಅವರು ಉನ್ನತ ಶಿಕ್ಷಣ ಅಧ್ಯಯನ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಸರ್ಕಾರ ಪುನಃ ಈ ಸೌಲಭ್ಯ ನೀಡುತ್ತಿರುವುದು ಸ್ವಾಗತಾರ್ಹ’ ಎಂದು ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ. 

ಅಧ್ಯಯನ ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ತಮ್ಮ ಆಯ್ಕೆಯ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಹುಡುಕಲು ಅಥವಾ ಉದ್ಯೋಗ ನಿರ್ವಹಿಸಲು ಈ ವೀಸಾದಿಂದ ಅವಕಾಶ ದೊರಕಲಿದೆ.

ಮುಂದಿನ ವರ್ಷದಿಂದ ಈ  ಸೌಲಭ್ಯ ಜಾರಿಗೆ ಬರಲಿದೆ. ಬ್ರಿಟನ್ ಸರ್ಕಾರದಿಂದ ಅನುಮೋದನೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ, ಯಾವುದೇ ವಿಷಯದಲ್ಲಿ ಪದವಿ ಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ.

2012ರಲ್ಲಿ ತೆರೇಸಾ ಮೇ ಅವರು ಬ್ರಿಟನ್ ಗೃಹ ಕಾರ್ಯದರ್ಶಿ ಆಗಿದ್ದ ವೇಳೆಯಲ್ಲಿ ಈ ವೀಸಾ ಸೌಲಭ್ಯ ಹಿಂಪಡೆಯಲಾಗಿತ್ತು. ಇದರಿಂದಾಗಿ ಭಾರತ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು ಬ್ರಿಟನ್‌ ವಿ.ವಿಗಳಿಗೆ ದಾಖಲಾಗುವ ಪ್ರಮಾಣ ಇಳಿಮುಖವಾಗಿತ್ತು.

 

ಪ್ರತಿಕ್ರಿಯಿಸಿ (+)