‘ರಾಮನ ಹೆಸರಿನಲ್ಲಿ ಬಂದ ಸರ್ಕಾರ ರಾಮ ವಿರೋಧಿಯಾಗಿದೆ’

7
ಕೈ ಉತ್ಪನ್ನಗಳನ್ನು ಶೂನ್ಯ ತೆರಿಗೆ ಮಿತಿ ವ್ಯಾಪ್ತಿಗೆ ತರಲು ಆಗ್ರಹಿಸಿ ಪ್ರತಿಭಟನೆ

‘ರಾಮನ ಹೆಸರಿನಲ್ಲಿ ಬಂದ ಸರ್ಕಾರ ರಾಮ ವಿರೋಧಿಯಾಗಿದೆ’

Published:
Updated:
ಕೈ ಉತ್ಪನ್ನಗಳಿಗೆ ಶೂನ್ಯ ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಿ ‘ಗ್ರಾಮ ಸೇವಾಸಂಘ’ ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಂಗಕರ್ಮಿ ಪ್ರಸನ್ನ, ನಟ ಕಿಶೋರ್‌ ಹಾಗೂ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೈ ಉತ್ಪನ್ನಗಳನ್ನು ಶೂನ್ಯ ತೆರಿಗೆ ಮಿತಿ ವ್ಯಾಪ್ತಿಗೆ ತರುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈಗ ಮಾತಿಗೆ ತಪ್ಪಿದೆ. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಈಗ ರಾಮ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ’ ಎಂದು ರಂಗಕರ್ಮಿ ಪ್ರಸನ್ನ ಟೀಕಿಸಿದರು.

ಗ್ರಾಮಸೇವಾಸಂಘವು ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಗ್ರಾಮೀಣ ಬಡವರ ವರಮಾನ ಹೆಚ್ಚುವಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು. ಕೇಂದ್ರ ಸರ್ಕಾರ ಬಡವರಿಗೆ ನೀಡುವ ಭರವಸೆಯನ್ನು ಸುಳ್ಳು ಮಾಡುತ್ತಿದೆ. ಸುಳ್ಳು ಅಂಕಿ ಅಂಶಗಳನ್ನು ನೀಡಿ ಜನರನ್ನು ವಂಚಿಸುತ್ತಿದೆ’ ಎಂದು ಅವರು ಆರೋಪಿಸಿದರು.

‘ಜಿಎಸ್‌ಟಿ ಜಾರಿಗೆ ಬಂದು ಒಂದು ವರ್ಷ ಆಯಿತು. ಈಗ ಸರ್ಕಾರ ಸಂಭ್ರಮ ಆಚರಿಸುತ್ತಿದೆ. ಆದರೆ ನಮಗೆ ಇದು ಕರಾಳ ದಿನ. ಜವಾಬ್ದಾರಿ ಇಲ್ಲದ ಸರ್ಕಾರ ಬಡವರು ಹಾಗೂ ಕೈ ಉತ್ಪನ್ನ ಮಾಡುವ ಕರಕುಶಲಕರ್ಮಿಗಳನ್ನು ಮರೆಯುತ್ತಿದೆ’ ಎಂದು ಗ್ರಾಮಸೇವಾ ಸಂಘದ ಸದಸ್ಯೆ ಶ್ಯಾಮಲಾದೇವಿ ಹೇಳಿದರು.

ರಂಗಕರ್ಮಿ ನಾಗರಾಜ್‌ ‘ಜಿಎಸ್‌ಟಿಯಿಂದ ಸಂಗ್ರಹಿಸಲಾದ ವರಮಾನವನ್ನು ಪ್ರಕಟಿಸಿ ಸಂಭ್ರಮಿಸುತ್ತಿರುವುದು ನಾಚಿಕೆಯಾಗುವಂತಹ ವಿಷಯ. ಗಾಂಧೀಜಿ ತತ್ವ ಆದರ್ಶಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆ’ ಎಂದರು.

ಗ್ರಾಮಸೇವಾ ಸಂಘಟನೆ ಅಧ್ಯಕ್ಷ ಯತಿರಾಜ್‌, ‘29 ಕೈ ಉತ್ಪನ್ನಗಳ ಮೇಲೆ ವಿನಾಯಿತಿ ಕೊಡುವುದಾಗಿ ನೀಡಿದ್ದ ಭರವಸೆ ಸುಳ್ಳಾಗಿದೆ. ಪ್ರಧಾನಿ ಸುಳ್ಳು ಹೇಳಿದ್ದಾರೆ. ಗಾಂಧೀಜಿ ಕೊನೆಯದಾಗಿ ‘ಹೇ ರಾಮ್‌’ ಎಂದು ಉದ್ಗರಿಸಿದ್ದರು. ಇದೇ ಘೋಷಣೆಯ ಮೂಲಕ ನಾವು ಹೋರಾಟ ಮುಂದುವರಿಸುತ್ತೇವೆ. ಪರಿಸರ ವಿರೋಧಿ ನಿಲುವು, ಕೋಮು ದಳ್ಳುರಿ ಹುಟ್ಟು ಹಾಕುವುದಕ್ಕೆ ನಮ್ಮ ವಿರೋಧವಿದೆ. ಕೈ ಉತ್ಪನ್ನಗಳು ಲಾಭದಾಯಕವಾಗಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆ’ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !