ಇಂದಿರಾ ಕ್ಯಾಂಟೀನ್‌ ಕೆಡವಿದ ಬಿಬಿಎಂಪಿ

7
* ವಿವಾದಿತ ಪ್ರದೇಶದಲ್ಲಿ ನಿರ್ಮಿಸಿದ್ದ ಕಟ್ಟಡ * ನೆಲಸಮಗೊಳಿಸಿದ್ದಕ್ಕೆ ಸ್ಥಳೀಯರ ಬೇಸರ

ಇಂದಿರಾ ಕ್ಯಾಂಟೀನ್‌ ಕೆಡವಿದ ಬಿಬಿಎಂಪಿ

Published:
Updated:
Deccan Herald

ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭಗೊಂಡು ಇದೇ ಆಗಸ್ಟ್ 16ಕ್ಕೆ ಒಂದು ವರ್ಷ ತುಂಬಲಿದೆ. ಆದರೆ, ನಗರದಲ್ಲಿ ನಿರ್ಮಾಣವಾಗಿದ್ದ ಕ್ಯಾಂಟೀನ್‌ ಕಟ್ಟಡವೊಂದು ವರ್ಷಪೂರ್ಣಗೊಳಿಸುವ ಮುನ್ನವೇ ನೆಲಸಮಗೊಂಡಿದೆ.

ಎಸ್‌.ಕೆ.ಗಾರ್ಡನ್‌ ವಾರ್ಡ್‌ನ ವಿವಾದಿತ ಪ್ರದೇಶದಲ್ಲಿ ನಿರ್ಮಿಸಿದ್ದ ಕ್ಯಾಂಟೀನ್‌ ಕಟ್ಟಡವನ್ನು ಹೈಕೋರ್ಟ್‌ ಆದೇಶ ಮೇರೆಗೆ ಬಿಬಿಎಂಪಿ ಕೆಡವಿದೆ.

ಎಸ್‌.ಕೆ.ಗಾರ್ಡನ್‌ನಲ್ಲಿ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ನವೋದಯ ಗೃಹ ನಿರ್ಮಾಣ ಸಹಕಾರ ಸಂಘದ ನಡುವೆ ವಿವಾದ ಇತ್ತು. ಈ ಬಗ್ಗೆ  ಸಂಘದವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಜಾಗದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯವು 2011ರಲ್ಲಿ ಆದೇಶ ಮಾಡಿತ್ತು. ಅದರ ಹೊರತಾಗಿಯೂ ಬಿಬಿಎಂಪಿ ಇಲ್ಲಿ ಕಟ್ಟಡ ನಿರ್ಮಿಸಿತ್ತು. ಇದೇ ಮಾರ್ಚ್‌ನಲ್ಲಿ ಮಧ್ಯಂತರ ಆದೇಶವನ್ನು ಹೊರಡಿಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರು ಕಟ್ಟಡ ಕೆಡವಲು ಬಿಬಿಎಂಪಿಗೆ ಸೂಚನೆ ನೀಡಿದ್ದರು.

ಕ್ಯಾಂಟೀನ್‌ ಕಳೆದುಕೊಂಡಿದ್ದಕ್ಕೆ ಸಾರ್ವಜನಿಕರು ಬೇಸರಗೊಂಡಿದ್ದಾರೆ.

‘ನಾವು ಇಲ್ಲಿಗೆ ಸಮೀಪದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಕುಟುಂಬ ಸಮೇತ ಊಟಕ್ಕೆ ಕ್ಯಾಂಟೀನ್‌ಗೆ ಬರುತ್ತಿದ್ದೆವು. ಕಟ್ಟಡ ಕೆಡವಿರುವುದರಿಂದ ತೊಂದರೆ ಆಗಿದೆ. ಹೋಟೆಲ್‌ನಲ್ಲಿ ಹೆಚ್ಚಿನ ಹಣ ಪಾವತಿಸಿ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ದರದಲ್ಲಿ ಊಟ ನೀಡುತ್ತಿದ್ದ ಕ್ಯಾಂಟೀನ್‌ನಿಂದ ಅನೇಕ ಬಡವರಿಗೆ ಅನುಕೂಲವಾಗಿದೆ. ಇಲ್ಲಿ ಬೇರೆ ಜಾಗದಲ್ಲಿ ಕೂಡಲೇ ಕ್ಯಾಂಟೀನ್‌ ನಿರ್ಮಿಸಬೇಕು’ ಎಂದು ಕಟ್ಟಡ ಕಾರ್ಮಿಕರಾದ ನಿರ್ಮಲಾ ಒತ್ತಾಯಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು 2017ರ ಆಗಸ್ಟ್‌ 16ರಂದು ಉದ್ಘಾಟನೆ ಮಾಡಿದ್ದರು. ಯೋಜನೆಯನ್ನು ತರಾತುರಿಯಲ್ಲಿ ಜಾರಿಗೊಳಿಸುವ ಭರದಲ್ಲಿ ಬಿಬಿಎಂಪಿ ಉದ್ಯಾನ, ಕೆರೆಯ ಮೀಸಲು ಪ್ರದೇಶ (ಬಫರ್ ಜೋನ್‌), ದೇವಸ್ಥಾನದ ಆಸುಪಾಸಿನ ಪ್ರದೇಶಗಳಲ್ಲಿ ಕ್ಯಾಂಟೀನ್‌ ನಿರ್ಮಿಸಿದ್ದು ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಮರಗಳನ್ನು ಕಡಿದ ಬಗ್ಗೆಯೂ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.

‘ರಾಗಿಮುದ್ದೆ: ಪ್ರಸ್ತಾಪ ಕೈಬಿಟ್ಟ ಬಿಬಿಎಂಪಿ’
ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದೇ 15ರಿಂದ ರಾಗಿಮುದ್ದೆಯನ್ನೂ ನೀಡಬೇಕು ಎಂದು ಬಿಬಿಎಂಪಿ ಉದ್ದೇಶಿಸಿತ್ತು. ಇದಕ್ಕಾಗಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಅಭಿವೃದ್ಧಿಪಡಿಸಿದ್ದ ರಾಗಿಮುದ್ದೆ ತಯಾರಿ ಯಂತ್ರವನ್ನು ಖರೀದಿಸುವ ಪ್ರಸ್ತಾಪವೂ ಪಾಲಿಕೆ ಮುಂದಿತ್ತು. 

‘ಈ ಯಂತ್ರವು ಗಂಟೆಗೆ 250 ರಾಗಿಮುದ್ದೆಗಳನ್ನು ಮಾತ್ರ ತಯಾರಿಸಬಲ್ಲುದು. ಇವುಗಳಿಂದ ನಗರದ ಎಲ್ಲ ಇಂದಿರಾ ಕ್ಯಾಂಟೀನ್‌ಗಳ ಬೇಡಿಕೆ ಪೂರೈಸುವಷ್ಟು ಮುದ್ದೆಗಳನ್ನು ತಯಾರಿಸಲು ಸಾಧ್ಯವಾಗದು. ಹಾಗಾಗಿ ನಾವು ಈ ಯೋಜನೆ ಕೈಬಿಟ್ಟಿದ್ದೇವೆ’ ಎಂದು ಪಾಲಿಕೆ ಜಂಟಿ ಆಯುಕ್ತ (ಹಣಕಾಸು) ವೆಂಕಟೇಶ್‌ ತಿಳಿಸಿದರು.

ಮೇಯರ್‌ ಭರವಸೆ
‘ಬಿಬಿಎಂಪಿ ತಪ್ಪು ಮಾಡಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಾವು ವಿವಾದಿತ ಭೂಮಿಯಲ್ಲಿ ಕ್ಯಾಂಟೀನ್ ನಿರ್ಮಿಸಬಾರದಿತ್ತು. ಹಿಂದಿನ ಕ್ಯಾಂಟೀನ್‌ ಹತ್ತಿರ ಹೊಸ ಭೂಮಿಯನ್ನು ಗುರು
ತಿಸಲಾಗಿದೆ.  ಶೀಘ್ರದಲ್ಲೇ ನೂತನ ಕ್ಯಾಂಟೀನ್ ನಿರ್ಮಿಸಲಾಗುವುದು' ಎಂದು ಮೇಯರ್ ಆರ್.ಸಂಪತ್ ರಾಜ್ ಭರವಸೆ ನೀಡಿದರು.

*
ಸುಮಾರು 200ಕ್ಕೂ ಹೆಚ್ಚು ಜನರು ಈ ಕ್ಯಾಂಟೀನ್‌ನ ಆಹಾರದ ಮೇಲೆ ಅವಲಂಬಿತರಾಗಿದ್ದರು. ಬಿಬಿಎಂಪಿ ಮಾಡಿದ ತಪ್ಪಿನಿಂದ ಜನರು ಸೌಲಭ್ಯ ಕಳೆದುಕೊಳ್ಳುವಂತಾಗಿದೆ.
–ಶಂಕರ್‌ ಪ್ರಸಾದ್‌, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !