ಅಳಿದ ಮುಸುಕಿನ ಜೋಳ ಸಸ್ಯ ವೈವಿಧ್ಯ

ಭಾನುವಾರ, ಜೂನ್ 16, 2019
28 °C
ಇಂದು ಜೀವ ವೈವಿಧ್ಯ ದಿನ ‘ನಮ್ಮ ಆಹಾರ ನಮ್ಮ ಆರೋಗ್ಯ’ ಈ ವರ್ಷದ ಘೋಷವಾಕ್ಯ

ಅಳಿದ ಮುಸುಕಿನ ಜೋಳ ಸಸ್ಯ ವೈವಿಧ್ಯ

Published:
Updated:
Prajavani

ಯಳಂದೂರು: ಮಾನವನ ಜ್ಞಾನ ವಿಕಾಸ ಆಗುತ್ತಿದ್ದಂತೆ ಜೈವಿಕ ಸಂಪನ್ಮೂಲಗಳ ಬಳಕೆಯಲ್ಲೂ ಏರಿಕೆ ಕಂಡಿದೆ. ಅನೇಕ ಸಸ್ಯ, ಪ್ರಾಣಿ, ಪಕ್ಷಿ ಸಂಕುಲಗಳನ್ನು ತನ್ನ ಸುಖಕ್ಕಾಗಿ ಅಳಿಸುತ್ತಲೇ ಬಂದಿದ್ದಾನೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಬೀಜ ಮತ್ತು ರಾಸಾಯನಿಕ ರಹಿತ ಮಣ್ಣಿನಲ್ಲಿ ಬೆಳೆದ ಶುದ್ಧ ಆಹಾರಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಇವುಗಳ ಆವಾಸ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದು, ಜೈವಿಕ ವೈವಿಧ್ಯದ ನಾಶಕ್ಕೆ ಕಾರಣವಾಗಿದೆ. 

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲ ಪ್ರದೇಶ ಬೆಳೆ ವೈವಿಧ್ಯ ಪರಿಸರದ ಪ್ರಭಾವದಿಂದ ರೂಪಿತವಾಗಿತ್ತು. ಇಲ್ಲಿನ ಜನ ಸಮೂಹ ಮತ್ತು ಕೃಷಿಕರು ಪರಂಪರಾಗತ ಬಿತ್ತನೆಗಳಿಗೆ ಆದ್ಯತೆ ನೀಡುತ್ತಿದ್ದರು. ಒಂದೇ ಸ್ಥಳದಲ್ಲಿ ಹತ್ತಾರು ಬೆಳೆ ತೆಗೆಯುತ್ತಿದ್ದರು. ಈಗ ಆಧುನಿಕ ಬೇಸಾಯ ಪದ್ಧತಿ ಇಂತಹ ದೇಶಿ ತಳಿಗಳಿಗೆ ಕೊಡಲಿ ಪೆಟ್ಟಾಗಿ ಕಾಡಿದೆ. ಹತ್ತಾರು ಆಹಾರ ಬೆಳೆಗಳು ಕಣ್ಮರೆಯಾಗುವ ಆತಂಕ ತಂದಿತ್ತಿವೆ.

 ನೆಲ ಮೂಲದಿಂದ ಬೇರ್ಪಟ್ಟ ಕೊರೆಜೋಳ, ಕೆಂಪುಜೋಳ, ಬಿಳಿಜೋಳ, ದೊಡ್ಡಜೋಳ, ಸಣ್ಣಜೋಳವನ್ನು ಈಗ ಬೆಳೆಯುತ್ತಿಲ್ಲ. ಮಳೆ ಅವರೆ, ಸಿಣ್ಣುಗ ಅವರೆ, ನೆಲ್ಲಅವರೆ, ಮದ್ದೆನೆಲ್ಲ, ನಾಡವರೆ, ನೆಲ್ಲಅವರೆ, ಮಳೆತೊಗರಿ, ನಾಡ ತೊಗರಿಗಳನ್ನು ಮಿಶ್ರ ಬೆಳೆಯಾಗಿ ನಾಟಿ ಮಾಡುವುದು ನಿಂತಿದೆ.

‘ಇಂತಹ ಸಮೃದ್ಧ ಬೀಜ ಪರಂಪರೆಯನ್ನು ಈಗ ಹುಡುಕುವುದು ಕಷ್ಟವಾಗಿದೆ. ಇವುಗಳ ಜಾಗದಲ್ಲಿ ಏಕ ನಮೂನೆಯ ಕುಲಾಂತರಿ ಕಾಳು ಮತ್ತು ಜೋಳಗಳು ಆವರಿಸಿವೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯ ಬೆಳೆಗಾರ ಕೆ.ಗುಡಿಯ ಕ್ಯಾತ.

‘ಈಗಲೂ ಇಂತಹ ತಳಿ ವೈವಿಧ್ಯತೆ ಹುಡುಕಿಕೊಂಡು ಬರುವವರಿದ್ದಾರೆ. ಕೆಲವೊಮ್ಮೆ ಕೃಷಿ ವಿಜ್ಞಾನಿಗಳು ಹಾಗೂ ಆಸಕ್ತರು ಬಿತ್ತನೆ ಬೀಜ ಕೊಳ್ಳಲು ಬರುವುದಿದೆ. ಇವರು ಅಭಿವೃದ್ಧಿ ಪಡಿಸುವುದಕ್ಕಿಂತ ಕೃಷಿ ಮಳಿಗೆಗಳಲ್ಲಿ ಇಟ್ಟು ಪ್ರದರ್ಶಿಸುತ್ತಾರೆ. ನಮ್ಮದೇ ಮಣ್ಣಿನಲ್ಲಿ ಬೆಳೆದ ಹತ್ತಾರು ವರ್ಣಮಯ ಜೋಳದ ತಳಿಯನ್ನು ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇವುಗಳ ಜೀವ ವೈವಿಧ್ಯಗಳನ್ನು ದಾಖಲಿಸುವ ಕೆಲಸವಾಗಬೇಕು’ ಎಂದು ಅವರು ಕಳಕಳಿ ವ್ಯಕ್ತಪಡಿಸುತ್ತಾರೆ.

ಬೆಳೆವೈವಿಧ್ಯ ಕಾಪಾಡಿ: ಅರಣ್ಯದ ಸುತ್ತಮುತ್ತ 6 ಬಗೆಯ ಮುಸುಕಿನ ಜೋಳ, 9 ಬಗೆಯ ರಾಗಿ, 5 ಬಗೆಯ ಕುಂಬಳ, ಲಿಂಬೆ ವರ್ಗಕ್ಕೆ ಸೇರಿದ 10ಕ್ಕೂ ಹೆಚ್ಚು ಗಿಡಗಳಿವೆ. 100 ಬಗೆಯ ಸೊಪ್ಪುಗಳಿವೆ. 10 ಗೆಣಸು ಜಾತಿಗಳಿವೆ. 7 ಬಳ್ಳಿ ಜಾತಿಯ ಅವರೆ, 12 ಬಗೆಯ ಬಾಳೆ ಸಂಕುಲಗಳಿವೆ. ಇವುಗಳನ್ನು ಕಾಡಿನ ಪರಿಸರದಲ್ಲೇ ಉಳಿಸಬೇಕು. ಬುಡಕಟ್ಟು ಜನರು ಮತ್ತು ವನ್ಯ ಜೀವಿಗಳು ಇಂತಹ ಮೂಲ ಸಸ್ಯಗಳನ್ನು ತಿಂದುಂಡು ಬದುಕು ಕಟ್ಟಿಕೊಂಡಿವೆ. ಇವುಗಳ ಸ್ಥಳದಲ್ಲಿ ವಾಣಿಜ್ಯ ಕೃಷಿಗೆ ಆದ್ಯತೆ ನೀಡಿದರೆ ಈ ವೈವಿಧ್ಯವೇ ನಾಶವಾಗುತ್ತದೆ. ಇವುಗಳ ಅವಸಾನದಿಂದ ಜೀವಜಾಲದ ಭಾಗವಾದ ನೂರಾರು ಕೀಟ, ಪ್ರಾಣಿ ಮತ್ತು ಹಕ್ಕಿ ಸಂತತಿಗಳ ಮೇಲೆ ಪ್ರಭಾವ ಬೀರುತ್ತವೆ’ ಎಂದು ಏಟ್ರೀ ತಜ್ಞರ ವರದಿಗಳು ಎಚ್ಚರಿಸಿವೆ. 

‘ಸ್ಥಳೀಯರಿಗೆ ಹಕ್ಕು ನೀಡಲಿ’

‘ಜಗತ್ತಿನಲ್ಲಿ ಇರುವ ಜೀವವೈವಿಧ್ಯ ಪ್ರಮಾಣದ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. 40 ಸಾವಿರ ಮಾತ್ರ ಇಲ್ಲಿಯ ತನಕ ದಾಖಲಿಸಲಾಗಿದೆ. ಇಲ್ಲಿನ ಪುರಾತನ ಕ್ಷೇತ್ರ, ಪಳಿಯುಳಿಕೆ, ಅಪೂರ್ವ ವನಸ್ಪತಿ, ನದಿತೊರೆ ಹಾಗೂ ಇಲ್ಲಿನ ದೇಶಿ ಸಂಕರ ಬೆಳೆ ಪದ್ಧತಿಗಳನ್ನು ಉಳಿಸುವ ಮತ್ತು ದಾಖಲಿಸುವ ಕೆಲಸ ಆಗಬೇಕು. ಗ್ರಾಮ–ಅರಣ್ಯ ಸಮಿತಿಗಳು ಈ ದಿಸೆಯಲ್ಲಿ ಹೆಚ್ಚು ಸಕ್ರಿಯವಾಗಬೇಕು’ ಎನ್ನುತ್ತಾರೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ. 

‘ರಾಜ್ಯ ಮಟ್ಟದಲ್ಲಿ ಜೀವ ವೈವಿಧ್ಯ ಮಂಡಳಿ ರಚನೆಯಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇವುಗಳನ್ನು ದಾಖಲಿಸಲು ಆರ್ಥಿಕ ನೆರವು ಮತ್ತು ತರಬೇತಿ ನೀಡುತ್ತದೆ. ಇದರ ನೆರವು ಪಡೆದು ಹಕ್ಕು ಮತ್ತು ಬಾಧ್ಯತೆಗಳನ್ನು ಸ್ಥಳೀಯರಿಗೆ ನೀಡಿದರೆ ಜೀವವೈವಿಧ್ಯೆಯ ಸುಸ್ಥಿರ ಅಭಿವೃದ್ಧಿ ಸಾಧ್ಯ’ ಎನ್ನುತ್ತಾರೆ ಇವರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !