ದೇಶ ಸೇವೆಗೆ ಮಗಳ ಕಳುಹಿಸಿದ ದಿಟ್ಟೆ

ಭಾನುವಾರ, ಮಾರ್ಚ್ 24, 2019
27 °C

ದೇಶ ಸೇವೆಗೆ ಮಗಳ ಕಳುಹಿಸಿದ ದಿಟ್ಟೆ

Published:
Updated:

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿಯ ಸಿಂಗಾನಹಳ್ಳಿ ಗ್ರಾಮದ ಮಹಿಳೆ ಸೋಮಕ್ಕ ಕಡುಬಡತನದಲ್ಲಿಯೇ ಮಗಳನ್ನು ಓದಿಸಿ, ಸೇನೆಯ ಸೇವೆಗೆ ಸೇರಿಸಿದ ದಿಟ್ಟ ಮಹಿಳೆ.

ಸಿಂಗಾನಹಳ್ಳಿ ಗ್ರಾಮವು ಒಂದು‌ ಕುಗ್ರಾಮ ವಾಗಿದೆ. ಸಾಕಷ್ಟು ಮೂಲ ಸೌಕರ್ಯಗಳಿಲ್ಲದೆ ಇದ್ದರೂ ಕೂಡ ಸೋಮಕ್ಕ ತನ್ನ ನಾಲ್ಕು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಆರಂಭದ ದಿನಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಬದುಕು ಸಾಗಿಸುವುದು ಕಷ್ಟಕರವಾದರೂ ಪತಿ ಬಾಲಪ್ಪ ಅವರೊಂದಿಗೆ ಕೂಲಿ ಮಾಡಿ ಜೊತೆಗೆ ಕುರಿ ಸಾಕಾಣಿಕೆ ಆಧಾರವಾಗಿ ಇಟ್ಟುಕೊಂಡು ಆರು ಮಂದಿ ಮಕ್ಕಳಿಗೆ ಶಿಕ್ಷಣ ವಂಚಿತವಾಗದಂತೆ ನೋಡಿಕೊಂಡಿದ್ದಾರೆ.

ಅವರಲ್ಲಿ ಐದು ಮಂದಿ ವಿವಿಧ ಕಾರ್ಯಗಳಲ್ಲಿ ತೊಡಗಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ತನ್ನ ಕಿರಿಯ ಮಗಳಾದ ಲಕ್ಷ್ಮಿಗೆ ಪದವಿ ಶಿಕ್ಷಣ ಕೊಡಿಸಿ, ಭಾರತೀಯ ಗಡಿ ಭದ್ರತಾ ಸೇವೆಗೆ ಕಳುಹಿಸಿದ್ದಾರೆ. ಇದರಲ್ಲಿ ಮಗಳ ಪರಿಶ್ರಮವೂ ಇದೆ.

ಬಳಿಕ ಅನಕ್ಷರಸ್ಥ ಅಮ್ಮನ ಮಹದಾಸೆಯಂತೆ ಲಕ್ಷ್ಮಿ 2013ರಲ್ಲಿ ತಮಿಳುನಾಡಿನಲ್ಲಿ ಸೇನೆಗೆ ಸೇರಿದರು. ಪಂಜಾಬ್‌‌ನಲ್ಲಿ ತರಬೇತಿ ಪಡೆದು ನಂತರ ಪ್ರಸ್ತುತ ಕೋಲ್ಕತಾದಲ್ಲಿ ಗಡಿ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಳಿಕ ಮಾತನಾಡಿದ ತಾಯಿ ಸೋಮಕ್ಕ, 'ಮಕ್ಕಳ‌ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂಬ ಆಸೆಯಿಂದ ಕಡುಬಡತನದಲ್ಲಿ ಒಪ್ಪತ್ತಿನ ಊಟಕ್ಕೂ ಕಷ್ಟವಾಗುತ್ತಿದ್ದ ವೇಳೆ ಕೂಲಿ ಮಾಡಿ, ಜೊತೆಗೆ ಕುರಿಗಳನ್ನು ಸಾಕಾಣಿಕೆ ಮಾಡಿ ಮಗಳಿಗೆ ಉತ್ತಮ ಶಿಕ್ಷಣ ನೀಡಿದ ಪರಿಣಾಮ ದೇಶ ಸೇವೆ ಮಾಡುವ ಅವಕಾಶ ಮಗಳಿಗೆ ಸಿಕ್ಕದೆ. ಜನ್ಮ ಸಾರ್ಥಕತೆ ಪಡೆದಿದೆ' ಎನ್ನುತ್ತಾರೆ.

ಲಕ್ಷ್ಮಿ‌ ಮಾತನಾಡಿ, 'ಗ್ರಾಮದ ಸರ್ಕಾರಿ ಶಾಲೆಗಳಲ್ಲಿ‌ ಪ್ರಾಥಮಿಕ ‌ಮತ್ತು ಪ್ರೌಢ ಶಿಕ್ಷಣ ಪೂರೈಸಿ, ಗೌರಿಬಿದನೂರಿನ ಆಚಾರ್ಯ ಕಾಲೇಜಿನಲ್ಲಿ ‌ಪಿಯುಸಿ‌ ಹಾಗೂ ನ್ಯಾಷನಲ್‌ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದೇನೆ. ತಾಯಿಯ ಆಸೆಯಂತೆ ಸೇನೆಗೆ ಸೇರಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದೆ. ಬಳಿಕ ಅದೃಷ್ಟ ಒದಗಿ‌ ಬಂದಾಗ ಎಲ್ಲವೂ ಈಡೇರಿದೆ. ನನಗೆ ಈ ಅವಕಾಶ ಸಿಗಲು ತಾಯಿಯ ಕಠಿಣ ಪರಿಶ್ರಮವೇ ಕಾರಣ. ಇಂತಹ ತಾಯಿ‌ ಸಿಕ್ಕಿದ್ದು ನನ್ನ ಸೌಭಾಗ್ಯ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 20

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !