‘ಕರ್ನಾಟಕದ ಸಂಸ್ಕೃತಿಯ ಪ್ರತೀಕ ದಸರಾ’

7

‘ಕರ್ನಾಟಕದ ಸಂಸ್ಕೃತಿಯ ಪ್ರತೀಕ ದಸರಾ’

Published:
Updated:

ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮೈಸೂರಿನ ದಸರಾ ಮಹೋತ್ಸವಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ, ವಿಜಯದಶಮಿಯಂದು ನಡೆಯುವ ಪರಂಪರಾಗತ ಜಂಬೂಸವಾರಿ ಮೆರವಣಿಗೆ ನಾನಾ ಭಾಗಗಳಿಂದ ಸಾವಿರಾರು ಜನರನ್ನು ಸೆಳೆಯುತ್ತದೆ, ರಾಜಾಡಳಿತದ ಗತವೈಭವದೆಡೆಗಿನ ಜನಾಕರ್ಷಣೆಯನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವುದರ ದ್ಯೋತಕವಾದ ಈ ವೈಭವೋಪೇತ ಮೆರವಣಿಗೆಗೆ ಈ ಬಾರಿ ಚಾಲನೆನೀಡಲಿರುವ ಸುಧಾ ಮೂರ್ತಿ ಅವರೊಂದಿಗಿನ ಮಾತುಕತೆ ಇಲ್ಲಿದೆ

* ಎಂದಾದರೂ ಮೈಸೂರು ದಸರಾವನ್ನು ತಾವು ಉದ್ಘಾಟಿಸಬಹುದು ಎಂದೆನಿಸಿತ್ತೇ?

ಅಯ್ಯೋ, ಅಂದುಕೊಂಡೇ ಇರಲಿಲ್ಲ. ಗಂಗೂಬಾಯಿ ಹಾನಗಲ್, ನಿಸಾರ್ ಅಹಮದ್, ಬರಗೂರು, ಕಂಬಾರರಂಥ ಘಟಾನುಘಟಿಗಳೆಲ್ಲ ಆ ಕೆಲಸ ಮಾಡಿದ್ದನ್ನು ನೋಡಿ, ಎಷ್ಟು ಪುಣ್ಯವಂತರಪ್ಪಾ ಅಂದುಕೊಳ್ಳುತ್ತಿದ್ದೆ. ಎಂದಿಗೂ ಆಸೆಯನ್ನೇ ಪಟ್ಟಿರದಿದ್ದ ಈ ಅವಕಾಶ ನನಗೆ ಸಿಕ್ಕಿದ್ದರಿಂದ ಆಶ್ಚರ್ಯ, ಸಂತೋಷ ಎರಡೂ ಆಯಿತು.

* ಸದ್ಯದ ಸಾಂಸ್ಕೃತಿಕ ವಾತಾವರಣದಲ್ಲಿ ದಸರಾದ ಮಹತ್ವ ಎಂತಹದ್ದು? ಅದರ ಪ್ರಸ್ತುತತೆ ಏನು?

ದಸರಾ ಕೇವಲ ಹಬ್ಬ ಅಲ್ಲ, ನಾಡಿನ ಪ್ರತಿಯೊಬ್ಬರೂ ಸಂತೋಷದಿಂದ ಆಚರಿಸುವಂತಹ ನಾಡಹಬ್ಬ, ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ಅದು ಮಾಸಿ ಹೋಗುವಂಥದ್ದಲ್ಲ. ಅದನ್ನು ನಾವು ಉಳಿಸಿಕೊಳ್ಳಬೇಕು. ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಉತ್ಸವದ ಮಹತ್ವವನ್ನು ಮಕ್ಕಳಿಗೆ ತಿಳಿಸಲು ಶಾಲಾ ಪಠ್ಯಗಳಲ್ಲಿ ಅದನ್ನು ಅಳವಡಿಸಬೇಕು.

* ಶಕ್ತಿ ದೇವತೆಯ ಆರಾಧನೆಗೆ ಚಾಲನೆ ನೀಡಲಿರುವ ನೀವು, ನಾಡಿನ ತಾಯಂದಿರಿಗೆ ಶಕ್ತಿ, ಸ್ಥೈರ್ಯ ತುಂಬಲು ಸರ್ಕಾರಗಳಿಗೆ ನೀಡುವ ಸಲಹೆ ಏನು?

ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೆ ಹೆಣ್ಣು ಮಕ್ಕಳ ಬಗ್ಗೆ ಹೇಳುವುದಾದರೆ, ಅವರಲ್ಲಿ ಹೆಚ್ಚು ನಿರ್ವಹಣಾ ಸಾಮರ್ಥ್ಯ, ಬುದ್ಧಿ, ಬದ್ಧತೆ ಎಲ್ಲವೂ ಇರುತ್ತವೆ. ವಿಷಾದವೆಂದರೆ, ಎಷ್ಟೋ ಹೆಣ್ಣು ಮಕ್ಕಳಿಗೆ ಅದರ ಅರಿವೇ ಇರುವುದಿಲ್ಲ. ಶಕ್ತಿಯ ಬುಗ್ಗೆಯೇ ನಿಮ್ಮಲ್ಲಿದೆ. ಚಾಮುಂಡಿ ಅಂಥಾ ರಾಕ್ಷಸನನ್ನು ಕೊಂದಿದ್ದು ಒಂದು ದ್ಯೋತಕವಷ್ಟೆ. ನೀವು ಸಹ ದುಷ್ಟಶಕ್ತಿಯ ವಿರುದ್ಧ ಜಯ ಸಾಧಿಸಬಹುದು ಎನ್ನುವುದನ್ನು ಆ ಕಥನ ನಿಮಗೆ ಹೇಳುತ್ತದೆ. ಮೊದಲು ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಿ. ಆಗ ಪ್ರಗತಿ ಸಾಧ್ಯವಾಗುತ್ತದೆ.

* ಸಮಾಜದಲ್ಲಿ ಕೆಲವರಾದರೂ ಹೆಣ್ಣು ಮಕ್ಕಳು ಮುಂದೆ ಬಂದಿದ್ದಾರೆ ಎನಿಸುವುದೇ? ದೊಡ್ಡ ಹುದ್ದೆಗಳಲ್ಲಿ ಅವರ ಸಂಖ್ಯೆ ಇನ್ನೂ ಸಣ್ಣದಾಗಿಯೇ ಇರಲು ಕಾರಣವೇನು?

ಸಮಯ ಬೇಕಲ್ಲವೇ? ಸಾವಿರಾರು ವರ್ಷ ನೀವು ಅವರನ್ನು ಹತ್ತಿಕ್ಕಿದ್ದಾಗ ತಕ್ಷಣ ಹೊರಬರಲು ಹೇಗೆ ಸಾಧ್ಯ? ಶಿಕ್ಷಣ ಮಾತ್ರವಲ್ಲ ಧೈರ್ಯವೂ ಬೇಕು, ಮನೆಯವರ ಪ್ರೋತ್ಸಾಹವೂ ಇರಬೇಕು. ಇವೆಲ್ಲ ಇದ್ದರೆ ಮಾತ್ರ ಹೆಣ್ಣು ಮಕ್ಕಳು ಮುಂದೆ ಬರಲು ಸಾಧ್ಯ.

* ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಉಳಿವಿಗಾಗಿ ಏನು ಮಾಡಬೇಕು?

ಮೊದಲಿಗೆ, ಕನ್ನಡದವರು ಕನ್ನಡವನ್ನು ಪ್ರೀತಿಸುವುದು, ಕನ್ನಡ ಪುಸ್ತಕ ಕೊಂಡು ಓದುವುದನ್ನು ಕಲಿಯಬೇಕು. ಮಕ್ಕಳಿಗೆ ಕನ್ನಡದ ಮಹತ್ವದ ಮನವರಿಕೆ ಮಾಡಬೇಕು. ನಮ್ಮದೇ ಆದ ಸಂಸ್ಕೃತಿ ಕಾಪಾಡಿಕೊಳ್ಳುವುದನ್ನು ಕಲಿಯಬೇಕು. ಹಾಗಾದಾಗ ನಮ್ಮ ಭಾಷೆ ಉಳಿಯುತ್ತದೆ.

* ಸಾಹಿತಿಗಳು, ಬರಹಗಾರರ ಬರವಣಿಗೆ ಆಧರಿಸಿದ್ದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಧೋರಣೆಯ ಮಟ್ಟದಲ್ಲಿ ವಿಮರ್ಶೆ, ಟೀಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂಬ ಮಾತಿದೆ. ಒಬ್ಬ ಬರಹಗಾರರಾಗಿ ಇದನ್ನು ಹೇಗೆ ಸ್ವೀಕರಿಸುವಿರಿ?

ಟೀಕಿಸಲೇಬೇಕು ಎನ್ನುವ ಧೋರಣೆ ಇದ್ದಾಗ ನೀವು ಏನು ಮಾಡಿದರೂ ತಪ್ಪಾಗಿಯೇ ಕಾಣುತ್ತದೆ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ. ಇಂಥವರ ಮನೋಭಾವವನ್ನು ಬದಲಿಸುವುದು ಕಷ್ಟ. ಸಹೃದಯ ಸಾಹಿತ್ಯ, ಸಹೃದಯ ವಿಮರ್ಶೆ ಎಂದಿಗೂ ಒಳ್ಳೆಯದು.

* ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮತ್ತು ವ್ಯಭಿಚಾರ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಎರಡು ಪ್ರಮುಖ ತೀರ್ಪುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಒಬ್ಬೊಬ್ಬರಿಗೆ ಒಂದೊಂದು ಬಗೆಯ ನಂಬಿಕೆ ಇರುತ್ತದೆ. ಇದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಹೀಗಾಗಿ, ಇಂತಹ ವಿಷಯಗಳಲ್ಲಿ ನನ್ನ ವೈಯಕ್ತಿಕ ಅನಿಸಿಕೆ ಹೇಳುವ ಗೋಜಿಗೆ ನಾನು ಹೋಗುವುದಿಲ್ಲ.

* ಇನ್ಫೊಸಿಸ್ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಹಮ್ಮಿಕೊಂಡಿರುವ ಯೋಜನೆಗಳೇನು?

ದೇಶದಾದ್ಯಂತ ಈ ಕಾರ್ಯದಲ್ಲಿ ನಾವು ತೊಡಗಿದ್ದೇವೆ. ಹುಬ್ಬಳ್ಳಿ ಸಮೀಪದ ಲಕ್ಷ್ಮೇಶ್ವರದಲ್ಲಿ ಶಿಲ್ಪಕಲೆ ದೃಷ್ಟಿಯಿಂದ ಮಹತ್ವದ್ದಾದ, 1,400 ವರ್ಷಗಳ ಹಿಂದಿನ ದೇವಾಲಯವೊಂದಿದೆ. ನಾಡಿನ ಬೇರೆ ಬೇರೆ ರಾಜರು ಆಳಿದ, ದಾನ ಕೊಟ್ಟು ಬೆಳೆಸಿದ ದೇವಸ್ಥಾನ ಅದು. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರದವರು ಸೇರಿದಂತೆ ನಾಲ್ಕೂ ಮನೆತನದವರು ವಿಸ್ತರಣೆ ಮಾಡಿದ್ದ ದೇಗುಲ ಬಹಳ ಶಿಥಿಲಾವಸ್ಥೆಯಲ್ಲಿತ್ತು. 400 ಟ್ರಕ್ ಗಳಷ್ಟು ಕಸ ತುಂಬಿಕೊಂಡಿತ್ತು. ಐದಾರು ಕೋಟಿ ರೂಪಾಯಿ ಖರ್ಚು ಮಾಡಿ, ನಾಲ್ಕು ವರ್ಷಗಳ ಅವಧಿಯಲ್ಲಿ ಶಿಲ್ಪಕಲಾತ್ಮಕವಾಗಿ ಅದನ್ನು ಪುನರುತ್ಥಾನ ಮಾಡಿದ್ದೇವೆ. ಸರ್ಕಾರದ ನೆರವಿಲ್ಲದೆ ಪ್ರತಿ ಜನವರಿಯಲ್ಲಿ ಅಲ್ಲಿ 3 ದಿನಗಳ ಆಕರ್ಷಕ ಪುಲಿಗೆರೆ ಉತ್ಸವ ನಡೆಸುತ್ತೇವೆ.

ಪ್ರತಿಭೆ ಇದ್ದರೂ ಅವಕಾಶವಿಲ್ಲದ ಅನೇಕ ಕಲಾವಿದರಿಗೆ ಲಂಡನ್‌ನ ಭಾರತೀಯ ವಿದ್ಯಾಭವನದಲ್ಲಿ ಕಲಾ ಪ್ರದರ್ಶನಕ್ಕೆ ಅನುವಾಗುವಂತೆ ಖರ್ಚು ವೆಚ್ಚ ಭರಿಸುತ್ತೇವೆ. ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿ ದಂಡೆಯ ಮೇಲೆ ಅನುಪು ಎಂಬ ಊರಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಅಲ್ಲೊಂದು ಓಪನ್ ಏರ್ ಥಿಯೇಟರ್ ಇತ್ತು. ರೋಮನ್ನರ ಕಾಲದಲ್ಲಿ ನೃತ್ಯಗಳು ನಡೆಯುತ್ತಿದ್ದವು. ಆ ಸ್ಥಳವನ್ನು ಪುನರುತ್ಥಾನ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುವು ಮಾಡಿದ್ದೇವೆ. ಅಳಿದುಹೋಗುತ್ತಿರುವ ಕಲೆಗಳು, ಅಪರೂಪದ ಶಾಸನಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೊರತಂದಿದ್ದೇವೆ. ಬೆಂಗಳೂರಿನ ವಸಂತಪುರದ ವಸಂತವಲ್ಲಭದಲ್ಲಿ ಹಾಳು ಕೊಂಪೆಯಾಗಿದ್ದ ಕಲ್ಯಾಣಿಯನ್ನು 9 ಕೋಟಿ ರೂಪಾಯಿ ಖರ್ಚು ಮಾಡಿ ಪುನರುಜ್ಜೀವಗೊಳಿಸಿದ್ದೇವೆ.

* ಹೊಸದಾಗಿ ಏನು ಬರೆದಿದ್ದೀರಿ?

ಪುರಾಣ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗಾಗಿ ಸರಣಿ ಪುಸ್ತಕಗಳನ್ನು ಬರೆಯುತ್ತಿದ್ದೇನೆ. ಇದರಲ್ಲಿ ಮೂರನೆಯ ಪುಸ್ತಕದ ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ನನ್ನ ಪುಸ್ತಕಗಳನ್ನು ಮೊದಲು ಇಂಗ್ಲಿಷ್‌ನಲ್ಲಿ ಬರೆದು ನಂತರ ನಾನೇ ಕನ್ನಡಕ್ಕೆ ಅನುವಾದಿಸುತ್ತೇನೆ. ಇಂಗ್ಲಿಷ್‌ನಲ್ಲಿ ಟೈಪ್ ಮಾಡುವುದು ನನಗೆ ಸುಲಭ. ಕನ್ನಡದಲ್ಲಿ ಮಾತ್ರ ಇಂದಿಗೂ ನಾನು ಕೈಯಲ್ಲೇ ಬರೆಯುವುದು.

* ಸರಳತೆ ನಿಮ್ಮ ಮೂಲ ಗುಣವೇ ಅಥವಾ ಸಮಾಜಕ್ಕೆ ಏನಾದರೂ ಸಂದೇಶ ನೀಡುವ ಉದ್ದೇಶ ಅದರ ಹಿಂದಿದೆಯೇ?

ನಾವು ಹೆಚ್ಚೆಚ್ಚು ಸಂಕೀರ್ಣವಾಗಿ ಇದ್ದಷ್ಟೂ ನಮಗೇ ಕಷ್ಟ. ಈಸಿ ಟು ಲಿವ್ ಎಂಬಂತೆ ಇದ್ದಾಗ ನಿರಾಳವಾಗಿ ಬದುಕಬಹುದು. ಚಿನ್ನ ಕೂಡಿಟ್ಟು ಸೇಫ್ ಲಾಕರ್‌ನಲ್ಲಿ ಇಟ್ಟರೆ ಬೀಗದ ಕೈ ಎಲ್ಲಿಡುವುದು ಎಂಬ ಚಿಂತೆ. ಮನೆಯಲ್ಲಿ ಅದನ್ನು ಇಟ್ಟು ಹೊರಗೆ ಬಂದರೆ, ಬರುವಷ್ಟರಲ್ಲಿ ಏನಾಗಿಬಿಟ್ಟಿರುತ್ತದೋ ಎಂಬ ಚಿಂತೆ. ಮೈಮೇಲೆ ಹಾಕಿಕೊಂಡಿರುವುದಷ್ಟೇ ನಮ್ಮ ಪಾಲಿನ ಚಿನ್ನ ಎಂದಾದರೆ ಚಿಂತೆಗೆ ಆಸ್ಪದವಿರದು. ಇದ್ದಾಗ ಈರಭದ್ರ, ಇಲ್ಲದಾಗ ಇಲ್ಲ ಎಂಬಂತೆಯೇ ನಾವು ಬದುಕುತ್ತಾ ಬಂದಿದ್ದೇವೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !