ಶನಿವಾರ, ನವೆಂಬರ್ 16, 2019
22 °C
ಚಿತ್ರರಂಗ ಮರೆಯಲು ದೇವಿಕಾರಾಣಿ ನೆಲೆಸಿದ್ದ ಜಾಗದಲ್ಲೇ ಚಿತ್ರನಗರಿ: ಸರ್ಕಾರದಿಂದಲೇ ಕಾನೂನು ಉಲ್ಲಂಘನೆ?

ಮತ್ತೆ ಮುನ್ನೆಲೆಗೆ ಬಂತು ರೋರಿಚ್ ಎಸ್ಟೇಟ್‌

Published:
Updated:

ಬೆಂಗಳೂರು: ರೋರಿಚ್‌–ದೇವಿಕಾರಾಣಿ (ತಾತಗುಣಿ) ಎಸ್ಟೇಟ್‌ ಮತ್ತೊಮ್ಮೆ ಪ್ರಚಲಿತಕ್ಕೆ ಬಂದಿದೆ. ಇಲ್ಲಿ ಚಿತ್ರನಗರಿ ನಿರ್ಮಿಸುವ ವಿಷಯ ಈಗ ಮುನ್ನೆಲೆಗೆ ಬಂದಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಕನಕಪುರ ರಸ್ತೆಯಲ್ಲಿರುವ ಈ ಎಸ್ಟೇಟ್‌ ಹೆದ್ದಾರಿಯ ಎರಡೂ ಬದಿ ಚಾಚಿಕೊಂಡಿದೆ. 1994ರಲ್ಲಿ ದೇವಿಕಾರಾಣಿ ಮೃತಪಟ್ಟ ಬಳಿಕ ಬೆಲೆಬಾಳುವ ಈ ಭೂಮಿಯ ಮೇಲೆ ಹಲವರ ಕಣ್ಣು ಬಿದ್ದಿತ್ತು. ವಿವಾದ ಸುಪ್ರೀಂಕೋರ್ಟ್‌ ಮೆಟ್ಟಿಲನ್ನೂ ಏರಿತ್ತು. ನ್ಯಾಯಾಲಯದ ಆದೇಶದಂತೆ 1996ರಲ್ಲಿ ಸರ್ಕಾರ ಈ ಪ್ರದೇಶವನ್ನು ವಶಕ್ಕೆ ಪಡೆದಿದೆ.

ಈ ಎಸ್ಟೇಟ್‌ನ ಎಡಕ್ಕೆ ರೋರಿಚ್ ಮತ್ತು ದೇವಿಕಾರಾಣಿ ವಾಸವಿದ್ದ ಮನೆ ಇದೆ. ಪಾಳು ಬಿದ್ದಂತಿರುವ ಈ ಬಂಗಲೆಯನ್ನು ಬಂದ್ ಮಾಡಲಾಗಿದೆ. ಅದರ ಎಡಕ್ಕೆ ಅವರಿಬ್ಬರ ಸಮಾಧಿ, ಬಲಕ್ಕೆ ದೊಡ್ಡ ಆಲದ ಮರ ಇದೆ. ಈ ತೋಟ ಮತ್ತು ಮನೆಯ ಕಾವಲಿಗೆ ಪೊಲೀಸರಿದ್ದಾರೆ.

ಸಮಾಧಿಯ ಹಿಂದಕ್ಕೆ ರೋರಿಚ್ ಸ್ಟುಡಿಯೋ ಇದ್ದು, ಅದರಲ್ಲಿರುವ ವರ್ಣಚಿತ್ರಗಳು ಮತ್ತು ದಾಖಲೆಗಳ ಸಂರಕ್ಷಣೆಯ ಕೆಲಸವನ್ನು ತಮಿಳುನಾಡಿನ ತಂಡವೊಂದು ನಿರ್ವಹಿಸುತ್ತಿದೆ. ಸಿಸಿಬಿ ಪೊಲೀಸರು ಕಣ್ಗಾವಲಿದ್ದಾರೆ.

ಅತಿಥಿಗೃಹದ ದುರಸ್ತಿ ಕೆಲಸ ನಡೆಯುತ್ತಿದೆ. ಎದುರಿಗೆ ಗುಲಾಬಿ ತೋಟವೂ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ಸುವಾಸನಾ (ಬರ್ಸೆರಾ) ಎಣ್ಣೆ ತಯಾರಿಕಾ ಘಟಕದ ಕಟ್ಟಡ ಮತ್ತು ಅದರ ಎದುರಿಗೆ ಸರೋವರವೊಂದಿದೆ. ಎಸ್ಟೇಟ್‌ನಲ್ಲಿ ಲಿನಾಲೋ (ಬರ್ಸೆರಾ) ಮರಗಳನ್ನು ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಇದನ್ನು ಪ್ರವಾಸಿತಾಣವಾಗಿಸುವ ಕೆಲಸವನ್ನು ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್ ಮಂಡಳಿ ನಿಧಾನಗತಿಯಲ್ಲಿ ಮಾಡುತ್ತಿದೆ.

ಈ ಜಾಗದಲ್ಲೇ ಚಿತ್ರನಗರಿ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಕಟಿಸಿದ್ದಾರೆ. ಚಿತ್ರನಗರಿ ನಿರ್ಮಾಣ ಮಾಡುವುದು ಸುಪ್ರೀಂಕೋರ್ಟ್‌ ಆದೇಶಕ್ಕೆ ಮತ್ತು ರಾಜ್ಯ ಸರ್ಕಾರವೇ 1996ರಲ್ಲಿ ರೂಪಿಸಿರುವ ಕಾಯ್ದೆಯ ಉಲ್ಲಂಘನೆ ಆಗಲಿದೆ.

ಮೂಲಸ್ವರೂಪದಲ್ಲೇ ಎಸ್ಟೇಟ್‌ ಅನ್ನು ಕಾಪಾಡಬೇಕು. ವಶಪಡಿಸಿಕೊಂಡ ಉದ್ದೇಶ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಕಾಯ್ದೆ ಹೇಳುತ್ತಿದೆ. ಆನೆ ಕಾರಿಡಾರ್ ಕೂಡ ಆಗಿರುವ ಕಾರಣ ಈ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಆಗಲಿದೆ ಎನ್ನುತ್ತಾರೆ ವನ್ಯಜೀವಿ ಪ್ರೇಮಿಗಳು.

ಕಾಯ್ದೆ ಪ್ರಕಾರ ಮಂಡಳಿಗೆ ಇರುವ ಅಧಿಕಾರ ಮತ್ತು ಕರ್ತವ್ಯ

l ಎಸ್ಟೇಟ್‌ ನಿರ್ವಹಣೆ ಮಾಡಬೇಕು

l ರೋರಿಚ್ ಮತ್ತು ದೇವಿಕಾರಾಣಿ ಹೆಸರಿನಲ್ಲಿ ಆರ್ಟ್‌ ಗ್ಯಾಲರಿ ಒಳಗೊಂಡ ವಸ್ತು ಸಂಗ್ರಹಾಲಯ ನಿರ್ಮಿಸಬೇಕು

l ಸಾರ್ವಜನಿಕ ಉದ್ಯಾನ ನಿರ್ಮಿಸಿ ನಿರ್ವಹಣೆ ಮಾಡಬೇಕು. ಅಲ್ಲಿರುವ ಮರಗಳನ್ನು ಸಂರಕ್ಷಣೆ ಮಾಡಬೇಕು

l ಲಿನಾಲೋ(ಬರ್ಸೆರಾ) ಮರಗಳನ್ನು ಬೆಳೆಸಬೇಕು ಮತ್ತು ಸಂರಕ್ಷಿಸಬೇಕು

l ರೋರಿಚ್ ಮತ್ತು ದೇವಿಕಾ‌ರಾಣಿ ಅವರಿಗೆ ಸಂಬಂಧಿಸಿದ ಚಿತ್ರಗಳು, ಕಲಾಕೃತಿಗಳು ಮತ್ತು ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು

l ಆರ್ಟ್ ಗ್ಯಾಲರಿ ಮತ್ತು ಉದ್ಯಾನ ವೀಕ್ಷಣಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು. ಅಗತ್ಯವಿದ್ದರೆ ಟಿಕೆಟ್ ವ್ಯವಸ್ಥೆಯನ್ನೂ ಮಾಡಬಹುದು

ಯಾರಿದು ರೋರಿಚ್ ಮತ್ತು ದೇವಿಕಾರಾಣಿ

ಸ್ವೆಟಾಸ್ಲೋವ್ ರೋರಿಚ್ ರಷ್ಯಾದ ಚಿತ್ರ ಕಲಾವಿದ. ಅನೇಕ ವರ್ಷಗಳ ಕಾಲ ಭಾರತದಲ್ಲೇ ನೆಲೆಸಿದ್ದರು. ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿಶಾಖಪಟ್ಟಣದ ದೇವಿಕಾರಾಣಿ ಅವರನ್ನು 1945ರಲ್ಲಿ ಮದುವೆಯಾದರು.

ರೋರಿಚ್ ಅವರನ್ನು ಮದುವೆಯಾದ ನಂತರ ಚಿತ್ರರಂಗದ ಸಹವಾಸದಿಂದ ದೂರ ಉಳಿಯುಲು ನಗರದ ಹೊರವಲಯದ ತಾತಗುಣಿ ಗ್ರಾಮದ ಬಳಿ 468.33 ಎಕರೆ ಜಮೀನು ಖರೀದಿಸಿದ್ದರು. ಮಕ್ಕಳಿಲ್ಲದ ಈ ದಂಪತಿ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರು.

ಪ್ರತಿಕ್ರಿಯಿಸಿ (+)