ಬುಧವಾರ, ನವೆಂಬರ್ 13, 2019
22 °C
‘ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌ 2019’ ಉದ್ಘಾಟನೆ

ತಂತ್ರಜ್ಞಾನ ಕ್ಷೇತ್ರದತ್ತ ಯುವವಿಜ್ಞಾನಿಗಳ ಚಿತ್ತ

Published:
Updated:
Prajavani

ಬೆಂಗಳೂರು: ಭವಿಷ್ಯದ ಬುದ್ಧಿಮತ್ತೆ ಎಂದೇ ಬಿಂಬಿತವಾದ ಮಾನವ ಡಿಜಿಟಲೀಕರಣ, ಉಪಗ್ರಹ ತಂತ್ರಜ್ಞಾನ, ಭವಿಷ್ಯದ ಆಹಾರ ವ್ಯವಸ್ಥೆ, ಕೃಷಿ ಕ್ಷೇತ್ರದ ಆಧುನೀಕರಣ... ಮುಂತಾದ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳತ್ತ ಕುತೂಹಲದ ದೃಷ್ಟಿ ನೆಟ್ಟ ಯುವವಿಜ್ಞಾನಿಗಳ ಸಮೂಹವೇ ಅಲ್ಲಿ ಸೇರಿತ್ತು. ಈ ಕ್ಷೇತ್ರಗಳ ಹೇರಳ ಅವಕಾಶಗಳ ಕುರಿತು ಒಂದೇ ಸೂರಿನಡಿ ತಿಳಿಯುವ ಅಪೂರ್ವ ಅವಕಾಶ ವಿಜ್ಞಾನದ ವಿದ್ಯಾರ್ಥಿಗಳಿಗೆ ಒದಗಿತ್ತು.

ಇದಕ್ಕೆ ವೇದಿಕೆ ಕಲ್ಪಿಸಿದ್ದು ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌–2019’. ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು, ಅವುಗಳಿಗೆ ಅನುಗುಣವಾಗಿ ವಿದ್ಯಾರ್ಥಿ ಸಮೂಹ ಸಜ್ಜಾಗಬೇಕಾದ ಬಗೆ, ಇದಕ್ಕಿರುವ ಮಾರ್ಗೋಪಾಯಗಳ ಕುರಿತು ಚಿಂತನ ಮಂಥನ ನಡೆಯಿತು. ವಿವಿಧ ದೇಶಗಳ ತಂತ್ರಜ್ಞರು, ದೇಶದ ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ .ಸಿ.ಎನ್‌.ಅಶ್ವತ್ಥನಾರಾಯಣ್‌ ಸಮ್ಮೇಳನವನ್ನು ಉದ್ಘಾಟಿಸಿದರು.

ವೈಮಾಂತರಿಕ್ಷ ಕ್ಷೇತ್ರದ ಇತ್ತೀಚಿನ ಆವಿಷ್ಕಾರ, ರಾಡಾರ್‌ ತಂತ್ರಜ್ಞಾನ, ಮಾನವರಹಿತ ವಿಮಾನ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ವೈಮಾನಿಕ ಶೋಧಗಳ ವೈಜ್ಞಾನಿಕ ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಈ ಕ್ಷೇತ್ರಗಳ ಕುರಿತ ತಮ್ಮ ಕುತೂಹಲ ತಣಿಸಿಕೊಂಡರು.

‘ತಂತ್ರಜ್ಞಾನ ಕೇಂದ್ರವಾಗಿ ಕಾಲೇಜು’

‘ಶಿಕ್ಷಣ ಸಂಸ್ಥೆಗಳಲ್ಲಿ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ನಿರಂತರ ನಡೆಯುತ್ತಿರಬೇಕು. ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಕಾಲೇಜು ಹಾಗೂ ವಿಜ್ಞಾನ ಪದವಿ ಕಾಲೇಜುಗಳನ್ನು ತಂತ್ರಜ್ಞಾನದ ಕೇಂದ್ರಗಳನ್ನಾಗಿ ರೂಪಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರಗಳನ್ನು ಸರ್ಕಾರ ನೀಡಲಿದೆ’ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಪ್ರತಿಕ್ರಿಯಿಸಿ (+)