ಕಡಲ ತೀರದ ನಡಿಗೆ! ಹೋಗುವುದು ಹೇಗೆ?

7

ಕಡಲ ತೀರದ ನಡಿಗೆ! ಹೋಗುವುದು ಹೇಗೆ?

Published:
Updated:
Deccan Herald

ಒಡಿಶಾದ ಪುರಿ ನಗರದಲ್ಲಿರುವ ಯೂತ್‌ ಹಾಸ್ಟೆಲ್‌ ಅಸೋಸಿಯೇಷನ್‌ನಿಂದ ಬಂಗಾಳಕೊಲ್ಲಿಯ ಸಮುದ್ರತೀರದಲ್ಲಿ ಚಾರಣ ಆಯೋಜಿಸುತ್ತಿದ್ದಾರೆ. ಹಲವು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ನಾಲ್ಕು ದಿನಗಳ ಈ ಚಾರಣದಲ್ಲಿ ದಿನಕ್ಕೆ ಅಂದಾಜು 10 ಕಿ.ಮೀ  ಕಡಲತೀರದಲ್ಲಿ ನಡೆಯಬೇಕು. ಹಾಗಾಗಿ ನಡೆಯಲು ಸಾಧ್ಯ ಇರುವ ಹಾಗೂ ಆಸಕ್ತಿ ಉಳ್ಳವರಿಗೆ ಸಂತಸ ತರಬಲ್ಲ ಪರಿಸರ ನಡಿಗೆಯಿದು.

ಆನ್‌ಲೈನ್ ಮೂಲಕ ಅಥವಾ ಸ್ಥಳೀಯ ವೈಎಚ್‌ಎಐ ಘಟಕದ ಮೂಲಕ ಮುಂಗಡ ನೋಂದಣಿ ಮಾಡಿಕೊಂಡು, ನಿಗದಿತ ದಿನ ಒಡಿಶಾದ ಪುರಿಯಲ್ಲಿರುವ ವೈಎಚ್ಎಐ ತಲುಪಬೇಕು. ನೋಂದಣಿ ನಂತರ, ಯೂತ್ ಹಾಸ್ಟೆಲ್‌ ನಮ್ಮ ಕಾಳಜಿ ವಹಿಸುತ್ತದೆ. ಇಂಥದ್ದೇ ಕಡಲತೀರದ ಚಾರಣವೊಂದು 2016ರಲ್ಲಿ ನಡೆದಿತ್ತು. ಒಡಿಶಾ ರಾಜ್ಯದ ಪುರಿಯಿಂದ ಕೈಗೊಂಡಿದ್ದ ಈ ಚಾರಣದಲ್ಲಿ ನಾನು ಭಾಗವಹಿಸಿದ್ದೆ.

ಅಂದು ಪುರಿಯಲ್ಲಿರುವ ಯೂತ್ ಹಾಸ್ಟೆಲ್ ಕಚೇರಿ ತಲುಪಿದ ನಮ್ಮ ತಂಡವನ್ನು ಅಲ್ಲಿನ ಆಯೋಜಕರು ಆತ್ಮೀಯವಾಗಿ ಸ್ವಾಗತಿಸಿದರು. ಊಟ, ವಸತಿಯ ವ್ಯವಸ್ಥೆ ಮಾಡಿದರು. ಮುಂದಿನ ನಾಲ್ಕು ದಿನಗಳ ಚಾರಣದ ರೂಪುರೇಷೆಗಳನ್ನು ವಿವರಿಸಿದರು. ಚಾರಣದ ಸೊಬಗು, ಬರಬಹುದಾದ ತೊಂದರೆಗಳು, ಹಿಂದಿನ ತಂಡದಲ್ಲಾದ ಆದ ಅನುಭವಗಳು, ಪಾಲಿಸಬೇಕಾದ ನಿಯಮಾವಳಿಗಳು... ಹೀಗೆ ಪ್ರತಿ ಹಂತವನ್ನೂ ವಿವರಿಸಿದರು.

ಎಲ್ಲರಿಗೂ ಬೆನ್ನಿಗೆ ಹಾಕುವ ಕೆಂಪು ಬಣ್ಣದ ಚೀಲ, ಹೊದೆಯಲು ತೆಳುವಾದ ಬಟ್ಟೆ ಕೊಟ್ಟರು. ನಾಲ್ಕು ದಿನಗಳಿಗೆ ಅಗತ್ಯದ ಸಾಮಗ್ರಿಗಳನ್ನು ನಾವು ರಕ್‌ಸ್ಯಾಕ್‌ನಲ್ಲಿ ತುಂಬಿಸಿ, ಮಿಕ್ಕ ಲಗೇಜನ್ನು ಬೇರ್ಪಡಿಸಿಟ್ಟೆವು. ರಾತ್ರಿ ಊಟದ ನಂತರ ‘ಕ್ಯಾಂಪ್ ಫೈಯರ್’. ಇದು ತಂಡದ ಸದಸ್ಯರನ್ನು ಪರಸ್ಪರ ಪರಿಚಯಿಸಿಕೊಳ್ಳುವ ಸಮಯ. ಪರಿಚಯದ ನಂತರ ಹಾಸ್ಟೆಲ್‌ನ ಕೊಠಡಿಯ ಅನತಿ ದೂರದಲ್ಲಿದ್ದ ಬಂಗಾಳಕೊಲ್ಲಿಯ ದಡಕ್ಕಪ್ಪಳಿಸುವ ಅಲೆಗಳ ಜೋಗುಳವನ್ನಾಲಿಸುತ್ತ ಮಲಗಿದ ನಮಗೆಲ್ಲ ಸುಖನಿದ್ದೆ ಆವರಿಸಿತು. 

ಮೊದಲನೆಯ ದಿನ: ನೃಸಿಂಗಪಟ್ಣದತ್ತ: ಮೊದಲನೆಯ ದಿನದ ಚಾರಣಕ್ಕೆ ಚಾಲನೆ ಕೊಡುವ ಸಂದರ್ಭ.  ಉಪಾಹಾರ ಮುಗಿಸಿ, ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡು ನಡಿಗೆಗೆ ಸಿದ್ಧರಾದೆವು. ಆಯೋಜಕರು ಎಲ್ಲರಿಗೂ ಸ್ಪೂರ್ತಿ ತುಂಬುವ ಮಾತುಗಳಾಡುತ್ತಾ ಜನಗಣನೆ ಮಾಡಿಸಿದರು. ಎಲ್ಲರೂ ಬ್ಯಾಗ್‌ ಬೆನ್ನಿಗೇರಿಸಿಕೊಂಡು, ಎರಡು   ಸಾಲಿನಲ್ಲಿ ನಿಂತ ಮೇಲೆ, ನಡಿಗೆಗೆ ಹಸಿರು ನಿಶಾನೆ ಬಿತ್ತು. ಗುಂಪಾಗಿ ಪುರಿಯ ಮುಖ್ಯರಸ್ತೆಯೊಂದರ ಮೂಲಕ ನಡೆಯುತ್ತಾ ಸುಮಾರು 5 ಕಿ.ಮೀ ಸಮುದ್ರಕ್ಕೆ ಸಮಾನಾಂತರವಾಗಿ ನಡೆದೆವು. ಅಲ್ಲಿ ನದಿಯೊಂದು ಸಮುದ್ರವನ್ನು ಸೇರುವ ಸ್ಥಳ ಎದುರಾಯಿತು.

ಸಮುದ್ರದ ಅಲೆಗಳ ಏರಿಳಿತಕ್ಕೆ ಹೊಂದಿಕೊಂಡು ಹೆಜ್ಜೆ ಹಾಕಿದೆವು. ನೀರಿನ ಮಟ್ಟ ಹೆಚ್ಚು-ಕಡಿಮೆ ಇರುವುದರಿಂದ ಮಂಡಿಯಿಂದ ಸೊಂಟದವರೆಗೆ ನೀರು ಬರುವ ಸಾಧ್ಯತೆ ಇರುತ್ತಿತ್ತು. ಹಾಗಾಗಿ ಸ್ಥಳೀಯರೊಬ್ಬರ ಮಾರ್ಗದರ್ಶನದಲ್ಲಿ, ಖುಷಿ ಹಾಗೂ ಭಯದ ಉದ್ಗಾರಗಳ ನಡುವೆ ಎಲ್ಲರೂ ಸುರಕ್ಷಿತವಾಗಿ ಇನ್ನೊಂದು ದಡ ಸೇರಿದೆವು.  

ಸಮುದ್ರತೀರದ ಮರಳಿನಲ್ಲಿ ನಡೆಯಲು ಕಷ್ಟವಾಗುತ್ತದೆಯೆಂದು, ಒದ್ದೆಯಾಗಿದ್ದ ಮರಳಿನ ಮೇಲೆ ಹೆಜ್ಜೆ ಹಾಕಿದೆವು. ಇತರ ಬೀಚ್‌ಗಳಂತೆ  ಇಲ್ಲಿ ಜನ ಸಂಚಾರ ಇಲ್ಲ. ದೂರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಟ್ರಾಲರ್ ಬೋಟ್ ಕಾಣಿಸಿದ್ದು ಬಿಟ್ಟರೆ ಜನವಸತಿಯ ಕುರುಹೇ ಇಲ್ಲದ ಶಾಂತ ಹಾಗೂ ನಿರ್ಜನ ಕಡಲತೀರವಿದು. ಬೆಳಿಗ್ಗೆ ಉಕ್ಕಿ ಬರುತ್ತಿದ್ದ ಸಮುದ್ರದ ಅಲೆಗಳು ಮಧ್ಯಾಹ್ನವಾಗುತ್ತಿದ್ದಂತೆ ದೂರ ಸರಿಯುತ್ತಿದ್ದವು.

ನಮಗೂ ಆರಂಭದ ಉತ್ಸಾಹ ಸ್ವಲ್ಪ ಕಡಿಮೆಯಾಗಿ, ಮುಂದಿನ ಕ್ಯಾಂಪ್ ಇನ್ನೆಷ್ಟು ದೂರವಿದೆ ಎಂದು ಪರಸ್ಪರ ಕೇಳಲಾರಂಭಿಸಿದೆವು. ಅಷ್ಟರಲ್ಲಿ ಕ್ಯಾಂಪ್ ಲೀಡರ್‌ ನಮ್ಮನ್ನು ಸ್ವಾಗತಿಸಿ, ನಮ್ಮನ್ನು ನೃಸಿಂಗಪಟ್ಣ ಕ್ಯಾಂಪಿಗೆ ಕರೆದೊಯ್ದರು. ಕನಿಷ್ಠ ಸೌಲಭ್ಯಗಳಿದ್ದ ಆ ಊರಲ್ಲಿ, ನಮಗೆ ರುಚಿಯಾದ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಲು ಎಷ್ಟು ಶ್ರಮಪಟ್ಟಿದ್ದಾರೋ ಅನಿಸಿತು.

ಎರಡನೆಯ ದಿನ: ಲೂನಾಪಾನಿಯತ್ತ: ನೃಸಿಂಗಪಟ್ಣದ ಕ್ಯಾಂಪ್‌ ಮುಗಿಸಿ ಎರಡನೆಯ ದಿನ ‘ಲೂನಾಪಾನಿ’ಯತ್ತ ಹೆಜ್ಜೆ ಹಾಕಿದೆವು. ಅದು ‘ಅಪ್ಪಟ ಹಳ್ಳಿ’ಯ ಮನೆಗಳ ಗೋಡೆಗಳ ಮೇಲೆ ಸುಣ್ಣದಲ್ಲಿ ಮೂಡಿಸಿದ ಆಕರ್ಷಕ ಚಿತ್ತಾರಗಳಲ್ಲಿ ಸ್ಥಳೀಯರ ಕಲಾವಂತಿಕೆ ಎದ್ದು ಕಾಣುತ್ತಿತ್ತು. ಮೊದಲನೆಯ ದಿನದ ಚಾರಣದ ಅನುಭವವೇ ಇಲ್ಲೂ ಪುನರಾವರ್ತನೆಯಾಯಿತು. ಸಂಜೆವರೆಗೂ ಕಡಲ ಕಿನಾರೆಯುದ್ದಕ್ಕೂ ನಡೆದಾಗ ‘ಲೂನಾಪಾನಿ’ ಊರು ಸಿಕ್ಕಿತು. ಇಲ್ಲಿ ಎಡ ಬದಿಗೆ ವಿಶಾಲವಾದ ‘ಚಿಲ್ಕಾ’ ಸರೋವರವಿದೆ. ಇದು ಉಪ್ಪು ನೀರಿನ ಸರೋವರ.

ಬಲಬದಿಯಲ್ಲಿ ಬಂಗಾಳಕೊಲ್ಲಿ. ಇವೆರಡರ ನಡುವಿನ ಮರಳಿನಿಂದ ಕೂಡಿದ ನಡುಗುಡ್ಡೆಯಂತಹ ಜಾಗದಲ್ಲಿ ನಮ್ಮ ಶಿಬಿರವಿತ್ತು. ಕನ್ನಡ ಬಾವುಟವನ್ನು ನೆನಪಿಸುವ ಹಳದಿ-ಕೆಂಪು ಬಣ್ಣದ ಟೆಂಟ್ ಗಳು ಆಕರ್ಷಕವಾಗಿದ್ದುವು.  ಟೆಂಟ್‌ನಲ್ಲಿ ವಾಸ್ತವ್ಯದ ವಿಶಿಷ್ಟ ಅನುಭವ ಸಂತಸ ಕೊಟ್ಟಿತು.

ಮೂರನೆಯ ದಿನ: ‘ಗಭಾಗುಂಡ’ದ ಕಡೆಗೆ: ಲೂನಾಪಾನಿಯಲ್ಲಿ ಸುಂದರ ತಾಣ. ನಮ್ಮ ತಂಡದ ಕೆಲವು ಉತ್ಸಾಹಿಗಳು, ಬಂಗಾಳಕೊಲ್ಲಿಯಲ್ಲಿ ಆಗ ತಾನೇ ಮೂಡಿ ಬರುತ್ತಿದ್ದ ನೇಸರನಿಗೆ, ‘ಸೂರ್ಯನಮಸ್ಕಾರ’ಸಲ್ಲಿಸಿದರು. ಆ ದಿನ  ಎದುರುಗಡೆ ಕಾಣಿಸುತ್ತಿದ್ದ ಚಿಲ್ಕಾ ಸರೋವರದ ದಂಡೆಯುದ್ದಕ್ಕೂ ನಡೆದು ನಡೆದು ಸಂಜೆಯ ವೇಳೆಗೆ ಅಂದಿನ ಕ್ಯಾಂಪ್ ಇದ್ದ ‘ಗಭಾಗುಂಡ’ ಎಂಬಲ್ಲಿರುವ ಶಾಲೆಯೊಂದನ್ನು ತಲಪಿದೆವು.

ನಾಲ್ಕನೆಯ ದಿನ: ರಾಜಹಂಸ –ಬ್ರಹ್ಮಪುರ–ಮಾನ್ಸಿ: ಚಾರಣದ ನಾಲ್ಕನೆಯ ದಿನ, ರಂಬಾರ್ಟಿಯ ಎಂಬಲ್ಲಿಗೆ ದೋಣಿಯ ಮೇಲೆ ಪ್ರಯಾಣ. ಆಮೇಲೆ ರಾಜಹಂಸ, ಬ್ರಹ್ಮಪುರಗಳನ್ನು ಹಾದು ಹೋಗಿ  ಮಾನ್ಸಿ ಎಂಬ ಹಳ್ಳಿಗೆ ತಲುಪಿದೆವು. ಆಗ ಸಂಜೆಯಾಗಿತ್ತು. ಕಾಲಚಕ್ರವು  ಅನಾಮತ್ತು 40 ವರ್ಷ ಹಿಂದಕ್ಕೆ ಹೋದ ಹಾಗಾಯಿತು. ಸರಿಯಾದ ರಸ್ತೆ ಇಲ್ಲದ, ವಿದ್ಯುತ್ ಕಾಣದ ಹಳ್ಳಿ ಅದು. ಆಧುನಿಕ ಸವಲತ್ತುಗಳು ಅಭ್ಯಾಸವಾದ ನಮಗೆ, ಜೀವನಾನುಭವ ಬೇಕಿದ್ದರೆ ಈ ರೀತಿಯ ಚಾರಣ ಕೈಗೊಳ್ಳಬೇಕು.

ಅಂದು ಡಿಸೆಂಬರ್ 31 ಆಗಿದ್ದರಿಂದ, ರಾತ್ರಿ 12 ಗಂಟೆಗೆ ಸಹಚಾರಣಿಗರೊಂದಿಗೆ 2017 ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿದೆವು. ಮರುದಿನ ಬಸ್‌ನಲ್ಲಿ ಪುರಿಯಲ್ಲಿರುವ ಯೂಥ್ ಹಾಸ್ಟೆಲ್ ತಲುಪಿದೆವು. ಆಯೋಜಕರು ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಿಸಿದರು. ಕಡಲತೀರ ಚಾರಣ ಕೊನೆಗೊಂಡಿತು. ನಡಿಗೆಯಲ್ಲಿ ಜತೆಯಾದವರು, ಚಾರಣ ಮುಗಿಯುವವ ವೇಳೆಗೆ ಬಹಳ ಆಪ್ತರಾಗಿದ್ದರು. ಅವರೆಲ್ಲರಿಗೂ ಧನ್ಯವಾದ ತಿಳಿಸಿ, ವಿದಾಯ ಹೇಳಿ ಸವಿ ಸವಿನೆನಪುಗಳೊಂದಿಗೆ ಗೂಡಿಗೆ ಮರಳಿದೆವು.

ನೆನಪಿರಲಿ; ಚಾರಣವು ಪ್ರವಾಸದಷ್ಟು ಸುಲಭವಲ್ಲ. ಇಲ್ಲಿ ಆಡಂಬರವಿಲ್ಲ. ಆದರೆ ಕಾಳಜಿ ಇದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಎಂಬ ಹುಮ್ಮಸ್ಸುಳ್ಳ ಸಾಹಸಿ ಪ್ರವೃತ್ತಿಯವರಿಗೆ ಈ ನಡಿಗೆ ಪ್ರಿಯವಾಗುತ್ತದೆ.  

**

ಈ ಬಾರಿಯ ಕಡಲ ತೀರ ಚಾರಣ

ಈ ಬಾರಿಯ ಒಡಿಶಾ ಕಡಲತೀರ ಚಾರಣವು ಡಿಸೆಂಬರ್(2018) 16 ರಿಂದ 24ರ ವರೆಗೆ ನಡೆಯಲಿದೆ.  ಚಾರಣದ ಶುಲ್ಕ ₹4568. ಭಾಗವಹಿಸಲು ಆಸಕ್ತಿ ಇರುವವರು ಕೆಳಗಿನ ಜಾಲತಾಣ ಸಂಪರ್ಕಿಸಿ.

ಭಾಗವಹಿಸುವುದು ಹೇಗೆ?

ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್‌ ಇಂಡಿಯ (YHAI) ಸಂಸ್ಥೆಯು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು YHAI ಯ ಸದಸ್ಯರಾಗಿರಬೇಕು. ಆಸಕ್ತರು www.yhaindia.org ಜಾಲತಾಣಕ್ಕೆ ಭೇಟಿ ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಪದ್ಮನಾಭ ದಾವೆ : ಯೈ.ಎಚ್.ಎ.ಐ ಒಡಿಶಾ ಘಟಕ : 9437061774, ಗೋಪಮ್ಮ : ಯೈ.ಎಚ್.ಎ.ಐ ಮೈಸೂರು ಘಟಕ: 9449047132

**

ಐದು ದಿನ ಟ್ರಿಕ್ಕಿಂಗ್ ; ನಡಿಗೆಯ ದೂರ 43 ಕಿ.ಮೀ

ಪುರಿಯಿಂದ – ನೃಸಿಂಗಪಟ್ಣ – 12 ಕಿ.ಮೀ 
ನೃಸಿಂಗಪಟ್ಣ– ಲೂನಾಪಾನಿ - 14 ಕಿ.ಮೀ
ಲೂನಾಪಾನಿ –ಗಭಾಗುಂಡ –7 ಕಿ.ಮೀ (ದೋಣಿ ನಂತರ ನಡಿಗೆ)
ಗಭಾಗುಂಡ– ರಂಭಾರ್ಟಿಯ (ದೋಣಿ) ಆಮೇಲೆ ನಡಿಗೆ ರಾಜಹಂಸ (ಪುನಃ ದೋಣಿ) ‘ಮಾನ್ಸಿ’ : 7 ಕಿ.ಮೀ
ಮಾನ್ಸಿ– ಸಾತಪಡ 3 ಕಿ.ಮೀ

ದೋಣಿ ಪ್ರಯಾಣ ನಂತರ ಬಸ್ಸಿನಲ್ಲಿ ಪುರಿಗೆ ಹಿಂದಿರುಗುವುದು.

**

ಊಟ–ವಸತಿ ವ್ಯವಸ್ಥೆ

ವೈಎಚ್‌ಎಐ ಟ್ರಕ್ಕಿಂಗ್‌ನಲ್ಲಿ ಊಟದ ವ್ಯವಸ್ಥೆ ಉತ್ತಮವಾಗಿರುತ್ತದೆ. ಒರಿಸ್ಸಾ ಊಟದ ಜತೆಗೆ, ದಕ್ಷಿಣ ಭಾರತದ ಆಹಾರವನ್ನೂ ಪೂರೈಸುತ್ತಾರೆ. ಕ್ಯಾಂಪ್ ಫೈರ್ ವೇಳೆ ಬೋರ್ನ್ ವಿಟಾ ಕೊಡುತ್ತಾರೆ. (ಕ್ಯಾಂಪ್ ಫೈರ್ ನಲ್ಲಿ ‘ನಿಜವಾಗಿ’ ಬೆಂಕಿ ಉರಿಸುವುದಿಲ್ಲ. ಧೂಮಪಾನ/ಅಲ್ಕೋಹಾಲ್ ನಿಷೇಧವಿದೆ. ಯೂಥ್ ಹಾಸ್ಟೆಲ್‌ ನಿಯಮಾವಳಿಯಲ್ಲಿ ಇನ್ನಷ್ಟು ವಿವರಗಳು ಲಭ್ಯ).

ಏನೇನು ನೋಡಬಹುದು ?

ಚಾರಣದ ನಂತರವೂ ಸುತ್ತಾಡಬೇಕೆಂದರೆ, ಭುವನೇಶ್ವರ, ಪುರಿ ಸುತ್ತಾ ಸಾಕಷ್ಟು ಪ್ರವಾಸಿ ತಾಣಗಳಿವೆ.  ಪುರಿಯಲ್ಲಿ ಜಗನ್ನಾಥ ಮಂದಿರವಿದೆ. ಕಳಿಂಗ ಶಿಲ್ಪ ವೈಭವಕ್ಕೆ ಹೆಸರುವಾಸಿ. ಭುವನೇಶ್ವರದ ಸನಿಹದಲ್ಲಿ ಕೋನಾರ್ಕದ ಸೂರ್ಯ ಮಂದಿರ, ಲಿಂಗರಾಜ ದೇವಸ್ಥಾನ, ಉದಯಗಿರಿ- ಖಂಡಗಿರಿ ಗುಹೆಗಳು (ಇಲ್ಲಿ ಜೈನ ಮುನಿಗಳು ವಾಸವಾಗಿದ್ದರಂತೆ), ಧೌಲಗಿರಿ, ಮ್ಯೂಸಿಯಂ, ಚಿಲ್ಕಾ ಪಕ್ಷಿಧಾಮ ವೀಕ್ಷಿಸಬಹುದು. ಸ್ಥಳೀಯ ಟೂರಿಸ್ಟ್ ಏಜಂಟ್ ಗಳ ಮೂಲಕ ಮಾಹಿತಿ ಪಡೆದುಕೊಂಡು ಭೇಟಿ ಕೊಡಬಹುದು. ಊಟ – ವಸತಿಗಾಗಿ ಭುವನೇಶ್ವರ, ಪುರಿಯಲ್ಲಿ ಸಾಧಾರಣ ಎನ್ನವ ಹೋಟೆಲ್‌ಗಳಿವೆ. ಲಕ್ಸುರಿ ಹೋಟೆಲ್‌ಗಳೂ ಇವೆ. ಮಧ್ಯವರ್ಗಕ್ಕೆ ಅನುಕೂಲವಾಗುವ ವಸತಿ ಗೃಹಗಳಿವೆ.

ಪ್ರವಾಸಕ್ಕೆ ಹೋಗುವ ಮುನ್ನ ಯೂತ್ ಹಾಸ್ಟೆಲ್‌ ಕಚೇರಿಯಲ್ಲಿ ರೂಮ್ ಬುಕ್ ಮಾಡುವ ಅವಕಾಶವೂ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !